ರಾಷ್ಟ್ರೀಯ ಹೆದ್ದಾರಿ ಮಂಗಳೂರು – ಬೆಂಗಳೂರು ಮಧ್ಯೆ ನೂತನವಾಗಿ ನಿರ್ಮಾಣವಾಗುತ್ತಿರುವ ಪಾಣೆಮಂಗಳೂರು ಅಂಡರ್ ಪಾಸ್ ನ ಮೇಲೆ ವಾಹನ ಸಂಚಾರಕ್ಕೆ ತಾತ್ಕಾಲಿಕ ಅವಕಾಶ – ಕಹಳೆ ನ್ಯೂಸ್
ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ಮಂಗಳೂರು – ಬೆಂಗಳೂರು ಮಧ್ಯೆ ನೂತನವಾಗಿ ನಿರ್ಮಾಣವಾಗುತ್ತಿರುವ ಪಾಣೆಮಂಗಳೂರು ಅಂಡರ್ ಪಾಸ್ ನ ಮೇಲೆ ತಾತ್ಕಾಲಿಕವಾಗಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾದ ಬಗ್ಗೆ ವರದಿಯಾಗಿದೆ.
ಬಿಸಿರೋಡಿನಿಂದ ಅಡ್ಡಹೊಳೆವರೆಗೆ ಚತುಷ್ಪತ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಈ ನಡುವೆ ಹೆದ್ದಾರಿಯ ಪಾಣೆಮಂಗಳೂರು ಮೆಲ್ಕಾರ್,ಮಾಣಿ ,ಬುಡೋಳಿ ಸಮೀಪದ ಸತ್ತಿಕಲ್ಲು ಹಾಗೂ ಉಪ್ಪಿನಂಗಡಿಯಲ್ಲಿ ಅಂಡರ್ ಪಾಸ್ ಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಕಲ್ಲಡ್ಕ ಒಂದು ಕಡೆಯಲ್ಲಿ ಪ್ಲೈ ಓವರ್ ನಿರ್ಮಾಣದ ಕಾಮಗಾರಿ ಭರದಿಂದ ಸಾಗುತ್ತಿದೆ. ಇದರ ಮಧ್ಯೆ ಇನ್ನೇನು ಕೆಲವು ದಿನಗಳಲ್ಲಿ ಮಳೆಗಾಲ ಆರಂಭವಾಗುತ್ತದೆ.ಇದಕ್ಕೆ ಮೊದಲು ಅಂಡರ್ ಪಾಸ್ ಹಾಗೂ ಪ್ಲೈ ಓವರ್ ಪಕ್ಕದಲ್ಲಿ ಜನರ ಸಂಚಾರಕ್ಕೆ ಒದಗಿಸಲಾದ ಸರ್ವೀಸ್ ರಸ್ತೆಯನ್ನು ದುರಸ್ತಿ ಮಾಡಬೇಕಾದ ಅನಿವಾರ್ಯತೆ ಗುತ್ತಿಗೆ ವಹಿಸಿಕೊಂಡ ಕೆ.ಎನ್.ಆರ್.ಸಿ.ಕಂಪೆನಿ ಮೇಲಿದೆ. ಸರ್ವೀಸ್ ರಸ್ತೆಯ ದುರಸ್ತಿ ಮಾಡಿಕೊಡಿ ಎಂದು ವರ್ತಕರುಅನೇಕ ಬಾರಿ ರೋಡಿಗಿಳಿದು ಪ್ರತಿಭಟನೆ ಮಾಡಿದ್ದಾರೆ.
ತ್ತೀಚಿಗೆ ಕಲ್ಲಡ್ಕದಲ್ಲಿ ಹದಗೆಟ್ಟ ಸರ್ವೀಸ್ ರಸ್ತೆಯನ್ನು ರಿಪೇರಿಮಾಡಿ ಸಂಚಾರಕ್ಕೆ ಅನುಕೂಲ ಮಾಡಿಕೊಡಿ, ದೂಳು ಕೆಸರಿನ ಸಮಸ್ಯೆಯಿಂದ ನಮಗೆ ಮುಕ್ತಿ ನೀಡಿ ಎಂದು ಒತ್ತಾಯ ಮಾಡಿದ್ದರು. ಇದೀಗ ಕಂಪೆನಿಯವರಿಗೆ ವಿಧಿಯಿಲ್ಲದೆ, ಅಪಾಯಕಾರಿ ಸನ್ನಿವೇಶದಲ್ಲಿ ಅನಿವಾರ್ಯವಾಗಿ ಪಾಣೆಮಂಗಳೂರು ಅಂಡರ್ ಪಾಸ್ ನ ಮೇಲೆ ಒಂದು ಭಾಗದಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಿದ್ದಾರೆ.
ಬಿಸಿರೋಡಿನಿಂದ ಮೆಲ್ಕಾರ್ ಕಡೆಗೆ ವಾಹನಗಳು ಅಂಡರ್ ಪಾಸ್ ಮೇಲೆ ಸಂಚಾರ ಮಾಡುತ್ತಿದೆ. ಇಲ್ಲಿನ ಸರ್ವೀಸ್ ರಸ್ತೆಯ ಕಾಮಗಾರಿಯನ್ನು ನಡೆಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕಂಪೆನಿಯವರು ತಿಳಿಸಿದ್ದಾರೆ. ಆದರೆ ಅತ್ಯಂತ ಡೇಂಜರ್ ಝೋನ್ ಇದಾಗಿದ್ದು,ಸ್ವಲ್ಪ ಎಚ್ಚರ ತಪ್ಪಿದರೂ ವಾಹನಗಳು ಆಳೆತ್ತರದ ಗುಂಡಿಗೆ ಬೀಳಬಹುದು. ಅಪಾಯವಂತೂ ಕಟ್ಟಿಟ್ಟ ಬುತ್ತಿಯಾಗಿದ್ದು, ಜಾಗರೂಕತೆಯಿಂದ ಸಂಚಾರ ಮಾಡಬೇಕಾಗಿದೆ.