Sunday, January 19, 2025
ದಕ್ಷಿಣ ಕನ್ನಡಸುದ್ದಿ

ತುಳುನಾಡಿನಲ್ಲಿ ಇಂದಿನಿಂದ ಪತ್ತನಾಜೆ ಆರಂಭ : ಶುಭಕಾರ್ಯಕ್ಕೆ ಬ್ರೇಕ್ -ಕಹಳೆ ನ್ಯೂಸ್

ಮಂಗಳೂರು: ಪರಶುರಾಮನ ಸೃಷ್ಟಿಯಾಗಿರುವ ಕೇರಳದ ಕಾಸರಗೋಡು ಜಿಲ್ಲೆಯಿಂದ ಹಿಡಿದು, ದ.ಕ. ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ಬಾರ್ಕೂರುವರೆಗಿನ ತುಳುನಾಡಿನಲ್ಲಿ ಹಿಂದಿನಿಂದ ತುಳುನಾಡಿನ ಕೆಲವು ಸಂಪ್ರದಾಯಗಳು ಇಂದಿಗೂ ನಡೆಯುತ್ತ ಬಂದಿದೆ. ಅದರಲ್ಲಿ ಒಂದು ಪತ್ತನಾಜೆ. ತುಳುನಾಡಿನ ಸಂಪ್ರದಾಯದ ಪ್ರಕಾರ ವೃಷಭ ಮಾಸದ ಹತ್ತನೇ ದಿನ ಪತ್ತನಾಜೆ ಮಹತ್ವದ ದಿನ.

ಈ ವರ್ಷ ಮೇ 24 ರಂದು ಪತ್ತನಾಜೆ ಬರುತ್ತಿದ್ದು, ಅಂದಿನಿಂದ ಮಳೆಗಾಲ ಮುಗಿಯುವವರೆಗೆ ಯಾವುದೇ ಉತ್ಸವಗಳು ನಡೆಯುದಿಲ್ಲ. ಯಕ್ಷಗಾನ ಮೇಳಗಳ ಕಲಾವಿದರು ಪ್ರದರ್ಶನ ಮುಗಿಸಿ ಕಾಲಗೆಜ್ಜೆಯನ್ನು ವಿಧಿವತ್ತಾಗಿ ಬಿಚ್ಚುವುದು ಪತ್ತನಾಜೆಯಂದು.

ಜಾಹೀರಾತು
ಜಾಹೀರಾತು
ಜಾಹೀರಾತು

ಪತ್ತನಾಜೆಯ ಬಳಿಕ ನೇಮೋತ್ಸವದ ಗಗ್ಗರದ ಸದ್ದು, ಯಕ್ಷಗಾನ ಬಯಲಾಟದ ಚೆಂಡೆಯ ಸದ್ದು, ದೈವಸ್ಥಾನಗಳಲ್ಲಿ ನಡೆಯುವ ನೇಮೋತ್ಸವದ ಸಂದರ್ಭದ ತಾಸೆಯ ಸದ್ದು , ಕದೋನಿಯ ಸದ್ದು, ದೇವಳಗಳ ಜಾತ್ರಾ ಮಹೋತ್ಸವಗಳ ಸಂದರ್ಭದ ಸಿಡಿಮದ್ದು, ಕದೋನಿಯ ಸದ್ದು ಎಲ್ಲವು ನಿಲ್ಲುತ್ತದೆ. ಪತ್ತನಾಜೆಯಂದು ದೇವಸ್ಥಾನಗಳಲ್ಲಿ ವಸಂತ ಪೂಜೆ ನಡೆದು ಬಳಿಕ ದೇವರು ಗರ್ಭಗುಡಿಯೊಳಗೆ ಸೇರುತ್ತಾರೆ. ದೈವಗಳು ಕೂಡ ಗುಡಿಯೊಳಗೆ ಸೇರಿಕೊಳ್ಳುತ್ತದೆ. ದೀಪಾವಳಿಯ ಬಳಿಕ ದೇವರು ಗರ್ಭಗುಡಿಯಿಂದ ಹೊರಗೆ ಬಂದು ಉತ್ಸವ ಆರಂಭಗೊಳ್ಳುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬೇಶ, ಕಾರ್ತೆಲ್‌ ಮತ್ತು ಆಟಿ ಈ ಮೂರು ತಿಂಗಳ ಕಾಲ ತುಳುನಾಡಿನ ಯಾವುದೇ ದೇವಸ್ಥಾನ, ದೈವಸ್ಥಾನಗಳಲ್ಲಿ ಯಾವುದೇ ವಿಶೇಷ ಉತ್ಸವ ನಡೆಯುವುದಿಲ್ಲ. ಆಟಿ ತಿಂಗಳು ಮುಗಿದು ಸೋಣ ತಿಂಗಳು ಅಂದರೆ ಸಿಂಹ ಮಾಸದಲ್ಲಿ ಸಿಂಹ ಸಂಕ್ರಮಣದ ಬಳಿಕ ಹಿಂದೂ ಸಂಪ್ರದಾಯದ ಪ್ರಕಾರ ಶುಭ ಕಾಲವಾಗಿದ್ದು ಅಂದಿನಿಂದ ಎಲ್ಲಾ ಉತ್ಸವಗಳು ಆರಂಭಗೊಳ್ಳುತ್ತದೆ. ಕೆಲವು ಸಂದರ್ಭದಲ್ಲಿ ಆಟಿ ತಿಂಗಳಿನಲ್ಲಿ ಅಷ್ತಮಿ ಬಂದರೇ ಅದನ್ನು ಆಚರಿಸುವುದಿಲ್ಲ. ಸೋಣ ತಿಂಗಳಿನಲ್ಲಿ ಬರುವ ಅಷ್ಟಮಿಯನ್ನು ಆಚರಿಸುವ ಪದ್ಧತಿಯಿದೆ. ಇದು ಹಿಂದಿನ ಕಾಲದಿಂದ ನಡೆದು ಕೊಂಡು ಬಂದ ಸಂಪ್ರದಾಯವಾಗಿದ್ದು ಈಗಿನ ಪೀಳಿಗೆ ಕೂಡ ಅದನ್ನು ಮುಂದುವರಿಸಿಕೊಂಡು ಹೋಗುತ್ತಿದೆ.

