Sunday, November 24, 2024
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳ ತಾಲೂಕಿನ ಮಂಚಿ ಕೊಳ್ನಾಡು ಸರಕಾರಿ ಪ್ರೌಢಶಾಲೆಯಲ್ಲಿ ಯಕ್ಷಧ್ರುವ – ಯಕ್ಷ ಶಿಕ್ಷಣ ಉದ್ಘಾಟನಾ ಕಾರ್ಯಕ್ರಮ -ಕಹಳೆ ನ್ಯೂಸ್

ಕಲೆಯ ಸೊಬಗೊಂದಿದ್ದರೆ ಅವಗಣಿಸಿದ ವಸ್ತು ಕೂಡ ಸುಂದರವಾಗಿ ಮಿನುಗಬಲ್ಲುದು. ನಿತ್ಯ ಶಾಲೆಗೆ ಹೋಗುವ ಮಕ್ಕಳು ಕೂಡ ಯಾವುದಾದರೊಂದು ಪ್ರತಿಭೆಯನ್ನು ಮೈಗೂಡಿಸಿಕೊಂಡರೆ ಆ ಮಗು ಕೂಡ ಪ್ರತಿಭಾ ಸಂಪನ್ನವಾಗುತ್ತದೆ. ಅವಕಾಶ ವಂಚಿತ ಯಕ್ಷಗಾನ ಪ್ರಿಯವುಳ್ಳ ಪ್ರತಿಯೊಬ್ಬ ಮಗು ಕೂಡ ಯಕ್ಷರಂಗದ ಹೊಸ್ತಿಲನ್ನು ತುಳಿಯಬೇಕೆನ್ನುವ ಕನಸು ಪಟ್ಲ ಸತೀಶ್ ಶೆಟ್ಟಿ ಇವರದ್ದು. ಇದೇ ಉದ್ದೇಶದಿಂದ ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ) ಇವರು ಸರಕಾರಿ ಪ್ರೌಢ ಶಾಲಾ ಮಕ್ಕಳಿಗೆ ಯಕ್ಷಧ್ರುವ ಯಕ್ಷ ಶಿಕ್ಷಣ ಎನ್ನುವ ವಿಶೇಷ ಕಾರ್ಯಯೋಜನೆಯನ್ನು ಹಮ್ಮಿಕೊಂಡಿದ್ದಾರೆ.

