Monday, January 20, 2025
ಸುದ್ದಿ

ಅ.28ಕ್ಕೆ ನೆಹರುನಗರದ ರೈಲ್ವೇ ಮೇಲ್ಸೇತುವೆ ಅಗಲೀಕರಣಕ್ಕೆ ಟ್ವಿಟರ್ ಅಭಿಯಾನ – ಕಹಳೆ ನ್ಯೂಸ್

ಪುತ್ತೂರು: ಪುತ್ತೂರಿನ ನೆಹರುನಗರ ಅನೇಕ ಶಿಕ್ಷಣ ಪ್ರಿಯರ ನೆಚ್ಚಿನ ತಾಣ. ಯಾಕೆಂದರೆ ಶತಮಾನದ ಇತಿಹಾಸ ಇರುವ ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘ ನೆಹರುನಗರದ ವಿವೇಕಾನಂದ ಕ್ಯಾಂಪಸ್‌ನಲ್ಲಿ ಶಿಶುಮಂದಿರದಿಂದ ತೊಡಗಿ ಸ್ನಾತಕೋತ್ತರ ಕೇಂದ್ರಗಳವರೆಗೆ ಅನೇಕ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ. ಹಾಗಾಗಿಯೇ ಪುತ್ತೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಹರುನಗರದಲ್ಲಿ ಪ್ರತಿನಿತ್ಯ ಸರಿಸುಮಾರು ಎಂಟು ಸಾವಿರ ಮಂದಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಬಸ್ ಇಳಿದು ವಿವೇಕಾನಂದ ಕ್ಯಾಂಪಸ್ ಕಡೆ ಹೆಜ್ಜೆ ಹಾಕುತ್ತಾರೆ. ಹೀಗೆ ನೆಹರು ನಗರದಿಂದ ವಿವೇಕಾನಂದ ಕ್ಯಾಂಪಸ್ ಕಡೆ ಹೆಜ್ಜೆ ಹಾಕುವ ಸಂದರ್ಭದಲ್ಲಿ ನೆಹರುನಗರದಲ್ಲಿಯೇ ಇರುವ ರೈಲ್ವೇ ಮೇಲ್ಸೇತುವೆಯನ್ನು ಹಾದುಬರಬೇಕಾದ್ದು ಅನಿವಾರ್ಯ. ಆದರೆ ಈ ಮೇಲ್ಸೇತುವೆ ಈಗ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತಿದೆ.

ನೆಹರುನಗರದಿಂದ ವಿವೇಕಾನಂದ ಕ್ಯಾಂಪಸ್ ಗೆ ಬರುವ ರಸ್ತೆ ಕೇವಲ ವಿದ್ಯಾಸಂಸ್ಥೆಗಷ್ಟೇ ಸೀಮಿತವಲ್ಲ. ಬದಲಾಗಿ ಇದು ನೆಹರುನಗರದಿಂದ ಬನ್ನೂರು, ಪಡ್ಡಾಯೂರು, ಪಡೀಲು ಹೀಗೆ ನಾನಾ ಕಡೆಗಳನ್ನು ಸಂಪರ್ಕಿಸುವ ಸಾರ್ವಜನಿಕ ರಸ್ತೆ. ಅದರಲ್ಲೂ ಮಂಗಳೂರು ಭಾಗದಿಂದ ಉಪ್ಪಿನಂಗಡಿಗೆ ಹೋಗುವವರೂ ಇದೇ ರಸ್ತೆಯನ್ನು ಸಂಪರ್ಕ ರಸ್ತೆಯಾಗಿ ಬಳಸುತ್ತಾರೆ. ಈ ನಡುವೆ ಅಲ್ಲಲ್ಲಿ ಸಣ್ಣ ಊರುಗಳನ್ನು ಸಂಪರ್ಕಿಸುವ ಕಿರು ರಸ್ತೆಗಳೂ ಇವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹೀಗಾಗಿ ಈ ರಸ್ತೆಯಲ್ಲಿ ಎಂಟು ಸಾವಿರದಷ್ಟು ವಿದ್ಯಾರ್ಥಿಗಳಲ್ಲದೆ ಸಾಕಷ್ಟು ಸಂಖ್ಯೆಯ ಸಾರ್ವಜನಿಕರೂ ಓಡಾಟ ನಡೆಸುತ್ತಾರೆ. ವಿದ್ಯಾರ್ಥಿಗಳು, ವಿದ್ಯಾಸಂಸ್ಥೆಯ ಉದ್ಯೋಗಿಗಳು, ಮಾತ್ರವಲ್ಲದೆ ಸಾರ್ವಜನಿಕರ ಅಸಂಖ್ಯ ವಾಹನಗಳೂ ಸಂಚರಿಸುತ್ತಲೇ ಇರುತ್ತವೆ. ಇಷ್ಟು ಬೃಹತ್ ಪ್ರಮಾಣದ ಜನಸಂಖ್ಯೆ ಹಾಗೂ ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿನ ರೈಲ್ವೇ ಮೇಲ್ಸೇತುವೆಯ ಅಗಲ ಮಾತ್ರ ಕೇವಲ 12 ಫೀಟ್. ಸುಮಾರು 70 ಫೀಟ್ ಉದ್ದದ ಈ ಮೇಲ್ಸೇತುವೆಯ ಅಗಲ ರಸ್ತೆಯ ಅಗಲಕ್ಕಿಂತ ಅರ್ಧಕ್ಕಿಂತಲೂ ಕಡಿಮೆ ಎಂಬುದು ಗಮನಾರ್ಹ.

