ಬೆಂಗಳೂರಿನಲ್ಲಿ ರೇವ್ ಪಾರ್ಟಿ ಮೇಲೆ ಸಿಸಿಬಿ ರೇಡ್ ; ಮಾದಕ ಮತ್ತಿನಲ್ಲಿ ತೆಲುಗು ನಟ-ನಟಿಯರು? – ಕಹಳೆ ನ್ಯೂಸ್
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru) ಸಿಸಿಬಿ ಅಧಿಕಾರಿಗಳು (CCB Police) ಭರ್ಜರಿ ರೇಡ್ ಮಾಡಿದ್ದಾರೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ (Electronic City ) ಬಳಿಯ ಜಿ ಆರ್ ಫಾರ್ಮ್ ಹೌಸ್‌ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ರೇಡ್ ಮಾಡಿದ್ದಾರೆ.
ಪಾರ್ಟಿಯಲ್ಲಿ ಡ್ರಗ್ಸ್ (Drugs at Party) ಹಾಗೂ ಎಂಡಿಎಂ ಮಾತ್ರೆಗಳು ಪತ್ತೆಯಾಗಿದೆ. ಪಾರ್ಟಿಯಲ್ಲಿ ಆಂಧ್ರ (Andhra Pradesh) ಮತ್ತು ಬೆಂಗಳೂರಿನ 100ಕ್ಕೂ ಹೆಚ್ಚು ಜನರು ಪತ್ತೆಯಾಗಿದ್ದಾರೆ. ಇನ್ನು 25ಕ್ಕೂ ಹೆಚ್ಚು ಯುವತಿಯರು ಸಹ ಪಾರ್ಟಿಯಲ್ಲಿ ಇದ್ದರೂ ಎನ್ನಲಾಗಿದೆ.
ಸದ್ಯ ಸಿಸಿಬಿ ವಿಭಾಗದ ನಾರ್ಕೊಟಿಕ್ಸ್ ಅಧಿಕಾರಿಗಳು ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಡಿಸಿಪಿ ಶ್ರೀನಿವಾಸ್ ಗೌಡ ಮತ್ತು ACP ಪರಮೇಶ್ವರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಪೊಲೀಸರು ಪಾರ್ಟಿಯಲ್ಲಿ ಭಾಗಿಯಾದವರ ಗುರುತು ಪತ್ತೆ ಮಾಡ್ತಿದ್ದಾರೆ. ಇನ್ನು ಹೈದ್ರಾಬಾದ್ ಮೂಲದ ವಾಸು ಎಂಬಾತ ಪಾರ್ಟಿ ಆಯೋಜನೆ ಮಾಡಿದ್ದ ಎನ್ನಲಾಗಿದೆ. ಒಂದು ಬೆಂಜ್ ಕಾರಿನಲ್ಲಿ ಆಂಧ್ರ ಶಾಸಕ ಕಾಕನಿ ಗೋವರ್ಧನ ರೆಡ್ಡಿ ಎಂಬುವವರ ಹೆಸರಿನ ಪಾಸ್ ಪತ್ತೆಯಾಗಿದೆ.
ಕಾನ್ ಕಾರ್ಡ್ ಮಾಲೀಕ ಗೋಪಾಲ ರೆಡ್ಡಿ ಎಂಬುವವರ ಮಾಲೀಕತ್ವದ ಫಾರ್ಮ್ ಹೌಸ್ ನಲ್ಲಿ ಪಾರ್ಟಿ ಏರ್ಪಡಿಸಲಾಗಿತ್ತು ಎನ್ನಲಾಗಿದೆ. ಹೈದ್ರಾಬಾದ್ ಮೂಲದ ವಾಸು ಎಂಬಾತ ಸನ್ ಸೆಟ್ ಟು ಸನ್ ರೈಸ್ ಹೆಸರಿನಲ್ಲಿ ಪಾರ್ಟಿ ಆಯೋಜನೆ ಮಾಡಿದ್ದನಂತೆ. ಭಾನುವಾರ ಸಂಜೆ ಐದು ಗಂಟೆಯಿಂದ ಬೆಳಗ್ಗೆ ಆರು ಗಂಟೆ ತನಕ ನಡೆಯುತ್ತಿದ್ದ ಪಾರ್ಟಿ ಆಯೋಜಿಸಲಾಗಿತ್ತಂತೆ. ಸ್ಥಳದಲ್ಲಿ 15 ಹೆಚ್ಚು ಕಾರುಗಳು ಪತ್ತೆಯಾಗಿದ್ದು, ಐಶಾರಾಮಿ ಮರ್ಸಿಡಿಸ್ ಬೆಂಜ್ , ಜಾಗ್ವಾರ್, ಔಡಿ ಕಾರುಗಳು ಪತ್ತೆಯಾಗಿದೆ.
ಘಟನೆ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ನಗರದ ಒಳಭಾಗದಲ್ಲಿ ಪಾರ್ಟಿ ನಡೆಸಿದರೆ ದಾಳಿಗಳು ನಿರಂತರವಾಗಿ ನಡೆಯುತ್ತಿದ್ದ ಹಿನ್ನಲೆಯಲ್ಲಿ ನಗರದ ಹೊರ ವಲಯದಲ್ಲಿ ಪಾರ್ಟಿ ಆಯೋಜನೆ ಮಾಡಿಲಾಗಿತ್ತು. ಒಂದು ದಿನದ ಪಾರ್ಟಿಗೆ ಮೂವತ್ತರಿಂದ ಐವತ್ತು ಲಕ್ಷ ಖರ್ಚು ಮಾಡಿ ಪಾರ್ಟಿ ಆಯೋಜನೆ ಮಾಡಿಲಾಗಿದೆಯಂತೆ.
ಇನ್ನು ಪಾರ್ಟಿಯಲ್ಲಿ ಡಿಜೆಗಳು, ಮಾಡೆಲ್ ಗಳು, ಬೆಂಗಳೂರು ಹಾಗೂ ಹೈದರಾಬಾದ್ ಮೂಲದ ಟೆಕ್ಕಿಗಳು ಹಾಗೂ ಟಾಲಿವುಡ್ನ ನಟ-ನಟಿಯರು ಕೂಡ ಭಾಗಿಯಾಗಿದ್ದರು ಎನ್ನಲಾಗಿದೆ. ಸದ್ಯ ನಾರ್ಕೊಟಿಕ್ಸ್ ಸ್ನಿಫರ್ ಡಾಗ್ ಗಳಾದ ಭೂಮಿ, ರಾಣಾ , ರಾಮು ಮತ್ತು ಮೈಲು ಎಂಬ ಶ್ವಾನದಳದಿಂದ ಸ್ಥಳ ಪರಿಶೀಲನೆ ನಡೆಸುತ್ತಿದ್ದು, ಪೊಲೀಸರು ತನಿಖೆಯನ್ನ ಮುಂದುವರಿಸಿದ್ದಾರೆ.