ಉತ್ತರ ಪ್ರದೇಶ : ಮುಂಬರಲಿರುವ ಬಕ್ರೀದ್ ಹಬ್ಬವನ್ನು ಗಮನದಲ್ಲಿಟ್ಟುಕೊಂಡು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಟ್ಟು ನಿಟ್ಟಿನ ಸೂಚನೆಯನ್ನು ನೀಡಿದ್ದಾರೆ. ರಸ್ತೆಗಳಲ್ಲಿ ನಮಾಜ್ ಮಾಡುವುದನ್ನು ನಿಷೇಧಿಸಲಾಗಿದೆ. ನಿಷಿದ್ಧ ಪ್ರಾಣಿಗಳನ್ನು ಬಲಿಕೊಡುವುದು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು, ಅಷ್ಟೇ ಅಲ್ಲದೆ ನಿಗದಿಪಡಿಸಿದ ಸ್ಥಳಗಳನ್ನು ಹೊರತಪಡಿಸಿ ಬೇರೆ ಸ್ಥಳಗಳಲ್ಲಿ ಪ್ರಾಣಿಗಳನ್ನು ಬಲಿಕೊಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ವಿವಾದಿತ ಅಥವಾ ಸೂಕ್ಷ್ಮ ಸ್ಥಳಗಳಲ್ಲಿ ಬಲಿ ನೀಡಬಾರದು. ನಿಷೇಧಿತ ಪ್ರಾಣಿಗಳನ್ನು ಬಲಿ ಕೊಡದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಬಲಿ ನಂತರ ತ್ಯಾಜ್ಯ ವಿಲೇವಾರಿಗೆ ವ್ಯವಸ್ಥಿತ ಕ್ರಿಯಾ ಯೋಜನೆಯನ್ನು ಎಲ್ಲಾ ಜಿಲ್ಲೆಗಳಲ್ಲಿ ಪ್ರಾರಂಭಿಸಬೇಕು.
ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಆಡಳಿತ ಅಧಿಕಾರಿಗಳು ಮತ್ತು ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ಬಲವಾದ ಹಿಡಿತವನ್ನು ಕಾಯ್ದುಕೊಳ್ಳುವಂತೆ ಯೋಗಿ ಆದಿತ್ಯನಾಥ್ ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ. ಹಿಂದೂಗಳು ಜೂನ್ 16 ರಂದು ಗಂಗಾ ದಸರಾವನ್ನು ಆಚರಿಸಿದರೆ, ಮುಸ್ಲಿಮರು ಜೂನ್ 17 ರಂದು ಬಕ್ರೀದ್ ಆಚರಿಸುತ್ತಾರೆ, ನಂತರ ಜುಲೈ 22 ರಂದು ಹಿಂದೂ ಭಕ್ತರು ಕನ್ವರ್ ಯಾತ್ರೆಯನ್ನು ಪ್ರಾರಂಭಿಸುತ್ತಾರೆ. ಜೂನ್ 18 ರಂದು ಬಡಾ ಮಂಗಲ್ ಹಬ್ಬವನ್ನು ಆಚರಿಸಲಾಗುವುದು ಮತ್ತು ಜೂನ್ 21 ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗುವುದು ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಜುಲೈನಲ್ಲಿ ಮೊಹರಂ (ಜುಲೈ 17) ಮತ್ತು ಕನ್ವರ್ ಯಾತ್ರೆಯಂತಹ ಕಾರ್ಯಕ್ರಮಗಳು ನಡೆಯಲಿವೆ. ಕಾನೂನು ಮತ್ತು ಸುವ್ಯವಸ್ಥೆಯ ದೃಷ್ಟಿಯಿಂದ ಈ ಅವಧಿ ಅತ್ಯಂತ ಸೂಕ್ಷ್ಮವಾಗಿದೆ. ಸರ್ಕಾರ ಮತ್ತು ಆಡಳಿತವು ಕ್ರಿಯಾಶೀಲವಾಗಿರಬೇಕು ಎಂದು ತಿಳಿಸಿದ್ದಾರೆ.