Sunday, January 19, 2025
ಉಡುಪಿಸುದ್ದಿ

ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕರೆ: ಪಕ್ಷ ವಿರೋಧಿ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ-ಕಹಳೆ ನ್ಯೂಸ್

ಜೂನ್ 3ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯ ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಡಾ! ಧನಂಜಯ ಸರ್ಜಿ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿಯಾಗಿ ಎಸ್.ಎಲ್. ಭೋಜೇಗೌಡ ಅವರು ಚುನಾವಣಾ ಕಣದಲ್ಲಿದ್ದಾರೆ. ಪಕ್ಷದ ಪರಂಪರೆಯಂತೆ ಈ ಬಾರಿಯೂ ನೈರುತ್ಯ ಪದವೀಧರ ಕ್ಷೇತ್ರಕ್ಕೆ ಶಿವಮೊಗ್ಗ ಭಾಗದ ಅಭ್ಯರ್ಥಿಯನ್ನು ಪಕ್ಷ ಆಯ್ಕೆ ಮಾಡಿದೆ. ಬಿಜೆಪಿ-ಜೆಡಿಎಸ್ ಮೈತ್ರಿಯ ಕಾರಣಕ್ಕೆ ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಎನ್.ಡಿ.ಎ ಅಭ್ಯರ್ಥಿಯ ಸ್ಪರ್ಧೆಗೆ ಪಕ್ಷ ಅವಕಾಶ ನೀಡಿದೆ. ಪಕ್ಷದ ಅಧಿಕೃತ ಅಭ್ಯರ್ಥಿಗಳ ಘೋಷಣೆಯಾದ ಮೇಲೆ ಯಾವುದೇ ಗೊಂದಲಗಳಿಗೆ ಅವಕಾಶವಿರುವುದಿಲ್ಲ. ಈಗಾಗಲೇ ಈ ಎರಡೂ ಕ್ಷೇತ್ರಗಳ ಮತದಾರರ ಪಟ್ಟಿ ಜಿಲ್ಲೆಯ ಎಲ್ಲಾ ಮಂಡಲಗಳ ಮೂಲಕ ಬೂತ್ ಮಟ್ಟಕ್ಕೆ ತಲುಪಿದೆ. ಪಕ್ಷದ ಪ್ರಮುಖರು, ಎಲ್ಲಾ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ತಮ್ಮ ಬೂತ್ ವ್ಯಾಪ್ತಿಯಲ್ಲಿರುವ ಎರಡೂ ಕ್ಷೇತ್ರಗಳ ಮತದಾರರನ್ನು ಸಂಪರ್ಕಿಸಿ ಪಕ್ಷದ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರವನ್ನು ತೀವ್ರಗೊಳಿಸುವ ಮೂಲಕ ಡಾ! ಧನಂಜಯ ಸರ್ಜಿ ಮತ್ತು ಎಸ್. ಎಲ್. ಭೋಜೇಗೌಡರವರ ಗೆಲುವಿಗೆ ಬದ್ಧತೆಯಿಂದ ಶ್ರಮಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಕರೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಿಜೆಪಿ ಕಾರ್ಯಕರ್ತ ಆಧಾರಿತ ವಿಶ್ವದ ಅತೀ ದೊಡ್ಡ ರಾಜಕೀಯ ಪಕ್ಷ. ಕಾರ್ಯಕರ್ತರೇ ಪಕ್ಷದ ಜೀವಾಳ. ಪಕ್ಷದ ಕಾರ್ಯಕರ್ತರು ಮತ್ತು ಪಕ್ಷ ಒಂದೇ ಆಗಿದ್ದು, ಪಕ್ಷ ಕೈಗೊಂಡಿರುವ ತೀರ್ಮಾನವನ್ನು ಗೌರವಿಸುವುದು ಪ್ರತಿಯೊಬ್ಬ ನಿಷ್ಠಾವಂತ ಕಾರ್ಯಕರ್ತರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಸಮಸ್ತ ಕಾರ್ಯಕರ್ತರು ವಿರೋಧಿಗಳ ಯಾವುದೇ ಅಪಪ್ರಚಾರಗಳಿಗೆ ಕಿವಿಗೊಡದೆ ಪಕ್ಷದ ಅಭ್ಯರ್ಥಿಗಳ ದೊಡ್ಡ ಅಂತರದ ಗೆಲುವಿಗೆ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪಕ್ಷದ ಯಾವುದೇ ಪದಾಧಿಕಾರಿಗಳು ಅಥವಾ ಕಾರ್ಯಕರ್ತರು ಪಕ್ಷಕ್ಕೆ ಮುಜುಗರವನ್ನುಂಟುಮಾಡುವ ರೀತಿಯಲ್ಲಿ ವರ್ತಿಸಿ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಲ್ಲಿ ಅಂತಹ ಯಾವುದೇ ಬೆಳವಣಿಗೆಯನ್ನು ಸಹಿಸಲು ಸಾಧ್ಯವಿಲ್ಲ. ಪಕ್ಷದ ತತ್ವ ಸಿದ್ಧಾಂತಗಳಡಿಯಲ್ಲಿ ಎಲ್ಲರೂ ಸಮಾನರಾಗಿದ್ದು, ಪಕ್ಷ ವಿರೋಧಿ ಚಟುವಟಿಕೆಗಳ ವಿರುದ್ಧ ಪಕ್ಷದ ಚೌಕಟ್ಟಿನೊಳಗೆ ಸೂಕ್ತ ಶಿಸ್ತು ಕ್ರಮವನ್ನು ಜರಗಿಸಲಾಗುವುದು.

ಜೂನ್ 4ರಂದು ಪ್ರಕಟಗೊಳ್ಳಲಿರುವ ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಪಕ್ಷದ ಅಭ್ಯರ್ಥಿಯ ನಿಶ್ಚಿತ ಗೆಲುವಿನ ನಿರೀಕ್ಷೆಯೊಂದಿಗೆ ಜೂನ್ 3ರಂದು ನಡೆಯುವ ವಿಧಾನ ಪರಿಷತ್ ಚುನಾವಣೆಯ ನೈರುತ್ಯ ಪದವೀಧರ ಕ್ಷೇತ್ರ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳ ದೊಡ್ಡ ಅಂತರದ ಗೆಲುವಿಗೆ ಎಲ್ಲರೂ ಪಕ್ಷ ನಿಷ್ಠೆ ಮತ್ತು ಬದ್ಧತೆಯಿಂದ ಸಂಘಟಿತರಾಗಿ ಶ್ರಮಿಸಬೇಕು ಎಂದು ಕಿಶೋರ್ ಕುಮಾರ್ ಕುಂದಾಪುರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.