ಕುಂದಾಪುರ : ಅಲೆಮಾರಿ ಜನಾಂಗದ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪುಂಡಾಟಿಕೆ ಮೆರೆದ ಘಟನೆ ನಡೆದಿದೆ. ಕುಂದಾಪುರ ತಾಲೂಕಿನ ಗುಲ್ವಾಡಿ ಎಂಬಲ್ಲಿ ಈ ಘಟನೆ ನಡೆದಿದ್ದು, ದೌರ್ಜನ್ಯ ನಡೆಸಿರುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ವಿವಿಧ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಇತ್ತೀಚೆಗೆ ಕುಂದಾಪುರದ ಗುಲ್ವಾಡಿ ಹೊಳೆಯಲ್ಲಿ ಮೀನು ಹಿಡಿಯುತ್ತಿದ್ದ ವೇಳೆ ಸ್ಥಳೀಯ ಗೂಂಡಾಗಳು ಮೀನು ಹಿಡಿಯಲು ನೀರಿಗಿಳಿಯದಂತೆ ನಿರ್ಬಂಧ ಹೇರಿ ಜೀವ ಬೆದರಿಕೆ ನೀಡಿರುವ ಬಗ್ಗೆ ಸ್ಥಳೀಯ ಪೊಲೀಸ್ ಇಲಾಖೆ ಮತ್ತು ಮೀನುಗಾರಿಕಾ ಇಲಾಖೆಯ ಗಮನಕ್ಕೆ ತರಲಾಗಿತ್ತು. ಈಗ ಮತ್ತೆ ಸ್ಥಳೀಯ ಕೆಲವು ದುಷ್ಕರ್ಮಿಗಳ ತಂಡ ಇಂದು ಬೆಳಿಗ್ಗೆ ಶಿಳ್ಳೆಕ್ಯಾತರ ಗುಡಿಸಲಿಗೆ ನುಗ್ಗಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಮಹಿಳೆಯರ ಮೇಲೂ ದಾಳಿ ನಡೆಸಿದ ತಂಡ ಕೊಲೆ ಬೆದರಿಕೆ ಹಾಕಿ ಜಾತಿ ನಿಂದನೆ ನಡೆಸಿ, ತಕ್ಷಣ ಊರು ಬಿಡುವಂತೆ ಬೆದರಿಸಿ, ಗುಡಿಸಲು ಧ್ವಂಸ ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ ಬದುಕುವ ಅಲೆಮಾರಿ ಸಮುದಾಯದ ಮೇಲಾಗುವ ಸಮಸ್ಯೆಗಳ ಬಗ್ಗೆ ಜಿಲ್ಲಾಡಳಿತ, ಪೊಲೀಸ್ ಇಲಾಖೆಗೆ ಈ ಹಿಂದೆಯೇ ದೂರುಗಳನ್ನು ನೀಡಿದ್ದರೂ ಅಧಿಕಾರಿಗಳು ಸ್ಪಂದಿಸಿಲ್ಲ. ಅಲೆಮಾರಿ ಸಮುದಾಯವನ್ನು ನೇರವಾಗಿ ಗುರಿಯಾಗಿಸಿ ಮಾರಣಾತಿಂಕ ಹಲ್ಲೆ ನಡೆಸುವಷ್ಟರ ಮಟ್ಟಿಗೆ ಈ ಸ್ಥಳೀಯ ಗೂಂಡಾಗಳು ಇಳಿದಿದ್ದಾರೆ. ಇನ್ನು, ಘಟನೆ ಬಗ್ಗೆ ಉಡುಪಿ ಎಸ್‌ಪಿ ಕೆ. ಅರುಣ್ ಸಂತ್ರಸ್ಥ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸುವುದಾಗಿ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ.