ಧರ್ಮ, ರಾಷ್ಟ್ರೀಯತೆ, ಹಿಂದುತ್ವಕ್ಕೆ ಬೆಂಬಲವಾಗಿ ನಿಲ್ಲುವವರನ್ನೇ ಬೆಂಬಲಿಸೋಣ; ಬೈಂದೂರಿನ ವಿವಿಧ ಧಾರ್ಮಿಕ ಕ್ಷೇತ್ರಗಳ ಮುಖಂಡರೊAದಿಗೆ ಡಾ. ಕಲಡ್ಕ ಪ್ರಭಾಕರ್ ಭಟ್ ಸಭೆ-ಕಹಳೆ ನ್ಯೂಸ್
ಬೈಂದೂರು: ಹಿಂದುಗಳ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಮೇಲೆ ಬಹಳ ಆತಂಕಕಾರಿ ಅಪಾಯಗಳು ಎದುರಾಗುತ್ತಿವೆ. ನಮ್ಮ ಧಾರ್ಮಿಕ ಕೇಂದ್ರಗಳನ್ನು ಹಾಗೂ ಧರ್ಮವನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ರಾಷ್ಟ್ರೀಯತೆ, ಹಿಂದುತ್ವ, ಹಿಂದೂ ಧರ್ಮ, ಭಾರತೀಯ ವಿಚಾರಧಾರೆಯನ್ನು ರಕ್ಷಣೆ ಮಾಡಬಲ್ಲ ಪಕ್ಷವನ್ನೇ ಈ ಚುನಾವಣೆಯಲ್ಲಿ ಗೆಲ್ಲಿಸುವ ತೀರ್ಮಾನ ಮಾಡುವಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರಾದ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಕರೆ ನೀಡಿದರು.
ಗುರುವಾರ ಬೈಂದೂರಿನ ಶ್ರೀ ಅಂಬಿಕಾ ಇಂಟರ್ನ್ಯಾಷನಲ್ ಹೋಟೆಲ್ ನಲ್ಲಿ ನಡೆದ ಬೈಂದೂರಿನ ವಿವಿಧ ಧಾರ್ಮಿಕ ಕ್ಷೇತ್ರಗಳ ಮುಖಂಡರು, ಭಜನಾ ತಂಡಗಳನ್ನು ಕಟ್ಟಿ ಬೆಳೆಸಿದವರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಬಾರಿ ಅತಿ ಹೆಚ್ಚು ಮತದಾನ ಆಗುವಂತೆ ನೋಡಿಕೊಳ್ಳಬೇಕು ಮತ್ತು ನಮ್ಮ ಆಯ್ಕೆಯು ಸರಿಯಾದ ರೀತಿಯಲ್ಲಿ ಇರಬೇಕು. ದೇಶ, ಧರ್ಮವನ್ನು ಬೆಂಬಲಿಸುವವರನ್ನೇ ನಾವು ಆಯ್ಕೆ ಮಾಡುವಂತೆ ಆಗಬೇಕು. ನಮ್ಮ ಧಾರ್ಮಿಕ ಕೇಂದ್ರಗಳನ್ನು ಉಳಿಸುವವರಿಗೆ ಮತ ನೀಡಬೇಕು. ಧಾರ್ಮಿಕ ಕೇಂದ್ರದ ಆಸ್ತಿ, ಧಾರ್ಮಿಕ ಕೇಂದ್ರಕ್ಕೆ ಬರುವ ಅನುದಾನ, ಆದಾಯವನ್ನು ಬೇರೆಯವರಿಗೆ ಹಂಚಿಕೆ ಮಾಡಲು ಮುಂದಾದವರನ್ನು ನಾವು ಎಂದಿಗೂ ಬೆಂಬಲಿಸದಿರೋಣ ಎಂದು ಹೇಳಿದರು.
ನಾವು ಅಥವಾ ನಮ್ಮ ಶ್ರದ್ಧಾ ಕೇಂದ್ರಗಳು, ಧಾರ್ಮಿಕ ಕೇಂದ್ರಗಳು ದುರ್ಬಲವಾದರೆ ಭವಿಷ್ಯ ಸಾಕಷ್ಟು ಕಷ್ಟಮಯವಾಗಲಿದೆ. ಹೀಗಾಗಿ ಯಾರು ಧರ್ಮವನ್ನು ಉಳಿಸುತ್ತಾರೋ ಧರ್ಮ ಅವರನ್ನು ಉಳಿಸುತ್ತದೆ. ಯಾರು ದೇವರು, ದೇವಸ್ಥಾನಗಳನ್ನು ಉಳಿಸುತ್ತಾರೋ ಅವರನ್ನು ದೇವರು, ದೇವಸ್ಥಾನಗಳು ಖಂಡಿತವಾಗಿ ಉಳಿಸುತ್ತದೆ. ಈ ನಿಟ್ಟಿನಲ್ಲಿ ಯೋಚನೆ ಮಾಡಿ ಮತದಾನ ಮಾಡೋಣ ಎಂದರು.
ಕಳೆದ ಹತ್ತು ವರ್ಷದಲ್ಲಿ ದೇಶದಲ್ಲಿ ಸಾಕಷ್ಟು ಸಕಾರಾತ್ಮಕ ಬದಲಾವಣೆಗಳು ಆಗಿವೆ. ಭಾರತೀಯರ ಶತ ಶತಮಾನಗಳ ಕನಸಾದ ಭವ್ಯ ರಾಮಮಂದಿರ ಅಯೋಧ್ಯೆಯಲ್ಲಿ ನಿರ್ಮಾಣವಾಗಿದೆ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ. ಈ ಮಧ್ಯೆ ಕೆಲವರು ನಮ್ಮ ಸಂಪತ್ತಿನ ಹಂಚಿಕೆಯ ಬಗ್ಗೆಯೂ ಮಾತನಾಡಿದ್ದಾರೆ. ಹೀಗಾಗಿ ದೇಶದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯ ಮತ್ತು ನಮ್ಮ ವಿರುದ್ಧವಾಗಿ ನೀಡಿರುವ ಅನೇಕ ಹೇಳಿಕೆಗಳು. ಇದೆಲ್ಲವನ್ನು ಗಮನಿಸಿಕೊಂಡು ಸರಿಯಾದ ಪಕ್ಷಕ್ಕೆ ಮತ ನೀಡುವ ನಿರ್ಧಾರ ಮಾಡೋಣ ಎಂದರು.
ವಿವಿಧ ಧಾರ್ಮಿಕ ಕ್ಷೇತ್ರ ಹಾಗೂ ಸಮುದಾಯಗಳ ಮುಖಂಡರಾದ ಚಂದ್ರಶೇಖರ ಶೆಟ್ಟಿ, ಆನಂದ ಮಡಿವಾಳ, ರಾಮಕೃಷ್ಣ ಶೇರಿಗಾರ್, ರಾಜೇಶ್ ನಾಯ್ಕ್, ಕಳಿ ಚಂದ್ರ ಆಚಾರ್, ಸುರೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಜಯಾನಂದ ಹೋಬಳಿದಾರ್ ಸ್ವಾಗತಿಸಿ, ನಿರೂಪಿಸಿದರು. ಗೋಪಾಲ ನಾಡ ವಂದಿಸಿದರು.