ತೆಲುಗಿನ ‘ತ್ರಿನಯನಿ’ ಧಾರಾವಾಹಿಯಲ್ಲಿ ಜನಪ್ರಿಯರಾಗಿರುವ ಕನ್ನಡತಿ ಪವಿತ್ರ ಜಯರಾಂ ಅಪಘಾತದಲ್ಲಿ ಸ್ಥಳದಲ್ಲೇ ಸಾವಿಗೀಡಾದ ಘಟನೆ ನಡೆದಿದೆ.
ಆಂಧ್ರಪ್ರದೇಶದ ಕರ್ನೂಲು ಸಮೀಪದಲ್ಲಿ ಇಂದು (ಮೇ.12) ಮುಂಜಾನೆ ಅಪಘಾತವಾಗಿದೆ. ಮೆಹಬೂಬ್ ನಗರದಲ್ಲಿ ಪವಿತ್ರಾ ಪ್ರಯಾಣಿಸುತ್ತಿದ್ದ ಕಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡ ನಟಿ ಸ್ಥಳದಲ್ಲೇ ಸಾವನಪ್ಪಿದ್ದಾರೆ.
ಪವಿತ್ರಾ ಅವರು ಕನ್ನಡದ ʻರೋಬೊ ಫ್ಯಾಮಿಲಿʼ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟಿದ್ದ ಪವಿತ್ರ ಮೂಲತಃ ಮಂಡ್ಯ ತಾಲೂಕಿನ ಹನಕೆರೆಯವರು. ನಟಿ ರೋಬೊ ಫ್ಯಾಮಿಲಿ, ಜೋಕಾಲಿ, ನೀಲಿ, ರಾಧಾರಮಣ ಧಾರವಾಹಿಯಲ್ಲಿ ನಟಿಸಿದ್ದಾರೆ. ನಟಿ ಕರ್ನಾಟಕದಲ್ಲಿ ಹುಟ್ಟಿದ್ದರೂ ಕೂಡ ಹೆಚ್ಚು ಫೇಮಸ್ ಆದದ್ದು ತೆಲುಗಿನ ‘ತ್ರಿನಯನಿ’ ಧಾರಾವಾಹಿಯಿಂದ. ಈ ಬಗ್ಗೆ ನಟಿ ಈ ಹಿಂದೆ ಮಾಧ್ಯಮವೊಂದರಲ್ಲಿ ಹೇಳಿಕೊಂಡಿದ್ದರು.
ನಾನು ಹುಟ್ಟಿ ಬೆಳೆದದ್ದು ಕರ್ನಾಟಕದಲ್ಲಿ. ಆದರೆ ಕನ್ನಡಕ್ಕಿಂತ ನನಗೆ ಹೆಚ್ಚು ಹೆಸರು ಕೊಟ್ಟಿದ್ದು ತೆಲುಗು. ‘ತ್ರಿನಯನಿ’ ಧಾರಾವಾಹಿ ಮುಂಚೆ ಅನೇಕ ಕನ್ನಡ ಧಾರಾವಾಹಿಯಲ್ಲಿ ನಟಿಸಿದ್ದರು ಅಷ್ಟಾಗಿ ಫಾಲೋವರ್ಸ್ ಇರಲಿಲ್ಲ. ಆದರೆ ‘ತ್ರಿನಯನಿ’ ಧಾರಾವಾಹಿ ಕನ್ನಡದಲ್ಲಿಯೂ ಡಬ್ ಆಗುತ್ತಿತ್ತು. ಹೀಗಾಗಿ ಕನ್ನಡದಲ್ಲಿಯೂ ತುಂಬಾ ಫ್ಯಾನ್ ಪೇಜ್ಗಳು ಶುರುವಾದವು ಎಂದಿದ್ದರು.