ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ನ್ಯೂಪಡ್ಪುನಲ್ಲಿ ಈ ಘಟನೆ ನಡೆದಿದ್ದು, ಹರೇಕಳ ಹಾಜಬ್ಬ ಅವರು ನಿರ್ಮಿಸಿದ್ದ ಶಾಲೆಯ ಕಾಪೌಂಡ್ ಗೋಡೆ ಕುಸಿದು 7 ವರ್ಷದ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾರೆ.
ಮೂಲಗಳ ಪ್ರಕಾರ ಮೃತ ವಿದ್ಯಾರ್ಥಿನಿಯನ್ನು ನ್ಯೂಪಡ್ಪು ನಿವಾಸಿ ಸಿದ್ದೀಖ್ ಜಮೀಲಾ ಪುತ್ರಿ ಶಾಜಿಯಾ (7) ಎಂದು ಗುರುತಿಸಲಾಗಿದೆ. ಹಾಜಬ್ಬರ ಶಾಲೆಯಲ್ಲಿ ವಿದ್ಯಾರ್ಥಿನಿ ಶಾಜಿಯಾ 3ನೇ ತರಗತಿ ಓದುತ್ತಿದ್ದಳು.
ಶಾಲೆಯಲ್ಲಿ ನಡೆಯುತ್ತಿದ್ದ ಎನ್‌ಎಸ್‌ಎಸ್ ಶಿಬಿರದಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿನಿ ಗೇಟಿನ ಬಳಿ ಆಟವಾಡುತ್ತಿದ್ದಾಗ ಕಾಂಪೌಡ್ ಗೋಡೆ ಕುಸಿದಿದೆ. ಈವೇಳೆ ಗೋಡೆಯಡಿ ಸಿಲುಕಿದ ಶಾಜಿಯಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.
ಮಳೆಯಿಂದಾಗಿ ಶಿಥಿಲಗೊಂಡಿದ್ದ ಕಾಂಪೌಂಡ್ ಗೋಡೆ
ಇನ್ನು ಸ್ಥಳೀಯರ ಪ್ರಕಾರ ಉಳ್ಳಾಲ ತಾಲೂಕಿನಲ್ಲಿ ಸುರಿದ ಮಳೆಯಿಂದಾಗಿ ಶಾಲೆಯ ಕಾಂಪೌಂಡ್ ಗೋಡೆ ಶಿಥಿಲವಾಗಿತ್ತು. ರಾತ್ರಿಯಿಡೀ ಸಾಕಷ್ಟು ಮಳೆಯಾಗಿತ್ತು ಮತ್ತು ಶಾಲಾ ಗೇಟ್ ಮತ್ತು ಕಾಂಪೌಂಡ್ ಗೆ ಸಪೋರ್ಟ್ ಆಗಿ ಇದ್ದ ಎರಡೂ ಪಿಲ್ಲರ್ ಗಳ ಅಡಿಪಾಯ ದುರ್ಬಲಗೊಂಡಿತ್ತು. ಇದನ್ನು ದುರಸ್ತಿ ಮಾಡಿಸುವ ಮೊದಲೇ ಅನಾಹುತ ಸಂಭವಿಸಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕಿತ್ತಳೆ ಮಾರಾಟ ಮಾಡಿ ಶಾಲೆ ನಿರ್ಮಿಸಿದ್ದ ಹಾಜಬ್ಬ
ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರು ಮಂಗಳೂರು ನಗರದಲ್ಲಿ ಕಿತ್ತಳೆ ಹಣ್ಣು ಮಾರಾಟ ಮಾಡಿ ಉಳಿಸಿದ ಹಣದಲ್ಲಿ ಈ ಶಾಲೆಯನ್ನು ನಿರ್ಮಿಸಿದ್ದರು. ಅವರು ತಮ್ಮ ಇಡೀ ಜೀವಮಾನದ ಉಳಿತಾಯವನ್ನು ಮಂಗಳೂರು ತಾಲೂಕಿನ ಒಳ ಪ್ರದೇಶಗಳಲ್ಲಿ ಶಾಲೆಯನ್ನು ನಿರ್ಮಿಸಲು ಖರ್ಚು ಮಾಡಿದ್ದರು. ಈ ಅಸಾಧಾರಣ ಸಾಧನೆಗಾಗಿ, ಸರ್ಕಾರವು 2022 ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತು.