ವ್ಯಕ್ತಿತ್ವ ವಿಕಸನಕ್ಕೆ ಮೌಲ್ಯಾಧಾರಿತ ಶಿಕ್ಷಣವೇ ಅಡಿಪಾಯ – ಸ್ವಾಮಿ ವಿವೇಕ ಚೈತನ್ಯಾನಂದ – ಕಹಳೆ ನ್ಯೂಸ್
ಪುತ್ತೂರು, : ಇಂದು ಭಾರತ ಬದಲಾವಣೆಯತ್ತ ಗಮನ ಹರಿಸುತ್ತಿದೆಯಾದರೂ ನಾವು ಆಧ್ಯಾತ್ಮಿಕವಾಗಿ ಬದಲಾಗುತ್ತಿದ್ದೇವೆಯೇ ಎಂಬುದನ್ನು ನಾವೇ ಪ್ರಶ್ನಿಸಿಕೊಳ್ಳಬೇಕಾದ ಪರಿಸ್ಥತಿ ಇದೆ. ಭಾರತೀಯರು ಸನಾತನ ಧರ್ಮಿಗಳು. ನಮಗೆ ಆದಿಯೂ ಇಲ್ಲ, ಅಂತ್ಯವೂ ಇಲ್ಲ. ಪ್ರತಿಯೊಂದು ಮಾನವನ ಜನ್ಮ ಭಗವಂತನ ಸಾಕ್ಷಾತ್ಕಾರವಾಗಿದೆ. ನಾವು ಯಾವುದೇ ಜಾತಿ-ಮತದ ಹಂಗಿಲ್ಲದೆ ಸತ್ಯ- ಧರ್ಮದಿಂದ ಬದುಕಿ ಇತರರಿಗೆ ಮಾದರಿಯಾಗಬೇಕು ಎಂದು ಪೊಳಲಿಯ ರಾಮಕೃಷ್ಣ ತಪೋವನದ ಅಧ್ಯಕ್ಷ ಸ್ವಾಮಿ ವಿವೇಕಚೈತನ್ಯಾನಂದ ಹೇಳಿದರು.
ಇವರು ವಿವೇಕಾನಂದ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು, ಇಲ್ಲಿನ ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ್ರ, ವಿವೇಕಾನಂದ ಸಂಶೋಧನಾ ಕೇಂದ್ರ, ಭಾರತೀಯ ಸಂಸ್ಕೃತಿ ಮತ್ತು ಲಲಿತ ಕಲೆಗಳ ಅಧ್ಯಯನ ಕೇಂದ್ರ ಹಾಗೂ ಐಕ್ಯೂಎಸಿ ಘಟಕ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟç ಸಂತ ಸ್ವಾಮಿ ವಿವೇಕಾನಂದರ ಕುರಿತಾದ ಚಿಂತನೆಗಳ ಮೂರನೇ ಉಪನ್ಯಾಸ ಮಾಲಿಕೆ “ವಿವೇಕ ಸ್ಮೃತಿ” ಕಾರ್ಯಕ್ರಮದ ಮುಖ್ಯ ಉಪನ್ಯಾಸಕರಾಗಿ ಆಗಮಿಸಿ ವಿವೇಕಾನಂದರು ಮತ್ತು ಶಿಕ್ಷಣ ಎಂಬ ವಿಷಯದ ಕುರಿತು ಮಾತನಾಡಿದರು.
