ಅನಂತ್ ಅಂಬಾನಿಯವರ ವಂತರಾ ತಂಡವು 24 ಗಂಟೆಗಳ ಒಳಗೆ ಜಾಮ್ ನಗರದಿಂದ ತ್ರಿಪುರಾಗೆ 3,500 ಕಿಲೋಮೀಟರ್‌ಗಳಷ್ಟು ದೂರ ಪ್ರಯಾಣಿಸಿ ಸಂಕಷ್ಟದಲ್ಲಿರುವ ಆನೆ ಹಾಗೂ ಅದರ ಮರಿಗಳನ್ನು ರಕ್ಷಣೆ ಮಾಡಿದೆ.
ಇಮೇಲ್ ಬಂದ ತಕ್ಷಣ ಕಾರ್ಯಪ್ರವೃತ್ತವಾದ ವಂತರಾ ತಂಡ ಕೊಂಚವೂ ತಡಮಾಡದೆ ಆನೆಗಳ ನೆರವಿಗೆ ಧಾವಿಸಿದ್ದು, ಇದು ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದೆ.
ಅನಂತ್ ಅಂಬಾನಿ ಅವರ ಕನಸಿನ ವಂತಾರಾ ತಂಡ ಆನೆ ಮತ್ತು ಮರಿಗಳ ಸಹಾಯಕ್ಕಾಗಿ ಕೂಡಲೇ ಸ್ಪಂದಿಸಿದ್ದು, ಅನುಭವಿ ಹಾಗೂ ನುರಿತ ವೈದ್ಯರ ತಂಡವು ಜಾಮ್‌ನಗರದಿಂದ ತ್ರಿಪುರಾದ ಕೈಲಾಸಹರ್‌ನಲ್ಲಿರುವ ಉನಕೋಟಿಗೆ ಬಂದು ಚಿಕಿತ್ಸೆ ನೀಡಿತು.
ವಂತರಾ ತಂಡಕ್ಕೆ ಶ್ಲಾಘನೆಯ ಸುರಿಮಳೆ
ವಂತರಾ ತಂಡವು ಒಂದು ಕ್ಷಣ ಕೂಡ ವ್ಯರ್ಥ ಮಾಡದೆ ಆನೆ ಮತ್ತು ಅದರ ಮರಿಗೆ ತಕ್ಷಣದ ಆರೈಕೆ ಮತ್ತು ಸಹಾಯವನ್ನು ಮಾಡಿದರು. ವಂತರಾ ತಂಡ ನೆರವಿಗೆ ಸ್ಪಂದಿಸಿದ್ದು ಹಾಗೂ ಕೂಡಲೇ ಕಾರ್ಯಪ್ರವೃತ್ತರಾಗಿ ಆನೆ ಹಾಗೂ ಅದರ ಮರಿಗಳಿಗೆ ಚಿಕಿತ್ಸೆ ನೀಡಿರುವ ವಿಡಿಯೋ ಇದೀಗ ಸಾಮಾಜಿಕ ತಾಣದಲ್ಲಿ ಸದ್ದುಮಾಡುತ್ತಿದೆ.
ಅನಾರೋಗ್ಯದ ಪ್ರಾಣಿಗಳನ್ನು ಆರೈಕೆ ಮಾಡುವ ಹಾಗೂ ಮುತುವರ್ಜಿ ವಹಿಸುವ ವಂತರಾ ತಂಡ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ವಂತರಾ ತಂಡ ಕ್ಷಿಪ್ರವಾಗಿ ಇಮೇಲ್‌ಗೆ ಸ್ಪಂದಿಸಿರುವುದು ಹಾಗೂ ತಡಮಾಡದೇ ವೈದ್ಯರ ತಂಡವನ್ನು ಇಷ್ಟೊಂದು ದೂರಕ್ಕೆ ಕಳುಹಿಸಿದ್ದು ಸಕಾಲದಲ್ಲಿ ಚಿಕಿತ್ಸೆ ದೊರೆಯುವಂತೆ ಮಾಡಿದ್ದು ನೆಟ್ಟಿಗರ ಪ್ರಶಂಸೆಗೆ ಪಾತ್ರವಾಗಿದೆ.
