ಮಲ್ಯಾಡಿ: ಮುಂಗಾರು ಮಳೆ ಆರಂಭ, ಭರ್ಜರಿ ಮೀನು ಶಿಕಾರಿ : 5 ಕೆಜೆಗೂ ಅಧಿಕ ಭಾರವಿದ್ದ ಮೀನುಗಳು : ಮೀನು ಸಿಕ್ಕ ಸಂಭ್ರಮದಲ್ಲಿ ಸ್ಥಳೀಯರು : 500 ಕೆಜಿಗೂ ಅಧಿಕ ಸಿಕ್ಕ ಮೀನುಗಳು – ಕಹಳೆ ನ್ಯೂಸ್
ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ಗ್ರಾಮೀಣ ಭಾಗಗಳಲ್ಲಿ ಒಂದೆಡೆ ಕೃಷಿ ಕಾಯಕ ಆರಂಭಗೊಂಡರೆ ಇನ್ನೊಂದೆಡೆ ಜನರು ಮೀನುಗಾರಿಕೆ, ಶಿಕಾರಿಗಳಲ್ಲಿ ತೊಡಗಿಕೊಳ್ಳುವುದು ಸಾಮಾನ್ಯ. ಹೊಲ, ಗದ್ದೆ, ಕೆರೆ, ಕೊಳಗಳಲ್ಲಿ ಮಳೆಗಾಲದಲ್ಲಿ ನೀರು ತುಂಬಿ ಹರಿಯುವ ಕಾರಣ ಇತರೆಡೆಗಳಿಂದ ಮೀನುಗಳು ವಲಸೆ ಬರುವುದರಿಂದ ತೆಕ್ಕಟ್ಟೆ ಗ್ರಾಮದ ಮಲ್ಯಾಡಿ ಭಾಗದ ಹೊಳೆ ಹಾಗೂ ಕೊಜೆ ಹೊಂಡದಲ್ಲಿ ನೂರಾರು ಸಂಖ್ಯೆಯಲ್ಲಿ ನೆರೆದ ಸ್ಥಳೀಯರು ಮೀನು ಬೇಟೆ ನಡೆಸಿ ಋಷಿಪಟ್ಟರು.
ಈಗಾಗಲೇ ಮುಂಗಾರು ಚುರುಕುಗೊಂಡಿರುವುದರಿಂದ ತಾಲೂಕಿನ ಅಲ್ಲಲ್ಲಿ ಮಳೆಗಾಲದ ಮೀನು ಬೇಟೆ ಆರಂಭಗೊಂಡಿದೆ. ಹೊಗೆ ಮೀನು ಬರುವ ಸಮಯದಲ್ಲಿ ಮೀನು ಬೇಟೆಯಾಡುವ ಪ್ರಕ್ರಿಯೆ ನಡೆಯುತ್ತದೆ. ಮಲ್ಯಾಡಿ ಹೊಳೆ ಸಾಲಿನಲ್ಲಿ ಬಲೆ ಹಾಕಿದ್ದ ಸ್ಥಳೀಯರಿಗೆ ಸುಮಾರು 5 ಕೆಜಿಗಿಂತಲೂ ಅಧಿಕ ಗಾತ್ರದ ಮೀನುಗಳು ಸಿಕ್ಕಿದ್ದನ್ನು ಕಂಡು ಹರ್ಷಗೊಂಡು ಕುಣಿದು ಕುಪ್ಪಳಿಸಿದ್ದಾರೆ.
ಹಲವರು ಮಂದಿ ಗದ್ದೆಯಲ್ಲಿ ಹಾಗು ಕೊಜೆ ಹೊಂಡದಲ್ಲಿ ನೀರಿನಲ್ಲಿ ಸಾಗುವ ಮೀನಿನ ಜಾಡು ಹಿಡಿದು ಪಕ್ಕನೆ ಹಿಡಿದು ಸಂಭ್ರಮಿಸಿದರು. ಸ್ಥಳೀಯರ ಮೀನು ಬೇಟೆಯಲ್ಲಿ ಮರಿ ಶಾಡಿ, ಕಾಟ್ಲಾ ಸೇರಿದಂತೆ ಹಲವು ಬಗೆಯ ಮೀನುಗಳು ಲಭ್ಯವಾಗಿದೆ. ಒಂದೊಂದು ಮೀನುಗಳು ತಲಾ 5 ಕೆಜಿ ತೂಕ ಇರಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ.
ಹರಿದ ಬಲೆಗಳೇ ಸಾಧನ: ಮಳೆಗಾಲದ ಮೀನಿನ ಶಿಕಾರಿಗೆ ಉಪಯೋಗಿಸಿ ಬಿಸಾಡಿದ ಹಳೆಯ ಮೀನಿನ ಬಲೆಗಳು, ಸೊಳ್ಳೆ ಪರದೆಗಳೇ ಸಾಧನಗಳಾಗಿರುತ್ತವೆ. ನಾನಾ ಬಗೆಯ, ನಾನಾ ಜಾತಿಯ ಮೀನುಗಳನ್ನು ಬಲೆ ಬೀಸಿ, ಗಾಳ ಹಾಕಿ, ಗದ್ದೆಗಳ ಬದುಗಳಲ್ಲಿ ಬಲೆಗಳನ್ನು ಕಟ್ಟುವುದು, ತೋಡುಗಳಲ್ಲಿ ಬಲೆಗಳನ್ನು ಬೀಡುವುದರ ಮೂಲಕ ಹೀಗೆ ಹಲವು ವಿಧಾನಗಳ ಮೂಲಕ ಶಿಕಾರಿಯಲ್ಲಿ ತೊಡಗಿಕೊಳ್ಳುತ್ತಾರೆ.
