ಎನ್ನೆಂಸಿ ನೇಚರ್ ಕ್ಲಬ್ ವತಿಯಿಂದ ಗ್ರಾಫಿಕ್ ಡಿಸೈನಿಂಗ್ ಮತ್ತು ಕಂಟೆಂಟ್ ಮೇಕಿಂಗ್ ಮಾಹಿತಿ ಕಾರ್ಯಗಾರ ಹಾಗೂ ಸಂವಾದ ಕಾರ್ಯಕ್ರಮ– ಕಹಳೆ ನ್ಯೂಸ್
ಸುಳ್ಯ : ನೆಹರೂ ಮೆಮೋರಿಯಲ್ ಕಾಲೇಜಿನ ನೇಚರ್ ಕ್ಲಬ್ ವತಿಯಿಂದ ಗ್ರಾಫಿಕ್ ಡಿಸೈನಿಂಗ್ ಮತ್ತು ಕಂಟೆಂಟ್ ಮೇಕಿಂಗ್ ವಿಚಾರವಾಗಿ ಮಾಹಿತಿ ಕಾರ್ಯಗಾರ ಹಾಗೂ ಸಂವಾದ ಕಾರ್ಯಕ್ರಮ ಕಾಲೇಜಿನ ದೃಶ್ಯ ಶ್ರವಣ ಸಭಾಂಗಣದಲ್ಲಿ ನಡೆಯಿತು.
ಸುಳ್ಯದ ಪ್ರತಿಭಾನ್ವಿತ ಯೂ ಟ್ಯೂಬರ್ ಹಾಗೂ ಪೋಸ್ಟರ್ ಡಿಸೈನರ್ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ವಿದ್ಯಾರ್ಥಿ ಮುರಳಿ ಕೃಷ್ಣ ವೈ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಕಾಲೇಜಿನ ಜೀವವಿಜ್ಞಾನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಗ್ರಾಫಿಕ್ ಡಿಸೈನಿಂಗ್ ಮತ್ತು ಕಂಟೆಂಟ್ ಮೇಕಿಂಗ್ ಮಾಡುವುದರ ಬಗ್ಗೆ ಪ್ರಾಯೋಗಿಕವಾಗಿ ಮೊಬೈಲ್ ಅಥವಾ ಕಂಪ್ಯೂಟರ್ ಬಳಸಿ ಫೋಟೋ ವಿಡಿಯೋ ಎಡಿಟಿಂಗ್ ಮಾಡುವುದನ್ನು ತಿಳಿಸಲಾಯಿತು.
ಹಾಗೆ ತನ್ನ ಸ್ನೇಹಿತರಿಗೆ ಈ ಸಂಬಂಧಿತ ಅವಕಾಶಗಳ ಬಗ್ಗೆ ಹೇಳಿ ತೊಡಗಿಕೊಳ್ಳುವಂತೆ ಪ್ರೇರೇಪಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ ಎಂ, ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಅವಧಿಯಲ್ಲಿಯೇ ಸಮಯಾವಕಾಶ ಸಿಕ್ಕಾಗ ಫೋಟೋ ವೀಡಿಯೋ ಎಡಿಟಿಂಗ್ ಮತ್ತು ಭಿತ್ತಿ ಪತ್ರ ತಯಾರಿಕೆಯಲ್ಲಿ ತೊಡಗಿಸಿಕೊಂಡು ಆದಾಯ ಪಡೆಯಬಹುದು ಮತ್ತು ಈ ಕ್ಷೇತ್ರದಲ್ಲಿ ಸಿಗುವ ಉದ್ಯೋಗ ಅವಕಾಶಗಳ ಸದುಪಯೋಗ ಪಡೆದುಕೊಳ್ಳುವಂತೆ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಲೇಜಿನ ನೇಚರ್ ಕ್ಲಬ್ ಸಂಯೋಜಕ ಕುಲದೀಪ್ ಪೆಲ್ತಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥೆ ಅಕ್ಷತಾ ಬಿ, ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಹರ್ಷಕಿರಣ ಬಿ ಉಪಸ್ಥಿತರಿದ್ದರು. ಅಂತಿಮ ಜೀವವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕು. ಕೀರ್ತಿಕಾ ನಿರೂಪಿಸಿ, ವಂದಿಸಿದರು. ಕಾಲೇಜಿನ ವಿವಿಧ ವಿಭಾಗಗಳ ಉಪನ್ಯಾಸಕರು, ವಿದ್ಯಾರ್ಥಿ ಸಂಘದ ನಾಯಕ ಜೋಸ್ಬಿನ್ ಬಾಬು, ನೇಚರ್ ಕ್ಲಬ್ ಸದಸ್ಯರು ಮತ್ತು ಬೋಧಕೇತರ ಸಿಬ್ಬಂದಿಗಳು ಸಹಕರಿಸಿದರು