ಬಂಟ್ವಾಳ : ನಿರಂತರ ಸುರಿದ ಮಳೆಯಿಂದಾಗಿ ಕಲ್ಲಡ್ಕದ ರಸ್ತೆಯಲ್ಲಿ ತುಂಬಿಕೊಂಡ ಕೆಸರು : ಪಾದಚಾರಿಗಳ ಪರದಾಟ- ಕಹಳೆ ನ್ಯೂಸ್
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದಲ್ಲಿ ಸುಮಾರು ಎರಡು ಕಿ.ಮೀ. ದೂರದ ಫ್ಲೈಓವರ್ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಸಾಕಷ್ಟು ಕಾಲವಿದೆ. ಆದರೆ ಅಷ್ಟರೊಳಗೆ ಕಲ್ಲಡ್ಕದಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರು ಹಾಗೂ ನಡೆದುಕೊಂಡು ಹೋಗುವವರ ಮೂಲಭೂತ ಹಕ್ಕುಗಳನ್ನು ರಕ್ಷಿಸಬೇಕಾದ ಕಾರ್ಯ ಆಗಬೇಕಾಗಿದೆ.
ಕೆಲದಿನಗಳ ಹಿಂದೆ ಸಹಾಯಕ ಕಮೀಷನರ್ ಹಾಗೂ ತಹಸೀಲ್ದಾರ್ ಇಲ್ಲಿಗೆ ಭೇಟಿ ನೀಡಿ ಸುರಕ್ಷತೆ ಕ್ರಮ ಹಾಗೂ ನೀರು ಹರಿದುಹೋಗಲು ಜಾಗ ವ್ಯವಸ್ಥೆ ಕಲ್ಪಿಸಬೇಕು ಎಂದು ಹೇಳಿ ತೆರಳಿದ್ದರು. ಆದರೆ ನೀರು ರಸ್ತೆಯಲ್ಲೇ ಸುತ್ತಾಡುತ್ತಿದ್ದರೆ ಕೆಸರಿನ ಗುಡ್ಡೆ ಆಗಿದೆ.
ಇನ್ನು ದ್ವಿಚಕ್ರ ವಾಹನ ಸವಾರರ ಮೈಯೆಲ್ಲಾ ಕೆಸರಾಭಿಷೇಕವಾಗುತ್ತಿದೆ. ಇದು ಅವರ ಪ್ರಯಾಣದ ಹಕ್ಕನ್ನು ಕಸಿದುಕೊಂಡಂತೆ. ದ್ವಿಚಕ್ರ ವಾಹನ ಸವಾರರು ಸುರಕ್ಷಿತವಾಗಿ ವಾಹನ ಚಲಾಯಿಸಲು ಕಲ್ಲಡ್ಕ ರೋಡ್ ಅನ್ ಫಿಟ್ ಎಂಬಂತಾಗಿದೆ.
ಪಾದಚಾರಿಗಳು ಚಪ್ಪಲಿಯನ್ನು ಕೈಯಲಿ ಹಿಡಿದುಕೊಂಡೇ ಓಡಾಡಬೇಕಾದ ಸ್ಥಿತಿ. ಶಾಲೆಗಳು ಆರಂಭಗೊಳ್ಳುವ ಹೊತ್ತಿನಲ್ಲಿ ಮಕ್ಕಳು ಪರದಾಟ ನಡೆಸಬೇಕಾದ ಪರಿಸ್ಥಿತಿ ಇದೆ.
ಮಳೆಯ ಸಂಭ್ರಮ ಒಂದೆಡೆಯಾದರೆ, ಮಂಗಳೂರು ಬೆಂಗಳೂರು ಸಂಪರ್ಕದ ಪ್ರಮುಖ ಮಾರ್ಗವಾದ ಕಲ್ಲಡ್ಕದಲ್ಲಿ ಸಿಂಗಲ್ ರೋಡ್ ಕೂಡ ಟ್ರಾಫಿಕ್ ಜಾಮ್ ಆಗುತ್ತಿದೆ. ಮಳೆ ಬಂದ ಕೂಡಲೇ ರಸ್ತೆ ಹೊಳೆಯಂತಾಗುತ್ತದೆ. ನೀರು ಹರಿದುಹೋಗಲು ಯಾವುದೇ ವ್ಯವಸ್ಥೆ ಕಲ್ಪಿಸದೇ ಇರುವುದು ಇದಕ್ಕೆ ಕಾರಣ ಹಾಗೂ ರಸ್ತೆ ಸಮಸ್ಯೆ ಉಂಟಾಗುತ್ತದೆ ಎಂದು ಮೊದಲೇ ಗೊತ್ತಿದ್ದರೂ ಸಾಕಷ್ಟು ಮುಂಜಾಗರೂಕತೆಯನ್ನು ಮಾಡದೇ ಇರುವುದು ಇದಕ್ಕೆ ಕಾರಣ ಎಂದು ಸಾರ್ವಜನಿಕರು ಆಡಿಕೊಳ್ಳುವಂತಾಗಿದೆ.