ವಯೋಸಹಜ ಖಾಯಿಲೆಯಿಂದ ಇಹಲೋಕ ತ್ಯಜಿಸಿದ ಮಾಧ್ಯಮ ಲೋಕದ ಭೀಷ್ಮ : ರಾಮೋಜಿ ಗ್ರೂಪ್ಸ್ ಸಂಸ್ಥಾಪಕ ರಾಮೋಜಿ ರಾವ್ – ಕಹಳೆ ನ್ಯೂಸ್
ಹೈದರಾಬಾದ್: ಮಾಧ್ಯಮ ಲೋಕದ ಭೀಷ್ಮರೆಂದೇ ಪ್ರಖ್ಯಾತಿ ಹೊಂದಿದ್ದ ರಾಮೋಜಿ ಗ್ರೂಪ್ಸ್ ಸಂಸ್ಥಾಪಕ ರಾಮೋಜಿ ರಾವ್(87) ಇಂದು ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ.
ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಜೂನ್ 5ರಂದು ಹೈದರಾಬಾದಿನ ನಾನಾಕರಮುಡದ ಸ್ಟಾರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜೂನ್ 8ರಂದು ಬೆಳಗ್ಗೆ 4.50ಕ್ಕೆ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ರಾಮೋಜಿ ರಾವ್ ಅವರ ಪಾರ್ಥಿವ ಶರೀರವನ್ನು ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿರುವ ಅವರ ನಿವಾಸದಲ್ಲಿ ಇಡಲಾಗಿದೆ. ಕುಟುಂಬಸ್ಥರು, ಸ್ನೇಹಿತರು ಹಾಗೂ ಅಭಿಮಾನಿಗಳಿಗೆ ರಾಮೋಜಿ ರಾವ್ ಅವರ ನಿವಾಸದಲ್ಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ
ರಾಮೋಜಿ ರಾವ್ ಅವರು ಕೈಗೊಂಡ ಪ್ರತಿಯೊಂದು ಯೋಜನೆಯೂ ಇಂದು ಇತಿಹಾಸ ನಿರ್ಮಿಸಿವೆ. ಮಾರ್ಗದರ್ಶಿ ಚಿಟ್ ಫಂಡ್, ಈನಾಡು ಪತ್ರಿಕೆ, ಈಟಿವಿ ನೆಟ್ ವರ್ಕ್, ರಮಾದೇವಿ ಪಬ್ಲಿಕ್ ಶಾಲೆ, ಪ್ರಿಯಾ ಫುಡ್ಸ್, ಕಲಾಂಜಲಿ, ಉಷಾಕಿರಣ್ ಮೂವೀಸ್, ಮಯೂರಿ ಫಿಲ್ಮ್ ಡಿಸ್ಟ್ರಿಬ್ಯೂಷನ್, ಡಾಲ್ಪಿನ್ಸ್ ಹೋಟೆಲ್ಸ್ ಸೇರಿದಂತೆ ಅನೇಕ ಉದ್ಯಮಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಯಶಸ್ಸು ಕಂಡಿದ್ದಾರೆ.