ಜಾಹೀರಾತು
ಜಾಹೀರಾತು
ಜಾಹೀರಾತು

ಹೀಗೆ ಮೇಲ್ಸೇತುವೆ ಕಿರಿದಾಗಿರುವುದರಿಂದ ಇಲ್ಲಿ ವಾಹನ ಸಂಚಾರ ಹಾಗೂ ಜನರ ಓಡಾಟಕ್ಕೆ ಅಡ್ಡಿಯಾಗುತ್ತಿದೆ. ಪರಿಣಾಮವಾಗಿ ಅನೇಕ ಸಂದರ್ಭಗಳಲ್ಲಿ ರಸ್ತೆ ಬ್ಲಾಕ್ ಆಗುತ್ತಲೇ ಇರುತ್ತದೆ. ಅದರಲ್ಲೂ ಮಳೆಗಾಲದಲ್ಲಂತೂ ಇಲ್ಲಿನ ಪರಿಸ್ಥಿತಿ ಯಾರಿಗೂ ಬೇಡ. ಒಂದೆಡೆ ಮಳೆ ನೀರು ತುಂಬಿ ಮೇಲ್ಸೇತುವೆಯ ರಸ್ತೆಯೇ ಮುಚ್ಚಿರುತ್ತದೆ. ಈ ನಡುವೆ ವಾಹನಗಳ ಓಡಾಟ. ಅಂತಹ ಸಂದರ್ಭದಲ್ಲಿ ನಡೆದಾಡುವವರ ಪಾಡು ಹೇಳತೀರದು. ಈ ನಡುವೆ ಬೆಳಗ್ಗೆ ಎಂಟೂವರೆಯಿಂದ ಒಂತ್ತರವರೆಗೆ ವಿದ್ಯಾಥಿಗಳ ಸಂಖ್ಯೆಯೂ ಹೆಚ್ಚಿರುವುದರಿಂದ ಈ ಮೇಲ್ಸೇತುವೆ ನಡೆದಾಡುವುದಕ್ಕೂ ಸಣ್ಣದೆನಿಸುತ್ತದೆ.

ಈ ಹಿನ್ನೆಲೆಯಲ್ಲಿ ಅದಾಗಲೇ ಮೇಲ್ಸೇತುವೆಯನ್ನು ಅಗಲಗೊಳಿಸುವಂತೆ ಸಾಕಷ್ಟು ಬಾರಿ ರೈಲ್ವೇ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಆದಾಗ್ಯೂ ಯಾವುದೇ ಪರಿಣಾಮವಾಗಿಲ್ಲ. ಅನೇಕ ಮಂದಿ ನಾಗರಿಕರು ಕೂಡ ರೈಲ್ವೇ ಇಲಾಖೆಗೆ ಈ ಬಗೆಗೆ ತಿಳಿಸಿಯೂ ಇರುತ್ತಾರೆ. ಆದರೂ ಪರಿಣಾಮ ಮಾತ್ರ ಶೂನ್ಯ.