ಆನೆಗಳ ರಕ್ಷಣೆಗೆ ವಂತರಾ ತಂಡವನ್ನು ಸ್ಪಂದಿಸುವಂತೆ ಇಮೇಲ್ ಕಳುಹಿಸಿದ್ದ ಮಹಿಳೆಯೊಬ್ಬರು ವಿಡಿಯೋದಲ್ಲಿ ವಂತರಾ ತಂಡದ ಕರ್ತವ್ಯ ನಿಷ್ಠೆಯನ್ನು ಶ್ಲಾಘಿಸಿದ್ದು, ಇಮೇಲ್ ಕಳುಹಿಸಿದ 24 ಗಂಟೆಗಳ ಒಳಗೆ ವಂತರಾ ತಂಡ ಇಲ್ಲಿಗೆ ತಲುಪಿ ಕಾರ್ಯಪ್ರವೃತ್ತವಾಗಿದೆ. ನಿಜಕ್ಕೂ ನಾನು ಈ ತಂಡಕ್ಕೆ ಚಿರಋಣಿ. ನಿಜವಾಗಿಯೂ ತಂಡದ ಕ್ಷಿಪ್ರತೆಗೆ ಹಾಗೂ ಕಾರ್ಯವೈಖರಿಗೆ ನಾನು ಮನಸೋತಿರುವೆ ನನ್ನ ಇಮೇಲ್‌ಗೆ ಇಷ್ಟೊಂದು ಬೇಗ ಪ್ರತಿಕ್ರಿಯೆ ದೊರೆಯಬಹುದು ಎಂಬುದಾಗಿ ನಾನು ಊಹಿಸಿರಲಿಲ್ಲ ಎಂದು ಮಹಿಳೆ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಆನೆ ಹಾಗೂ ಅದರ ಮರಿಗಳ ರಕ್ಷಣೆ
ತ್ರಿಪುರಾದ ಉನಕೋಟಿ ಜಿಲ್ಲೆಯಲ್ಲಿ ಅಸ್ವಸ್ಥಗೊಂಡಿರುವ ಆನೆ ಮತ್ತು ಅದರ ಕರುವನ್ನು ಯಾವುದೇ ವಿಳಂಬ ಮಾಡದೆ ರಕ್ಷಿಸಲು ವಂತರಾ ತಂಡವನ್ನು ತ್ವರಿತವಾಗಿ ಸಜ್ಜುಗೊಳಿಸಿದ ಅನಂತ್ ಅಂಬಾನಿ ಅವರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನಾನು ಒಂದು ದಿನದ ಹಿಂದೆಯಷ್ಟೇ ಇಮೇಲ್ ಮೂಲಕ ಅವರನ್ನು ಸಂಪರ್ಕಿಸಿದೆ ಮತ್ತು ಮರುದಿನವೇ ವಂತರಾ ತಂಡವು ಇಲ್ಲಿಗೆ ಆಗಮಿಸಿದೆ ಎಂದು ಅವರು ಕೃತಜ್ಞತೆ ಅರ್ಪಿಸಿದ್ದಾರೆ. ಅಂತೆಯೇ ಯಶಸ್ವಿ ಪಾರುಗಾಣಿಕಾ ಕಾರ್ಯಾಚರಣೆಯನ್ನು ಬೆಂಬಲಿಸಿದ ಮತ್ತು ಕೊಡುಗೆ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.
ವಂತರಾ ಎಂದರೆ ಸ್ಟಾರ್ ಆಫ್ ದಿ ಫಾರೆಸ್ಟ್ ಎಂಬ ಅರ್ಥವನ್ನು ಹೊಂದಿದ್ದು, ಈ ವರ್ಷದ ಆರಂಭದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ರಿಲಯನ್ಸ್ ಫೌಂಡೇಶನ್ ಪ್ರಾರಂಭಿಸಿದ ಪ್ರವರ್ತಕ ಯೋಜನೆ ಎಂದೆನಿಸಿದೆ.
ಗಾಯಗೊಂಡ ಮತ್ತು ಅಳಿವಿನಂಚಿನಲ್ಲಿರುವ ಪ್ರಾಣಿಗಳ ರಕ್ಷಣೆ, ಚಿಕಿತ್ಸೆ ಮತ್ತು ಪುನರ್ವಸತಿಗೆ ಈ ಯೋಜನೆಯನ್ನು ಸಮರ್ಪಿಸಲಾಗಿದೆ. ಪ್ರಾಣಿ ಪಕ್ಷಿ ಪ್ರಿಯರಾಗಿರುವ ಅನಂತ್ ಅಂಬಾನಿ ಅತ್ಯಂತ ಮುತುವರ್ಜಿಯಿಂದ ವಂತರಾ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಪ್ರಾಣಿ ಪಕ್ಷಿಗಳಿಗೆ ನೆಲೆವೀಡಾಗಿರುವ ವಂತರಾ
ಗುಜರಾತ್‌ನ ರಿಲಯನ್ಸ್‌ನ ಜಾಮ್‌ನಗರ ರಿಫೈನರಿ ಕಾಂಪ್ಲೆಕ್ಸ್‌ನ ವಿಶಾಲವಾದ ವಿಸ್ತಾರದಲ್ಲಿ ನೆಲೆಗೊಂಡಿರುವ ವಂತರಾ, 200 ಕ್ಕೂ ಹೆಚ್ಚು ರಕ್ಷಿಸಲ್ಪಟ್ಟ ಆನೆಗಳಿಗೆ ನೆಲೆಯಾಗಿರುವ 3,000-ಎಕರೆ ಆನೆ ಕೇಂದ್ರ ಮತ್ತು ಹಸಿರು ಪ್ರಾಣಿಶಾಸ್ತ್ರದ ಪಾರುಗಾಣಿಕಾ ಮತ್ತು ಪುನರ್ವಸತಿ ಕೇಂದ್ರವನ್ನು ಒಳಗೊಂಡಿದೆ. 43 ವಿವಿಧ ಜಾತಿಯ 2000 ಕ್ಕೂ ಹೆಚ್ಚಿನ ಪ್ರಾಣಿ ಪಕ್ಷಿಗಳಿಗೆ ವಂತರಾ ನೆಲೆಯಾಗಿದೆ.
ಆನೆಗಳ ರಕ್ಷಣೆಗೆ ವಂತರಾ ತಂಡವನ್ನು ಸ್ಪಂದಿಸುವಂತೆ ಇಮೇಲ್ ಕಳುಹಿಸಿದ 24 ಗಂಟೆಗಳ ಒಳಗೆ ವಂತರಾ ತಂಡ ಇಲ್ಲಿಗೆ ತಲುಪಿ ಕಾರ್ಯಪ್ರವೃತ್ತವಾಗಿದೆ ಅನ್ನೋದು ವಿಶೇಷ.