ಪಾಣೆಮಂಗಳೂರು ಅಂಡರ್ ಪಾಸ್ ಮೇಲೆ ಮೇಲತ್ಸುವೆಯಲ್ಲಿ ತಾತ್ಕಾಲಿಕವಾಗಿ ನೀಡಿದ್ದ ಸಂಚಾರಕ್ಕೆ ಒಂದೇ ದಿನದಲ್ಲಿ ಬ್ರೇಕ್ – ಕಹಳೆ ನ್ಯೂಸ್
ಬಂಟ್ವಾಳ: ಸರ್ವೀಸ್ ರಸ್ತೆಯ ಕಾಮಗಾರಿ ನಡೆಸುವ ಉದ್ದೇಶದಿಂದ ಪಾಣೆಮಂಗಳೂರು ಅಂಡರ್ ಪಾಸ್ ಮೇಲೆ ಮೇಲತ್ಸುವೆಯಲ್ಲಿ ತಾತ್ಕಾಲಿಕವಾಗಿ ನೀಡಿದ್ದ ಸಂಚಾರಕ್ಕೆ ಒಂದೇ ದಿನದಲ್ಲಿ ಬ್ರೇಕ್ ಬಿದ್ದಿದೆ.
ಬಿಸಿರೋಡಿನಿಂದ ಅಡ್ಡಹೊಳೆವರೆಗೆ ಚತುಷ್ಪತ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಪಾಣೆಮಂಗಳೂರು ಎಂಬಲ್ಲಿ ಪೇಟೆಗೆ ಜನರ ಸಂಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಅಂಡರ್ ಪಾಸ್ ನಿರ್ಮಾಣ ಮಾಡಲಾಗಿದೆ. ಇದರ ಕಾಮಗಾರಿ ನಡೆಯುತ್ತಿದ್ದು ಅಂತಿಮ ಹಂತವನ್ನು ತಲುಪುವ ಮೊದಲೇ ಮೇಲ್ಸೇತುವೆಯಲ್ಲಿ ವಾಹನ ಸಂಚಾರಕ್ಕೆ ಮೇ.10 ರಾತ್ರಿಯಿಂದ ಅವಕಾಶ ನೀಡಲಾಗಿತ್ತು.
ಮಳೆ ಬರುವ ಮುನ್ನ ಹದಗೆಟ್ಟ ಸರ್ವೀಸ್ ರಸ್ತೆಯನ್ನು ದುರಸ್ತಿ ಮಾಡುವ ಅವಸರದಲ್ಲಿ ಇನ್ನೂ ಪೂರ್ತಿಯಾಗದಿರುವ ಮೇಲ್ಸೆತುವೆಯಲ್ಲಿ ವಾಹನ ಸಂಚಾರಕ್ಕೆ ತಾತ್ಕಾಲಿಕ ಅವಕಾಶ ನೀಡಲಾಗಿತ್ತು.
ಆದರೆ ಗುತ್ತಿಗೆ ವಹಿಸಿಕೊಂಡ ಕಂಪೆನಿಗೆ ಸರ್ವೀಸ್ ರಸ್ತೆಯ ಕಾಮಗಾರಿ ನಡೆಸುವುದು ಅನಿವಾರ್ಯವಾಗಿತ್ತು, ಇದು ನಿಜವಾದರೂ ಇನ್ನೂ ಮೇಲ್ಸೇತುವೆಯ ತಡೆಗೋಡೆ ಕಾಮಗಾರಿ ನಡೆಯದೆ ಇದ್ದುದರಿಂದ ವಾಹನ ಸಂಚಾರ ಮಾಡಿದರೆ ಅಪಾಯವಂತೂ ಕಟ್ಟಿಟ್ಟ ಬುತ್ತಿಯಾಗಿದೆ ಎಂದು ವರದಿ ಬಿತ್ತರಿಸಿದ್ದೇವು.
ಒಂದು ಚೂರು ಜವಬ್ದಾರಿ ಮರೆತು ಡ್ರೈವಿಂಗ್ ಮಾಡಿದರೂ ಆಳೆತ್ತರದ ಗುಂಡಿಗೆ ಬಿದ್ದು ಪ್ರಾಣ ಹಾನಿಯಾಗುವುದಂತು ಗ್ಯಾರಂಟಿ ಎಂದು ಸಾರ್ವಜನಿಕ ವಲಯದಲ್ಲಿ ಹೇಳಲಾಗುತ್ತಿತ್ತು.
ಈ ಬಗ್ಗೆ ಮಾಧ್ಯಮದಲ್ಲಿ ವರದಿ ಬಂದ ಕೂಡಲೇ ಮೇ.11 ರಂದು ಸಂಜೆ ವೇಳೆ ಮೇಲ್ಸೇತುವೆಯಲ್ಲಿ ಸಂಚಾರಕ್ಕೆ ತಡೆ ಮಾಡಿದ್ದಾರೆ. ಇದೀಗ ಮತ್ತೆ ಸರ್ವೀಸ್ ರಸ್ತೆಯಲ್ಲಿಯೇ ವಾಹನಗಳು ಓಡಾಟ ನಡೆಸುವುತ್ತಿವೆ.