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹಾಗೂ ರೈಲ್ವೇ ಇಲಾಖೆಯ ಗಮನ ಸೆಳೆಯುವ ದೃಷ್ಟಿಯಿಂದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್, ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ಸಂಘ ಹಾಗೂ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳು, ವಿವೇಕಾನಂದ ಪದವಿಪೂರ್ವ ಕಾಲೇಜು, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು, ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು, ವಿವೇಕಾನಂದ ಎಂ.ಬಿ.ಎ ಕಾಲೇಜುಗಳ ವಿದ್ಯಾರ್ಥಿ ಸಂಘ ಹಾಗೂ ಎಬಿವಿಪಿ ಘಟಕಗಳು ಹಾಗೂ ನಾಗರಿಕರ ವತಿಯಿಂದ ಅ.28 ರಂದು ಟ್ವಿಟರ್ ಅಭಿಯಾನ ಆಯೋಜಿಸಲಾಗಿದೆ.
ಅ.೨೮ರಂದು ವಿವೇಕಾನಂದ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ನಾಗರಿಕರೆಲ್ಲರೂ ಈ ಟ್ವಿಟರ್ ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ. ಪ್ರತಿಯೊಬ್ಬರೂ #RailBridgeWideBridge ಎಂಬ ಹ್ಯಾಷ್ ಟ್ಯಾಗ್‌ಲೈನ್ ನೊಂದಿಗೆ ತಮ್ಮ ಅಭಿಪ್ರಾಯ ಸೇರಿಸಿ

@RailMinIndia

@PiyushGoyaloffc

@Central_Railway

@narendramodi

@PMOindia

@DVSBJP

@nalinkateel

ಈ ಮೇಲಿನ ಎಲ್ಲಾ ವಿಳಾಸಕ್ಕೆ ಕಳುಹಿಸಿಕೊಡಲಾಗುತ್ತಿದೆ. ಈಗಾಗಲೇ ಈ ಟ್ವಿಟರ್ ಅಭಿಯಾನದ ಬಗೆಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗಿದೆ. ಇದರೊಂದಿಗೆ ನಾಗರಿಕರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದು ಅನಿವಾರ್ಯ. ಹಾಗಾಗಿ ಈ ಮೇಲ್ಸೇತುವೆಯ ಉಪಯೋಗಪಡೆಯುತ್ತಿರುವ ಎಲ್ಲರೂ ಈ ಅಭಿಯಾನದಲ್ಲಿ ಭಾಗವಹಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.

ಅಭಿಯಾನದಲ್ಲಿ ಪಾಲ್ಗೊಳ್ಳಲು ಏನು ಮಾಡಬೇಕು?
ಮೊದಲು ಟ್ವಿಟರ್ ಅಕೌಂಟ್ ತೆರೆಯಬೇಕು. ನಂತರ ಟ್ವಿಟರ್‌ನಲ್ಲಿ ಸೇತುವೆಯ ಅಗಲೀಕರಣದ ಬಗೆಗೆ ಕಿರಿದಾದ ಅಭಿಪ್ರಾಯವನ್ನು ಬರೆಯುವುದು. ಅಭಿಪ್ರಾಯದ ಕೊನೆಯಲ್ಲಿ #RailBridgeWideBridge ಎಂದು ನಮೂದಿಸಬೇಕು. ಸೇತುವೆಯ ಫೋಟೋ ಇದ್ದಲ್ಲಿ ಸೇರಸಬಹುದು. ನಂತರ ಮೇಲೆ ನೀಡಿದ ವಿಳಾಸಗಳಿಗೆ ಟ್ಯಾಗ್ ಮಾಡಬೇಕು.

ಹೆಚ್ಚಿನ ಮಾಹಿತಿಗೆ : ಲಿಖಿತ್ ಹುದೇರಿ, ಅಧ್ಯಕ್ಷರು, ವಿದ್ಯಾರ್ಥಿ ಸಂಘ, ವಿವೇಕಾನಂದ ಕಾಲೇಜು. ಮೊಬೈಲ್ : 9481265353
ರಕ್ಷಿತ್ ಕೆದಿಲಾಯ, ಅಧ್ಯಕ್ಷರು, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ವಿವೇಕಾನಂದ ಕಾಲೇಜು ಘಟಕ
ಮೊಬೈಲ್ : 7012443242, 7034419991