ಗದ್ದೆಗಳಲ್ಲಿ ಶಿಕಾರಿ: ಸಾಮಾನ್ಯವಾಗಿ ನದಿ ಪಾತ್ರಗಳಲ್ಲಿ, ತೋಡು, ಕೆರೆಗಳ ಸಮೀಪವಿರುವ ಗದ್ದೆಗಳಲ್ಲಿ ಮೀನಿನ ಸಂಖ್ಯೆಗಳೂ ಅಧಿಕವಾಗಿರುತ್ತವೆ. ಮಳೆ ನಿರಂತರ ಬರುವ ಸಂದರ್ಭ ತೋಡು, ಕೆರೆ, ನದಿಗಳಲ್ಲಿ ನೀರು ಉಕ್ಕಿ ಹರಿಯುತ್ತವೆ. ಆಗ ಗದ್ದೆಗಳಲ್ಲಿಯೂ ನಿಲ್ಲುವ ನೀರಿನಲ್ಲಿ ಬಲೆ ಕಟ್ಟಿ ಮೀನು ಹಿಡಿಯುವ ವಿಧಾನ ಕಂಡುಕೊಂಡಿದ್ದಾರೆ.
ಕೆಜೆಗಟ್ಟಲೇ ಮೀನು ಶಿಕಾರಿ : ಸುಮಾರು 6 ರಿಂದ 7 ಮಂದಿ ಇರುವ ಹಲವು ತಂಡದಲ್ಲಿ ಸುಮಾರು 500 ಕೆಜಿಗೂ ಅಧಿಕ ಕಾಟ್ಲಾ ಮೀನುಗಳು ದೊರೆತಿವೆ. ಒಂದೊಂದು ಮೀನುಗಳು 5 ರಿಂದ 6 ಕೆಜಿ ತೂಕದಾಗಿದ್ದು ಔಷಧೀಯ ಅಂಶಗಳ್ಳುಳ್ಳ ಈ ಮೀನುಗಳಿಗೆ ಭಾರೀ ಬೇಡಿಕೆಗಳಿದ್ದು ಸುಮಾರು 500 ರಿಂದ 600 ರೂಪಾಯಿಗೆ ಸ್ಥಳದಲ್ಲಿಯೇ ಮಾರಾಟ ಮಾಡಿದ್ದಾರೆ.
ಮಳೆಗಾಲದಲ್ಲಿ ಶಿಕಾರಿ ಒಂದು ರೀತಿಯ ಖುಷಿಯ ಜತೆಗೆ ತಾಜಾ ಮೀನಿನ ಲಭ್ಯತೆಗೂ ಕಾರಣವಾಗುತ್ತದೆ. ಹಾಗಾಗಿ ಹಳ್ಳಿಗಳಲ್ಲಿ ಇದು ರೂಢಿಯಲ್ಲಿದೆ. ನಾವು ಮೂಲ ಮೀನುಗಾರರಾಗಿದ್ದು ಸಮುದ್ರದಲ್ಲಿಯೂ ಮತ್ತು ನದಿಗಳಲ್ಲಿಯೂ ಬಲೆ ಹಾಕಿ ಮೀನುಗಾರಿಕೆ ನಡೆಸುತ್ತೇವೆ. ಜತೆಗೆ ಮೀನುಗಾರಿಕೆ ನಿಷೇದ ಇರುವುದರಿಂದ ಮಳೆಗಾಲದ ಈ ರೀತಿಯ ಮೀನು ಶಿಕಾರಿಯೂ ನಡೆಸುತ್ತೇವೆ. ತುಂಬಾ ಮಳೆ ಬಿದ್ದ ಕಾರಣ ಒಳ್ಳೆಯ ಪ್ರಮಾಣದಲ್ಲಿ ಮೀನು ಸಿಕ್ಕಿದೆ. ಒಂದೆರೆಡು ದಿನಗಳು ಕಳೆದರೇ ಮತ್ತೇ ಈ ರೀತಿ ಮೀನು ಸಿಗುವುದಿಲ್ಲ.
ಉದಯ ಕೊರವಡಿ, ಮೀನುಗಾರರು : ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಉತ್ತಮವಾದ ಮೀನುಗಳು ಸಿಕ್ಕಿವೆ. ಆದರೆ ಇಷ್ಟು ವರ್ಷ ಮುಂಗಾರು ಆರಂಭವಾದ ಹಲವು ದಿನಗಳ ಬಳಿಕ ಈ ರೀತಿಯ ಮೀನುಗಳು ಸಿಗುತ್ತಿದ್ದವು. ಆದರೆ ಈ ಭಾರೀ ಮಳೆ ಆರಂಭಗೊಂಡು ಕೇವಲ ನಾಲ್ಕೈದು ದಿನಗಳಲ್ಲಿ ಮೀನುಗಳು ಈ ರೀತಿ ಗುಂಪು ಗುಂಪಾಗಿ ಸಿಗುತ್ತಿದೆ. ನಮ್ಮಲ್ಲಿನ ಈ ಮೀನು ಶಿಕಾರಿಗೆ ಸ್ಥಳೀಯರಲ್ಲದೇ ಅಕ್ಕಪಕ್ಕದ ಗ್ರಾಮಗಳಿಂದ ಮೀನು ಹಿಡಿಯಲು ಜನರ ದಂಡೆ ಬರುತ್ತಿದೆ.