ತುಳುನಾಡಿನಲ್ಲಿ ದೈವಗಳಿಗೆ ಪ್ರಧಾನ ಸ್ಥಾನವಿದ್ದು ಮಾತಿನಲ್ಲಿ ಹೇಳುವಾಗ ದೈವ, ದೇವರು ಎಂದು ಹೇಳುವ ಮೂಲಕ ದೈವಗಳಿಗೆ ಪ್ರಥಮ ಸ್ಥಾನ ನೀಡುತ್ತಾ ಬಂದಿದೆ. ತುಳುನಾಡಿನಲ್ಲಿ ದೈವಸ್ಥಾನಗಳಲ್ಲಿ ಕೋಲ, ನೇಮ, ಅಗೇಲು, ತಂಬಿಲ ಮುಂತಾದ ಸೇವೆಗಳಿಗೆ ಪತ್ತನಾಜೆ ಗಡುವಾಗಿದ್ದು ಪತ್ತನಾಜೆ ಬಳಿಕ ತುಳುನಾಡಿನಲ್ಲಿ ಜಾರಂದಾಯ, ಧೂಮಾವತಿ ಸೇರಿದಂತೆ ರಾಜನ್‌ ದೈವಗಳಿಗೆ ಪತ್ತನಾಜೆ ಪ್ರಧಾನ ಗಡು, ಹಿಂದಿನ ದಿನಗಳಲ್ಲಿ ಪತ್ತನಾಜೆ ಬಳಿಕ ದೈವಗಳು ಘಟ್ಟಹತ್ತುತ್ತವೆ ಎಂಬ ನಂಬಿಕೆ ಚಾಲ್ತಿಯಲ್ಲಿದೆ. ಕುಟುಂಬ ದೈವಗಳಿಗೆ, ಗ್ರಾಮ ದೈವಗಳಿಗೆ ಕೂಡ ಎಲ್ಲ ಪರ್ವಗಳು ಪತ್ತನಾಜೆಯ ಒಳಗೆ ಮುಗಿಯಬೇಕು.

ಇನ್ನು ಹಿಂದಿನ ದಿನಗಳಲ್ಲಿ ಪತ್ತನಾಜೆಯಿಂದ ಮಳೆಗಾಲ ಆರಂಭಗೊಳ್ಳುತ್ತಿದ್ದು ಪತ್ತನಾಜೆಯಂದು ಎರಡು ಹನಿಯಾದರೂ ಮಳೆ ಬೀಳಲೆಬೇಕು. ಈಗ ಪ್ರಕೃತಿಯ ಏರು ಪೇರುಗಳಿಂದ ವ್ಯತ್ಯಾಸಗಳು ಉಂಟಾಗಿದ್ದರೂ ಸಂಪ್ರದಾಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.