ಮಂಗಳೂರು ನಗರ ದಕ್ಷಿಣ ಬಿಜೆಪಿ ನೇತೃತ್ವದಲ್ಲಿ ಹಂಪನಕಟ್ಟೆಯಿಂದ ಕ್ಲಾಕ್ ಟವರ್ ವರೆಗೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ – ಕಹಳೆ ನ್ಯೂಸ್
ಮಂಗಳೂರು : “ಕಾಂಗ್ರೆಸ್ ಡೇಂಜರ್”, “ಪಿಕ್ ಪಾಕೆಟ್ ಕಾಂಗ್ರೆಸ್”, “ಕೊಟ್ಟಿದ್ದಕ್ಕಿಂತ ದೋಚಿದ್ದೇ ಜಾಸ್ತಿ” ಇತ್ಯಾದಿ ಬರಹಗಳಿರುವ ಭಿತ್ತಿ ಪತ್ರಗಳನ್ನು ಹಿಡಿದುಕೊಂಡು ಮಂಗಳೂರು ನಗರ ದಕ್ಷಿಣ ಬಿಜೆಪಿ ನೇತೃತ್ವದಲ್ಲಿ ನಗರದ ಹಂಪನಕಟ್ಟೆಯಿಂದ ಕ್ಲಾಕ್ ಟವರ್ ವರೆಗೆ ಮಾನವ ಸರಪಳಿಯನ್ನು ರಚಿಸಿ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ವಿರುದ್ಧ ಭಿತ್ತಿ ಪತ್ರಗಳನ್ನು ಹಿಡಿದುಕೊಂಡು ಘೋಷಣೆ ಕೂಗುತ್ತಾ ವಿನೂತನ ರೀತಿಯಲ್ಲಿ ಪ್ರತಿಭಟನೆಯನ್ನು ನಡೆಸಲಾಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಶಾಸಕ ವೇದವ್ಯಾಸ್ ಕಾಮತ್ ಅವರು, ಬಹಿರಂಗ ಪ್ರಚಾರಕ್ಕೆ ಇಂದು ಕೊನೆಯ ದಿನವಾಗಿದ್ದು, ಮತದಾನ ಮಾಡಲು ಹೋಗುವ ಮೊದಲು ಜಿಲ್ಲೆಯ ಜನತೆ ಕಾಂಗ್ರೆಸ್ ಸರ್ಕಾರದ ದುರಾಡಳಿತವನ್ನು ಮತ್ತೊಮ್ಮೆ ನೆನಪಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಈ ವಿನೂತನ ಶೈಲಿಯ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಕಾಂಗ್ರೆಸ್ ಈಗಾಗಲೇ ರಾಜ್ಯದ ಆರ್ಥಿಕ ಸ್ಥಿತಿಯನ್ನು ಹಳ್ಳ ಹಿಡಿಸಿದ್ದು ಇವರ ಕೈಗೆ ದೇಶವನ್ನು ಕೊಟ್ಟರೆ ಯಾವ ಗತಿಗೆ ಕೊಂಡೊಯ್ಯಬಹುದು? ರಾಜ್ಯದಲ್ಲಿ ಹೆಣ್ಣು ಮಕ್ಕಳ ಸುರಕ್ಷತೆಯ ಬಗ್ಗೆ ಆತಂಕ ಹೆಚ್ಚಾಗಿದ್ದು, ದಿನೇ ದಿನೇ ಮತಾಂಧರ ಹಾವಳಿ ಹೆಚ್ಚಾಗುತ್ತಿದೆ. ಬಾಂಬ್ ಬ್ಲಾಸ್ಟ್ ಪ್ರಕರಣಗಳು, ಪಾಕ್ ಪರ ಘೋಷಣೆಗಳು ಇವೆಲ್ಲವೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವ ಸಂಕೇತವಾಗಿದೆ. ಈ ಬಾರಿ ಮತ ಚಲಾಯಿಸುವಾಗ ಇವೆಲ್ಲವನ್ನು ಯೋಚಿಸಿ ಮತ ಚಲಾಯಿಸಿ ಎಂದು ಜನತೆಯಲ್ಲಿ ಶಾಸಕರು ಮನವಿ ಮಾಡಿದರು
ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ, ಲೋಕಸಭಾ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ರಮೇಶ್ ಕಂಡೆಟ್ಟು, ವಿಜಯ್ ಕುಮಾರ್ ಶೆಟ್ಟಿ, ರಮೇಶ ಹೆಗ್ಡೆ, ಜಗದೀಶ್ ಶೇಣವ, ಸುದರ್ಶನ್ ಮೂಡಬಿದಿರೆ, ಕ್ಯಾ. ಗಣೇಶ್ ಕಾರ್ಣಿಕ್, ಪೂರ್ಣಿಮಾ, ಶಕೀಲಾ ಕಾವ, ಪೂರ್ಣಿಮಾ ರಾವ್ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.