ಇಂದು ಮಧ್ಯಾಹ್ನದ ವೇಳೆಗೆ ರೇವಣ್ಣ ರಿಲೀಸ್; ಜೈಲಿನ ಬಳಿ ಪೊಲೀಸ್ ಬಿಗಿ ಭದ್ರತೆ – ಕಹಳೆ ನ್ಯೂಸ್
ಬೆಂಗಳೂರು: ಮಹಿಳೆ ಅಪಹರಣ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ, ಜೆಡಿಎಸ್ ಶಾಸಕ ಎಚ್.ಡಿ ರೇವಣ್ಣಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಜಾಮೀನು ನೀಡಿದೆ. ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ರೇವಣ್ಣ ರಿಲೀಸ್ ಆಗಲಿದ್ದಾರೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹಲವು ಷರತ್ತುಗಳನ್ನ ವಿಧಿಸಿ ಬೇಲ್ ಮಂಜೂರು ಮಾಡಿದೆ. ಜಾಮೀನಿಗೆ ಇಬ್ಬರ ಶ್ಯೂರಿಟಿ, 5 ಲಕ್ಷ ರೂಪಾಯಿ ಬಾಂಡ್, ಸಾಕ್ಷಿ ನಾಶಕ್ಕೆ ಮುಂದಾಗಬಾರದು, ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿಗೆ ಹೋಗಬಾರದು, ಸಂತ್ರಸ್ತೆಯರಿಗೆ ಬೆದರಿಕೆ ಹಾಕಬಾರದು, ಎಸ್‌ಐಟಿ ತನಿಖೆಗೆ ಸಹಕರಿಸಬೇಕು ಅನ್ನೋ ಷರತ್ತುಗಳನ್ನ ವಿಧಿಸಿದೆ. ಇಂದು ಮಧ್ಯಾಹ್ನ 3 ಗಂಟೆ ವೇಳೆಗೆ ರೇವಣ್ಣ ಬಿಡುಗಡೆ ಆಗಲಿದ್ದಾರೆ
ಜೈಲಿನ ಬಳಿ ಪೊಲೀಸ್ ಬಿಗಿ ಭದ್ರತೆ
ಇಂದು ಎಚ್.ಡಿ ರೇವಣ್ಣ ಜೈಲಿನಿಂದ ಬಿಡುಗಡೆ ಹಿನ್ನೆಲೆ ಜೈಲು ಬಳಿ ಜೆಡಿಎಸ್ ಕಾರ್ಯಕರ್ತರು ಹೆಚ್ಚಾಗಿ ಸೇರುವ ಸಾಧ್ಯತೆ ಇದೆ. ಹೀಗಾಗಿ ಜೈಲಿನ ರಸ್ತೆಯಲ್ಲಿ ಡಿಸಿಪಿ ನೇತೃತ್ವದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. 3 ಜನ ಎಸಿಪಿ, 6 ಜನ ಇನ್ಸ್ಪೆಕ್ಟರ್, 20 ಜನ ಸಬ್ ಇನ್ಸ್ಪೆಕ್ಟರ್ ಸೇರಿ 250 ಸಿಬ್ಬಂದಿ ನಿಯೋಜಿಸಲಾಗಿದೆ.
ಜೈಲಿನ ಬಳಿ ಬೆಂಬಲಿಗರ ಸಂಭ್ರಮ
ರೇವಣ್ಣಗೆ ಜಾಮೀನು ಮಂಜೂರಾಗ್ತಿದ್ದಂತೆ ಬೆಂಬಲಿಗರ ಸಂಭ್ರಮ ಮುಗಿಲು ಮುಟ್ಟಿತ್ತು. ಪರಪ್ಪನ ಅಗ್ರಹಾರ ಜೈಲಿನ ಬಳಿ ಜಮಾಯಿಸಿದ ರೇವಣ್ಣ ಆಪ್ತರು ಹಾಗೂ ಜೆಡಿಎಸ್ ಕಾರ್ಯಕರ್ತರು ಜೈಕಾರ ಕೂಗಿ ಸಂತಸ ವ್ಯಕ್ತಪಡಿಸಿದ್ರು.
ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲೂ ರೇವಣ್ಣ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ರು. ಗಾಂಧಿ ವೃತ್ತದಲ್ಲಿ ರೇವಣ್ಣ ಬೆಂಬಲಿಗರ ಸಂಭ್ರಮಾಚರಣೆ ವೇಳೆ ಹೈಡ್ರಾಮಾ ನಡೆದಿದೆ.
