ಜೂ.16ರಂದು ನೂತನ ” ರಾಮಕೃಷ್ಣ ವಿದ್ಯಾದೇಗುಲ”ದ ಭೂಮಿ ಪೂಜೆ : ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಸ್ವಾಮೀಜಿ – ಕಹಳೆ ನ್ಯೂಸ್
ಬಂಟ್ವಾಳ: ಪೊಳಲಿಯಲ್ಲಿರುವ ಶ್ರೀ ರಾಮಕೃಷ್ಣ ತಪೋವನದ ವತಿಯಿಂದ ಪಲ್ಲಿಪಾಡಿ ಎಂಬಲ್ಲಿ ಸುಮಾರು 6 ಎಕರೆ ಜಮೀನಿನಲ್ಲಿ ರೂ.75ಕೋಟಿ ವೆಚ್ಚದಲ್ಲಿ ಆಧುನಿಕ ಮತ್ತು ಗುರುಕುಲ ಮಾದರಿಯ ಹೈಟೆಕ್ ಶಿಕ್ಷಣಕ್ಕೆ ಒತ್ತುನೀಡುವ ನಿಟ್ಟಿನಲ್ಲಿ ” ರಾಮಕೃಷ್ಣ ವಿದ್ಯಾದೇಗುಲ” ಎಂಬ ಹೊಸ ಶಿಕ್ಷಣ ಸಂಸ್ಥೆ ಪ್ರಾರಂಭಕ್ಕೆ ಜೂನ್ 16 ರಂದು ಆದಿತ್ಯವಾರ ಬೆಳಿಗ್ಗೆ 8.30 ಗಂಟೆಗೆ ಭೂಮಿ ಪೂಜೆ ನಡೆಯಲಿದೆ ಎಂದು ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಸ್ವಾಮೀಜಿ ತಿಳಿಸಿದರು.
ಅವರು ಕ್ಷೇತ್ರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎಲ್.ಕೆ.ಜಿ ಯಿಂದ ಪಿಯುಸಿ ವರೆಗಿನ ನೈತಿಕತೆ ಮತ್ತು ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವ ಉದ್ದೇಶದಿಂದ ರಾಮಕೃಷ್ಣ ಮಠ ಯೋಚನೆ ಮಾಡಿ ಯೋಜನೆ ರೂಪಿಸಿದೆ ಎಂದು ಅವರು ತಿಳಿಸಿದರು.
ಮಾಡರ್ನ್ ಸ್ಕೂಲ್, ಗುರುಕುಲ ಶಿಕ್ಷಣ, ಹಾಸ್ಟೆಲ್ ಹಾಗೂ ಆಧ್ಯಾತ್ಮಿಕವಾದ ಕಲಿಕೆಗೆ ಸಂಬAಧಿಸಿದ ಬೇರೆ ಬೇರೆ ರೀತಿಯ ಕಟ್ಟಡಗಳು ನಿರ್ಮಾಣವಾಗಲಿದೆ. ಆಟ,ಪಾಠದ ಜೊತೆಯಲ್ಲಿ ಕ್ರೀಡೆ,ಕೃಷಿಗೆ ಪೂರಕವಾದ ವಾತವಾರಣ ನಿರ್ಮಿಸಿ, ಮಕ್ಕಳಲ್ಲಿ ಇವೆಲ್ಲವೂ ಮೈಗೂಡಿಸಿಕೊಂಡು ಬೆಳೆಯುವ ರೀತಿಯಲ್ಲಿ ತರಬೇತಿ ನೀಡಲಾಗುತ್ತದೆ.
