Recent Posts

Monday, November 25, 2024
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕಂಪನಿಯವರ ನಿರ್ಲಕ್ಷ್ಯಕ್ಕೆ ಅಡಿಕೆ ಕೃಷಿಗೆ ನುಗ್ಗಿದ ಮಳೆ ನೀರು : ಕೃಷಿ ನಾಶ – ಕಹಳೆ ನ್ಯೂಸ್

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ವೇಳೆ ಕಂಪನಿಯವರ ನಿರ್ಲಕ್ಷ್ಯಕ್ಕೆ ಮಹಿಳೆಯೋರ್ವರ ಅಡಿಕೆ ಕೃಷಿಗೆ ನೀರು ನುಗ್ಗಿ ಕೃಷಿ ನಾಶವಾಗುವ ಆತಂಕ ಉಂಟಾಗಿದ್ದು, ಕೃಷಿಯನ್ನು ಉಳಿಸಿಕೊಡಿ ಎಂದು ಕಂಪೆನಿಯವರ ಬಳಿ ಮಹಿಳೆ ಅಂಗಲಾಚಿಕೊಂಡ ಘಟನೆ ಬಂಟ್ವಾಳ ತಾಲೂಕಿನ ಬಿಳಿಯೂರು ಗ್ರಾಮದ ದೊರ್ಮೆ ಎಂಬಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ಚಂದ್ರಾವತಿ ಅವರ ಅಡಿಕೆ ಕೃಷಿಯ ತೋಟದಲ್ಲಿ ಕೆಸರು ನೀರು ನಿಂತಿದ್ದು, ಲಕ್ಷಾಂತರ ರೂ ಫಸಲು ನೀಡುವ ಅಡಿಕೆ ಗಿಡಗಳು ನಾಶವಾಗುವ ಲಕ್ಷಣಗಳು ಕಂಡು ಬಂದಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಚರಂಡಿ ನೀರು ಹರಿದು ಹೋಗಲು ವ್ಯವಸ್ಥೆಯಿಲ್ಲದೆ ಅಡಿಕೆ ತೋಟದಲ್ಲಿ ತುಂಬಿದೆ.
ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯ ಸಂದರ್ಭದಲ್ಲಿ ಕೃಷಿಕರ ಭೂಮಿ ಕಳೆದುಕೊಂಡಿದ್ದಾರೆ. ಇವರ ಸ್ವಂತ ಕೃಷಿ ಜಮೀನಿನ ಮೂಲಕ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ. ಇದೀಗ ರಸ್ತೆ ನಿರ್ಮಾಣ ಮಾಡಿ ಬಾಕಿ ಉಳಿದ ಜಾಗದಲ್ಲಿ ಉಳಿದಿರುವ ಅಡಿಕೆ ಕೃಷಿಯಲ್ಲಿ ನೀರು ತುಂಬಿಕೊಂಡಿದೆ. ರಸ್ತೆ ನಿರ್ಮಿಸುವ ಸಂದರ್ಭದಲ್ಲಿ ನೀರು ಇವರ ಜಮೀನಿಗೆ ಬರದಂತೆ ತಡೆಗೋಡೆ ನಿರ್ಮಿಸದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂಬ ಆರೋಪ ಇವರದ್ದಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೇ ರೀತಿ ಕಳೆದ ವರ್ಷ ನೀರು ತುಂಬಿ ಲಕ್ಷಾಂತರ ಮೌಲ್ಯದ ಅಡಿಕೆ ಗಿಡಗಳು ಸತ್ತುಹೋಗಿವೆ. ಈ ಬಗ್ಗೆ ಅನೇಕ ಬಾರಿ ಕಂಪನಿಯ ಬಳಿಗೆ ಹೋಗಿ ದೂರು ನೀಡಿದೆಯಾದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಇದೀಗ ಈ ವರ್ಷ ಉಳಿದ ಅಡಿಕೆ ಕೃಷಿಗೂ ನೀರು ತುಂಬಿದ್ದು, ಗಿಡಗಳು ನಾಶವಾಗುವ ಭೀತಿ ಎದುರಾಗಿದೆ.
ರೈತರ ಪರವಾಗಿ ಮಾತನಾಡುವ ಸರಕಾರ ರೈತರ ಆರ್ಥಿಕ ವ್ಯವಸ್ಥೆಯನ್ನು ಕಸಿದುಕೊಳ್ಳುವ ಕಂಪೆನಿ ವಿರುದ್ಧ ಎಚ್ಚರಿಕೆ ನೀಡಿ ಸಮಸ್ಯೆ ಪರಿಹರಿಸಲು ಅವರು ಮನವಿ ಮಾಡಿದ್ದಾರೆ. ತಾಲೂಕಿನ ಅನೇಕ ರೈತರ ಸಮಸ್ಯೆ ಇದೇ ರೀತಿ ಇದ್ದು ಕಂಪೆನಿ ನಿರ್ಲಕ್ಷ್ಯ ವಹಿಸಿದರೆ ರೈತರು ಬೀದಿಪಾಲಾಗುವ ಆತಂಕವಿದೆ. ಹಾಗಾಗಿ ಕೃಷಿ ಭೂಮಿಗೆ ಹಾನಿಯಾಗದಂತೆ ಕಾಮಗಾರಿಯನ್ನು ಮುಂದುವರಿಸಿಕೊಂಡು ಹೋಗುವಂತೆ ಸರಕಾರ ಇವರಿಗೆ ಸೂಚನೆ ನೀಡಬೇಕಾಗಿದೆ