ವಿವೇಕಾನಂದರ ತತ್ವ ಚಿಂತನೆಗಳನ್ನು ತಿಳಿಸಿಕೊಡುವುದಕ್ಕೆ ಗಂಟೆಗಳೋ, ದಿನಗಳೋ ಸಾಕಾಗುವುದಿಲ್ಲ. ವಿವೇಕಾನಂದರು ಎಲ್ಲರಿಗೂ ಆದರ್ಶ. ಯುವಕರೆಂದರೆ ಹೇಗಿರಬೇಕು ಎಂದು ಕೇಳಿದರೆ ವಿವೇಕಾನಂದರAತೆ ಇರಬೇಕು ಎನ್ನುತ್ತೇವೆ. ವಿವೇಕಾನಂದರದ್ದು ಅಂತಹ ವ್ಯಕ್ತಿತ್ವ. ಶಿಕ್ಷಣ ಕೇವಲ ಉದ್ಯೋಗಕ್ಕಾಗಿಯಲ್ಲ ವ್ಯಕ್ತಿಯ ಪರಿಪೂರ್ಣತೆಗೆ ಅಡಿಪಾಯವಿದ್ದಂತೆ ಎಂದು ವಿವೇಕಾನಂದರು ಹೇಳಿದ್ದಾರೆ. ಜೊತೆಗೆ ವಿದ್ಯಾಭ್ಯಾಸವೆನ್ನುವುದು ನಮ್ಮೊಳಗಿನ ಶಕ್ತಿಯನ್ನು, ಪರಿಪೂರ್ಣತೆಯನ್ನು ಜಾಗೃತಗೊಳಿಸುತ್ತದೆ. ವಿದ್ಯಾರ್ಥಿಯಾದವನಿಗೆ ಆತ್ಮವಿಶ್ವಾಸ ಮತ್ತು ಶ್ರದ್ದೆಯಿದ್ದರೆ ಬದುಕಿನಲ್ಲಿ ಉನ್ನತ ಮಟ್ಟಕ್ಕೆ ಏರಲು ಸಾಧ್ಯ. ಏಕಾಗ್ರತೆಗಿರುವ ಶಕ್ತಿ ಅಂತದ್ದು. ಪ್ರತಿಯೊಬ್ಬರೂ ವಿಶಾಲ ಹೃದಯಿಗಳಾಗಿ, ದೃಡ ನಿರ್ಧಾರವನ್ನು ಕೈಗೊಳ್ಳುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಇತಿಹಾಸ ವಿಭಾಗದ ಮುಖ್ಯಸ್ಥ ಹಾಗೂ ವಿಶೇಷಾಧಿಕಾರಿ ಡಾ. ಶ್ರೀಧರ್ ನಾಯ್ಕ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ನಾವು ಆಧ್ಯಾತ್ಮಿಕ ಚಿಂತನೆಗಳ ಕಡೆಗೆ ಗಮನ ಹರಿಸಬೇಕು. ಅಂತಹ ಆಧ್ಯಾತ್ಮಿಕ ಭಾವದಿಂದಲೇ ಇಂದು ಭಾರತದಲ್ಲಿ ರಾಷ್ಟç ಭಕ್ತಿ ಜೀವಂತವಾಗಿರುವುದು. ಅಂತೆಯೇ ನಾವು ಎಲ್ಲೇ ಹೋದರೂ ನಮ್ಮ ನಿಲುವನ್ನು, ವ್ಯಕ್ತಿತ್ವವನ್ನು ಬದಲಾಯಿಸದೆ ನಾವಾಗಿ ಬದುಕಬೇಕು. ವಿದ್ಯಾಭ್ಯಾಸ ಎನ್ನುವಂತಹದ್ದು ಅಂಕಗಳಿಗಾಗಿಯೋ, ಉದ್ಯೋಗಕ್ಕಾಗಿಯೋ ಮಾತ್ರ ಸೀಮಿತವಾಗದೆ, ಸಮಾಜದ ಒಳಿತಿಗಾಗಿ ಸೀಮಿತವಾಗಬೇಕು ಎಂದು ನುಡಿದರು.
ವೇದಿಕೆಯಲ್ಲಿ ಸ್ನಾತ್ತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕ ಹಾಗೂ ಪರೀಕ್ಷಾಂಗ ಕುಲಸಚಿವ ಡಾ. ಎಚ್ ಜಿ ಶ್ರೀಧರ್, ಸ್ನಾತ್ತಕೋತ್ತರ ವಿಭಾಗದ ಡೀನ್ ಹಾಗೂ ವಿವೇಕಾನಂದ ಸಂಶೋಧನ ಕೇಂದ್ರದ ನಿರ್ದೇಶಕಿ ಡಾ. ವಿಜಯ ಸರಸ್ವತಿ ಬಿ, ಭಾರತೀಯ ಸಂಸ್ಕೃತಿ ಮತ್ತು ಲಲಿತ ಕಲೆಗಳ ಅಧ್ಯಯನ ಕೇಂದ್ರದ ಸಂಯೋಜಕಿ ಹಾಗು ಸಮಾಜ ಶಾಸ್ತçದ ಮುಖ್ಯಸ್ಥೆ ವಿದ್ಯಾ ಎಸ್, ಉಪಸ್ಥಿತರಿದ್ದರು.