ಸಂಭ್ರಮಾಚರಣೆಗೆ ನಡೆಸ್ತಿದ್ದ ರೇವಣ್ಣ ಬೆಂಬಲಿಗರು, ಪೊಲೀಸರ ಜೊತೆ ವಾಗ್ವಾದ ನಡೆಯಿತು. ಪೊಲೀಸರ ಕಣ್ತಪ್ಪಿಸಿ ಪಟಾಕಿ ಹೊಡೆಯಲು ಯತ್ನಿಸ್ತಿದ್ದವರನ್ನ ನಿಯಂತ್ರಿಸಲು ಪೊಲೀಸರ ಹರ ಸಾಹಸಪಟ್ರು. ಇನ್ನು ಘಟನೆ ಹಿನ್ನೆಲೆ ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನ ನಿಯೋಜಿಸಲಾಗಿದ್ದು, ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ.
ಚಾಮುಂಡಿ ಬೆಟ್ಟದಲ್ಲಿ ಸಿಹಿ ಹಂಚಿ ಸಂಭ್ರಮ
ಮೈಸೂರಲ್ಲೂ ರೇವಣ್ಣ ಅಭಿಮಾನಿಗಳ ಸಂಭ್ರಮಾಚರಣೆ ಮಾಡಿದರು. ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ, 101 ಈಡುಗಾಯಿ ಒಡೆದು ಹರಕೆ ಸಲ್ಲಿಸಿದರು. ಚಾಮುಂಡಿ ಬೆಟ್ಟದ ಭಕ್ತರಿಗೆ ಸಿಹಿ ಹಂಚಿ ಸಂಭ್ರಮಿಸಿದ್ರು.. ರೇವಣ್ಣ ಭಾವಚಿತ್ರ ಹಿಡಿದು ರೇವಣ್ಣ ಪರ ಅಭಿಮಾನಿಗಳು ಘೋಷಣೆ ಕೂಗಿದರು.
ದೇವರಾಜೇಗೌಡ ಪೊಲೀಸ್ ಕಸ್ಟಡಿಗೆ
ಅತ್ಯಾಚಾರ ಕೇಸ್‌ನ ಆರೋಪಿ ದೇವರಾಜೇಗೌಡರನ್ನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಮೂರು ದಿನ ಪೊಲೀಸ್ ಕಸ್ಟಡಿಗೆ ನೀಡಿ ಅಂತಾ ಹೊಳೆನರಸೀಪುರದ ಜೆಎಂಎಫ್‌ಸಿ ಕೋರ್ಟ್ ಆದೇಶ ನೀಡಿದೆ. ಹೆಚ್ಚಿನ ವಿಚಾರಣೆಗಾಗಿ ಹೊಳೆನರಸೀಪುರ ನಗರ ಠಾಣೆ ಪೊಲೀಸರು ಕಸ್ಟಡಿಗೆ ಅರ್ಜಿ ಹಾಕಿದ್ದರು. ಇದರ ಬೆನ್ನಲ್ಲೇ ಇಂದು ಬೆಳಗ್ಗೆ 9 ಗಂಟೆಯಿಂದ ಮೇ 16ರ ರಾತ್ರಿವರೆಗೆ ದೇವರಾಜೇಗೌಡರನ್ನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಪ್ರಜ್ವಲ್ ನಿವಾಸದಲ್ಲಿ FSL ಮಹಜರು
ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣ ಸಂಬಂಧ ಹಾಸನ ಸಂಸದರ ನಿವಾಸಕ್ಕೆ ಎಫ್ಎಸ್ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎಂಪಿ ನಿವಾಸದಲ್ಲಿ ಅತ್ಯಾಚಾರ ನಡೆದಿತ್ತು ಎಂದಿದ್ದ ಸಂತ್ರಸ್ತೆ ಹೇಳಿಕೆ ಹಿನ್ನೆಲೆ ವಿಧಿ ವಿಜ್ಞಾನ, ಬೆರಳಚ್ಚು ಸೇರಿ ಎಲ್ಲಾ ಆಯಾಮಗಳಲ್ಲೂ ಪರಿಶೀಲನೆ ನಡೆಸಲಾಯ್ತು.
ಎಂಪಿ ನಿವಾಸದಲ್ಲಿ ಎಎಸ್‌ಪಿ ವೆಂಕಟನಾಯ್ಡು ನೇತೃತ್ವದಲ್ಲಿ FSL ತಂಡ ಸುಮಾರು 2 ಗಂಟೆಗಳ ಕಾಲ ಸ್ಯಾಂಪಲ್ಸ್ ಕಲೆ ಹಾಕಿದ್ರು. ಈ ಹಿಂದೆ SIT ಟೀಂ ಸಂತ್ರಸ್ತೆಯೊಂದಿಗೆ ಎಂಪಿ ನಿವಾಸದಲ್ಲಿ ಮಹಜರ್ ಮಾಡಿತ್ತು.