ರಾಮಕೃಷ್ಣ ವಿದ್ಯಾದೇಗುಲಕ್ಕೆ ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜೀ ಮಹಾರಾಜ್ ಅವರು ಶಿಲಾನ್ಯಾಸ ನೆರವೇರಿಸಿ,ಆಶ್ರೀರ್ವಚನ ನೀಡಲಿದ್ದಾರೆ. ನಿಟ್ಟೆ ಪರಿಗಣಿತ ವಿದ್ಯಾಲಯದ ಕುಲಪತಿ ಎನ್.ವಿನಯ ಹೆಗ್ಡೆ, ಎಮ್.ಆರ್.ಜಿ.ಗ್ರೂಪ್ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಸಂಸದ ಬ್ರಿಜೇಶ್ ಚೌಟ, ಶಾಸಕ ರಾಜೇಶ್ ನಾಯ್ಕ್ ,ಮಾಜಿ ಮಂತ್ರಿ ಬಿ.ರಮಾನಾಥ ರೈ, ಬಡಗಬೆಳ್ಳೂರು ಗ್ರಾ.ಪಂ.ಅಧ್ಯಕ್ಷೆ ರೂಪಶ್ರೀ, ಕರಿಯಂಗಳ ಗ್ರಾ.ಪಂ.ಅಧ್ಯಕ್ಷೆ ರಾಧಲೋಕೇಶ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಸ್ಕೇಟಿಂಗ್, ಕರಾಟೆ, ಜ್ಯುಡೋ ತರಬೇತಿಗಳನ್ನು ಮಠದ ಹಾಸ್ಟೆಲ್ ನಲ್ಲಿರುವ ವಿದ್ಯಾರ್ಥಿಗಳಿಗೆ ಪ್ರಸ್ತುತ ನೀಡಲಾಗುತ್ತಿದ್ದು, ಇಲ್ಲಿನ ವಿದ್ಯಾರ್ಥಿಗಳು ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ ಎಂಬುದು ಹೆಮ್ಮೆಯ ವಿಚಾರ ಎಂದು ಅವರು ತಿಳಿಸಿದರು. ಕರ್ನಾಟಕದ ಬೇರೆ ಬೇರೆ ಭಾಗದದಿಂದ ಅಲ್ಲದೆ ಮೇಘಾಲಯದ ಮಕ್ಕಳು ಕೂಡ ಮಠದ ಹಾಸ್ಟೆಲ್ ನಲ್ಲಿದ್ದಾರೆ. ಕಳೆದ 16 ವರ್ಷಗಳಿಂದ ತಾಲೂಕಿನಅನೇಕ ಶಾಲೆಗಳಿಗೆ ಉಚಿತ ಪಠ್ಯ ಹಾಗೂ ಪಠ್ಯೇತರ ಸಾಮಾಗ್ರಿಗಳನ್ನು ಉಚಿತವಾಗಿ ನೀಡಲಾಗುತ್ತಿದ್ದೇವೆ, ಕಾಲೇಜು ಮಕ್ಕಳಿಗೆ ಸ್ಕಾಲರ್ ಶಿಪ್, ವ್ಯಕ್ತಿತ್ವ ವಿಕಸನ ತರಬೇತಿಗಳನ್ನು ನೀಡಲಾಗುವ ಬಗ್ಗೆ ಅವರು ತಿಳಿಸಿದರು.
ಮಠದ ವತಿಯಿಂದ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ನಿರ್ಗತಿಕ ಕುಟುಂಬಕ್ಕೆ ಮನೆ ನಿರ್ಮಾಣ, ಅನಾರೋಗ್ಯ ಪೀಡಿತರಿಗೆ ಸಹಾಯ,ಸ್ವಚ್ಚ ಭಾರತ್ ಅಭಿಯಾನ ಕಾರ್ಯಕ್ರಮ ಮಾಡಿದ್ದೇವೆ. ಗ್ರಾಮೀ ಭಾಗದ ಮಹಿಳೆಯರು ಸ್ವಾವಲಂಬನೆಯ ಬದುಕು ನಡೆಸಬೇಕು ಎಂಬ ಉದ್ದೇಶದಿಂದ ಮಹಿಳೆಯರಿಗೆ ಟೈಲರಿಂಗ್ ತರಬೇತಿ, ಎಂಬ್ರಾಡರಿ ತರಬೇತಿ, ಬ್ಯೂಟಿಷಿಯನ್ ತರಬೇತಿ, ಡೆಕೋರೇಟಿವ್ ತರಬೇತಿಗಳನ್ನು ನೀಡಲಾಗುತ್ತಿದೆ. ಇದರ ಜೊತೆಗೆ ಯಕ್ಷಗಾನ,ಸಂಗೀತ ತರಬೇತಿಗಳನ್ನು ನೀಡಲಾಗಿದೆ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಕರಿಯಂಗಳ ಗ್ರಾಮಪಂಚಾಯತ್ ಸದಸ್ಯ ಚಂದ್ರಹಾಸ ಪಲ್ಲಿಪಾಡಿ ಉಪಸ್ಥಿತರಿದ್ದರು.