ಈ ಯಕ್ಷಗಾನ ಕಲಿಕಾ ಯೋಜನೆಯು ಕಳೆದ ಶೈಕ್ಷಣಿಕ ಸಾಲಿನಿಂದ ಮಂಚಿ ಕೊಳ್ನಾಡು ಸರಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸುತ್ತಾ ಬರುತ್ತಿದ್ದು. ಎರಡನೇ ಅವಧಿಯ 2024 – 25ನೇ ಶೈಕ್ಷಣಿಕ ಸಾಲಿನ ಯಕ್ಷ ಶಿಕ್ಷಣ ದ ಉದ್ಘಾಟನಾ ಕಾರ್ಯಕ್ರಮನ್ನು ಮಂಚಿ ಕೊಳ್ನಾಡು ಸರ್ಕಾರಿ ಪ್ರೌಢಶಾಲಾ ಸಭಾಂಗಣದಲ್ಲಿ ಜೂ.14 ರಂದು ನೆರವೇರಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಶುಭಾರಂಭ ನೀಡಿದ ಹಿರಿಯ ವಿದ್ಯಾರ್ಥಿ ಹಾಗೂ ಹವ್ಯಾಸಿ ಯಕ್ಷಗಾನ ಕಲಾವಿದ ಕುಕ್ಕಾಜೆ ಕೃಷ್ಣರಾಜ ರೈ ಮಾತನಾಡಿ “ಓರ್ವ ವ್ಯಕ್ತಿಯ ಬದುಕಿನಲ್ಲಿ ತಿರುವನ್ನು ನೀಡಬಲ್ಲ , ವಾಕ್ಚಾತುರ್ಯ ಹಾಗೂ ಭಾವಾಭಿನಯ ಪ್ರಾಧಾನ್ಯವಾದ ಯಕ್ಷಗಾನ ಕಲೆಯು ಕರಾವಳಿ ಭಾಗದ ಗಂಡು ಕಲೆಯಾಗಿದೆ. ವಿವಿಧ ಸ್ಧಿತ್ಯಂತರಗಳನ್ನು ದಾಟುತ್ತಾ ವೈವಿಧ್ಯ ಆಯಾಮಗಳನ್ನು ಯಕ್ಷಗಾನದಲ್ಲಿ ಕಂಡಿದ್ದೇವೆ. ಭವಿಷ್ಯದ ಜನಾಂಗ ಯಕ್ಷಗಾನ ರಂಗವನ್ನು ಕಾಪಾಡಿಕೊಂಡು ದಾಟಿಸುವ ಪ್ರಯತ್ನಕ್ಕೆ ಯಕ್ಷಧ್ರುವ ಯಕ್ಷ ಶಿಕ್ಷಣ ದೊಡ್ಡ ಕ್ರಾಂತಿಯನ್ನು ಮಾಡಿದೆ.” ಎಂದು ಹೆಮ್ಮೆಯಿಂದ ನುಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪಟ್ಲ ಫೌಂಡೇಶನ್ ವಿಟ್ಲ ಘಟಕದ ಅಧ್ಯಕ್ಷರಾದ, ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ ಮುಖ್ಯ ಅತಿಥಿಯಾಗಿ ಭಾಗವಹಿಸಿ, “ಜಾತಿ ಮತಗಳನ್ನು ಮೀರಿ ಬೆಳೆದ ಯಕ್ಷಗಾನಕ್ಕೆ ಎಲ್ಲಾ ವರ್ಗದ ಅಭಿಮಾನಿಗಳು ಹಿತೈಷಿಗಳು ಪೋಷಕರಾಗಿದ್ದಾರೆ. ಸಾಧಾರಣ ಕಲಾವಿದನೊಬ್ಬನನ್ನು ಉನ್ನತ ಮಟ್ಟದ ಸಾಧಕನನ್ನಾಗಿ ಈ ರಂಗ ಪರಿಚಯಿಸುತ್ತಾ ಹಲವು ಮಹಾನ್ ಕಲಾವಿದರನ್ನು ಈ ನಾಡಿಗೆ ಕೊಡುಗೆಯಾಗಿ ನೀಡಿದೆ. ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಭವಿಷ್ಯದ ಸಾಧಕರಾಗಿ ಯಕ್ಷಗಾನದ ಉಳಿಯುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕು.” ಎಂದರು.

ಯಕ್ಷಗಾನ ಗುರುಗಳಾಗಿ ಕಲಾವಿದ ಅಶ್ವತ್ ಮಂಜನಾಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಅಧ್ಯಕ್ಷ ಸ್ಥಾನದಲ್ಲಿ ಮಂಚಿ ಕೊಳ್ನಾಡು ಪ್ರೌಢಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಸೆರ್ಕಳ, ಅತಿಥಿಗಳಾಗಿ ನಿವೃತ್ತ ನೂಜಿಬೈಲು ಪ್ರಾಥಮಿಕ ಶಾಲಾ ಶಿಕ್ಷಕಿ ಅನುಸೂಯ ರಾವ್, ಹಿರಿಯ ವಿದ್ಯಾರ್ಥಿ ಹಾಗೂ ಪ್ರಗತಿಪರ ಕೃಷಿಕ ನಿಶ್ಚಲ್ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಶಿವಶಂಕರ ರಾವ್, ಕಲಾವಿದ ತಾರಾನಾಥ್ ಕೈರಂಗಳ ಹಾಗೂ ಎಲ್ಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮ್ ಪ್ರಸಾದ್ ರೈ ತಿರುವಾಜೆ ಸ್ವಾಗತಿಸಿ, ಮುಖ್ಯೋಪಾಧ್ಯಾಯರಾದ ಸುಶೀಲ ವಿಟ್ಲ ವಂದಿಸಿ, ಕನ್ನಡ ಭಾಷಾ ಶಿಕ್ಷಕಿ ವಿಜಯಲಕ್ಷ್ಮಿ ಕಟೀಲು ಕಾರ್ಯಕ್ರಮ ನಿರೂಪಿಸಿದರು