ಉಡುಪಿ : ಮತ ಎಣಿಕೆಗೆ ನಿಗಧಿಪಡಿಸಿರುವ ಸೂಚನೆಗಳ ಕ್ರಮಬದ್ಧತೆಯಲ್ಲಿ ಯಾವುದೇ ರೀತಿಯ ವ್ಯತ್ಯಾಸವಾಗದಂತೆ ಪರಿಪಾಲಿಸಿ ಮತ ಎಣಿಕೆ ಕಾರ್ಯವನ್ನು ಯಶಸ್ವಿಯಾಗಿ ನಡೆಸಬೇಕು ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ವೀಕ್ಷಕರಾದ ಹಿತೇಶ್ .ಕೆ ಕೋಯಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಂದು ನಗರದ ಮಣಿಪಾಲ್ ನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಲೋಕಸಭಾ ಚುನಾವಣೆ – 2024ರ ಮತ ಎಣಿಕೆ ಪೂರ್ವ ಸಿದ್ಧತೆ ಸಭೆಯಲ್ಲಿ ಮಾತನಾಡುತ್ತಿದ್ದರು.
ಮತ ಎಣಿಕೆ ಜೂನ್ 4ರಂದು ನಗರದ ಸೆಂಟ್ ಸಿಸಿಲಿ ವಿದ್ಯಾ ಸಂಸ್ಥೆಯಲ್ಲಿ ನಡೆಯಲಿದೆ. ಅಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಮತ ಎಣಿಕೆಗೆ ನಿಯೋಜನೆಗೊಂಡಿರುವ ಅಧಿಕಾರಿ ಮತ್ತು ಸಿಬ್ಬಂದಿ ಮತ ಎಣಿಕೆ ಕಾರ್ಯದಲ್ಲಿ ಲೋಪದೋಷಗಳಾಗದಂತೆ ನೋಡಿಕೊಳ್ಳಬೇಕು ಎಂದರು.
ಮತ ಎಣಿಕೆಗೆ ಕಾರ್ಯಗಳ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದ ಅವರು ಪ್ರಜಾ ಪ್ರಾತಿನಿಧ್ಯ ಕಾಯಿದೆ ಪ್ರಕಾರ ಮತದಾನದ ರಹಸ್ಯವನ್ನು ಕಾಯ್ದುಕೊಳ್ಳ ಬೇಕೆಂದು ತಿಳಿಸಿದರು.
ಏಜೆಂಟರು ಕೇವಲ ಪೆನ್ನು ಮತ್ತು ನೋಟ್‌ಪ್ಯಾಡ್ ಮತ್ತು ಮತದಾನದ ದಿನದಂದು ಪ್ರಿಸೈಡಿಂಗ್ ಅಧಿಕಾರಿ ನೀಡಿರುವ 17-ಸಿ ಮತಪತ್ರಗಳ ಲೆಕ್ಕದ ಪ್ರತಿಯನ್ನು ತೆಗೆದುಕೊಂಡು ಬರಲು ಮಾತ್ರ ಅವಕಾಶ ನೀಡಬೇಕು, ಮತ ಎಣಿಕೆ ಕೇಂದ್ರದಲ್ಲಿ ಟೇಬಲ್ಗಳ ಸುತ್ತಲೂ ಹಾಕಿರುವ ವೈರ್ ಮೆಷ್‌ನ್ನು ದಾಟಿ ಹೋಗಲು ಅವಕಾಶವಿಲ್ಲ ಎಂದರು.
ಮತ ಎಣಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಅಂದು ಬೆಳಗ್ಗೆ 5 ಗಂಟೆಗೆ ಮತ ಎಣಿಕೆ ಕೇಂದ್ರದಲ್ಲಿ ಹಾಜರಿದ್ದು, ಉಪಹಾರ ಮುಗಿಸಿ 7 ಗಂಟೆಯೊಳಗೆ ತಮಗೆ ನಿಗದಿ ಪಡಿಸಿದ ಮತ ಎಣಿಕೆ ಕೊಠಡಿಯಲ್ಲಿ ಹಾಜರಿರಬೇಕು , ಮತ ಎಣಿಕೆ ಕೊಠಡಿಯೊಳಗೆ ಮೊಬೈಲ್ ನ್ನು ನಿಷೇಧಿಸಲಾಗಿದೆ. ಮತ ಎಣಿಕೆ ಕೊಠಡಿ ಒಳಗೆ ಮತ ಎಣಿಕೆ ಸಿಬ್ಬಂದಿಗಳು, ಏಜೆಂಟ್, ಅಭ್ಯರ್ಥಿಗಳನ್ನು ಹೊರತುಪಡಿಸಿ ಅನಾವಶ್ಯಕವಾಗಿ ಯಾರನ್ನು ಪ್ರವೇಶಕ್ಕೆ ಅನುಮತಿ ನೀಡಬಾರದು ಎಂದರು.
ಮತ ಎಣಿಕೆ ಪ್ರಾರಂಭವಾಗುವ ಮೊದಲು ಮತಯಂತ್ರದ ಎಣಿಕೆ ಸಂದರ್ಭದಲ್ಲಿ ಎಚ್ಚರಿಕೆಯಿಂದ ತಮಗೆ ವಹಿಸಿದ ಮಾರ್ಗಸೂಚಿಗಳಂತೆ ಕಾರ್ಯ ನಿರ್ವಹಿಸಬೇಕು. ಪ್ರತಿ ಮತಯಂತ್ರದ ಎಣಿಕೆಯಾದ ತಕ್ಷಣ ನಿಖರವಾಗಿ ಅಂಕಿ ಅಂಶಗಳನ್ನು ನಿಗದಿತ ನಮೂನೆಯಲ್ಲಿ ಬರೆದುಕೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ವಿದ್ಯಾ ಕುಮಾರಿ .ಕೆ ರವರು ಮತ ಎಣಿಕೆ ಕೇಂದ್ರದಲ್ಲಿ ಮತ ಎಣಿಕೆಗೆ ಕೈಗೊಂಡಿರುವ ಪೂರ್ವ ಸಿದ್ಧತೆಗಳನ್ನು ಸವಿಸ್ತಾರವಾಗಿ ವಿವರಿಸಿದ್ದರು.
ಸಭೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕೆ ,ಅಪರ ಜಿಲ್ಲಾಧಿಕಾರಿ ಮಮತಾದೇವಿ , ಸಹಾಯಕ ಚುನಾವಣಾ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.