Sunday, January 19, 2025
ಸುದ್ದಿ

ಶಿಕ್ಷಕರು ಹೆಜ್ಜೆ-ಹೆಜ್ಜೆಯಲ್ಲೂ ಸಮಾಜಕ್ಕೆ ಮಾದರಿಯಾಗಿರಬೇಕು: ಶ್ರೀ ಚಂದ್ರಶೇಖರ್ ಭಟ್ – ಕಹಳೆ ನ್ಯೂಸ್

ಪುತ್ತೂರು: “ವಿದ್ಯಾರ್ಥಿಗಳು ಶಿಕ್ಷಕನ ಬದುಕಿನ ಒಂದೊಂದು ಪುಟಗಳು. ಈ ಪುಟಗಳು ಹೇಗಿರಬೇಕೆಂದರೆ ಕೊನೆಗೊಮ್ಮೆ ಪುಟಗಳನ್ನು ತಿರುವಿದಾಗ ಸಾರ್ಥಕತೆ ಎದ್ದು ಕಾಣಬೇಕು. ವಿದ್ಯಾರ್ಥಿಗಳ ಸರಿತಪ್ಪುಗಳನ್ನು ಗುರುತಿಸಿ, ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಶಿಕ್ಷಕನೊಬ್ಬ ಬಯಸುವುದು ವಿದ್ಯಾರ್ಥಿಯ ಉತ್ತರೋತ್ತರ ಏಳಿಗೆಯನ್ನು ಮತ್ತು ಸಮಾಜದ ಕೇಂದ್ರಬಿಂದುವಾಗಬೇಕೆಂದು. ಶಿಕ್ಷಕರು ಹೆಜ್ಜೆ-ಹೆಜ್ಜೆಯಲ್ಲೂ ಸಮಾಜಕ್ಕೆ ಮಾದರಿಯಾಗಿರಬೇಕು. ವಿದ್ಯಾರ್ಥಿಗಳು ತಮ್ಮ ಮನಸ್ಸನ್ನು ತಿಳಿಯಾಗಿಸಿಟ್ಟುಕೊಳ್ಳಬೇಕು ಬದುಕಿನ ಪಯಣದಲ್ಲಿ ಮಾಲಕರಾಗಿ ಸಂಸ್ಥೆ ಮುಖ್ಯಸ್ಥರು, ಚಾಲಕರುಗಳಾಗಿ ಉಪನ್ಯಾಸಕರು, ಪಯಣಿಗರಾಗಿ ದಡಸೇರಲು ಬಯಸುವ ವಿದ್ಯಾರ್ಥಿಗಳು ಈ ಪ್ರಗತಿ ಸ್ಟಡಿ ಸೆಂಟರ್‍ನ್ನು ಯಶಸ್ವಿನ ಉತ್ತುಂಗಕ್ಕೆ ಏರಿಸಿದ್ದಾರೆ.

ಜೀವನದಲ್ಲಿ ಹಲವಾರು ಸಮಸ್ಯೆಗಳು ಬರುತ್ತವೆ. ಸಮಸ್ಯೆಗೆ ಪರಿಹಾರ ಇಲ್ಲದೇ ಇರುವಂತಹದು ಈ ಜಗತ್ತಿನಲ್ಲೇ ಇಲ್ಲ, ಆದರೆ ಅದನ್ನು ಕಂಡುಕೊಳ್ಳುವ ರೀತಿಯನ್ನು ಅರಿಯಬೇಕಾಗಿದೆ, ವಿದ್ಯಾರ್ಥಿಗಳಾದ ನೀವು ದೇಶವನ್ನು ಕಟ್ಟುವಲ್ಲಿ ನಿಮ್ಮ ತನುಮನವನ್ನು ಕರ್ತವ್ಯದಲ್ಲಿ ತೊಡಗಿಸಿಕೊಳ್ಳಿ. ಜೀವನದಲ್ಲಿ ಎರಡು ಯಾತ್ರೆಗಳಿವೆ. ಅವೆಂದರೆ ಬಹಿರಂಗ ಯಾತ್ರೆ ಮತ್ತು ಅಂತರಂಗ ಯಾತ್ರೆ. ಬಹಿರಂಗ ಯಾತ್ರೆಯಲ್ಲಿ ಪ್ರಾಥಮಿಕ, ಪ್ರೌಢ, ಪದವಿಪೂರ್ವ, ಪದವಿ, ಸ್ನಾತಕೋತ್ತರ ಹಾಗೆಯೇ ಅಂತರಂಗ ಯಾತ್ರೆಯಲ್ಲಿ ಸತ್ಯ, ಧರ್ಮ ಶಾಂತಿ, ಪ್ರೇಮ, ಅಹಿಂಸೆ ಇವುಗಳೇ ಬದುಕಿನ ಅಡಿಪಾಯ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಯಾವಾಗ ವ್ಯಕ್ತಿಯೊಬ್ಬ ಇಪ್ಪತ್ತೆರಡು ವರ್ಷಗಳವರೆಗೆ ಈ ಯಾತ್ರೆಯಲ್ಲಿ ಪರಿಪೂರ್ಣವಾಗಿರುತ್ತಾನೋ, ತದನಂತರ ಬ್ರಹ್ಮನಿಂದಲೂ ಆತನನ್ನು ಬದಲಿಸಲು ಸಾಧ್ಯವಾಗದು” ಎಂದು ಉಜಿರೆ ಎಸ್.ಡಿ.ಎಂ ಸೆಕೆಂಡರಿ ಅನುದಾನಿತ ಶಾಲೆಯ ಸಹಾಯಕ ಶಿಕ್ಷಕರಾದ ಚಂದ್ರಶೇಖರ ಭಟ್ ಪ್ರಮುಖ ಉಪನ್ಯಾಸಕರಾಗಿ, ಉದ್ಘಾಟಿಸಿ, ಅ. 28ರಂದು ಪುತ್ತೂರು ಬಪ್ಪಳಿಗೆ ಬ್ರಹ್ಮಶ್ರೀ ನಾರಾಯಣ ಗುರು ಸಭಾ ಭವನದಲ್ಲಿ ನಡೆದ “ಪ್ರಗತಿ ಸಮಾಗಮ-2018-19ನೇ ಸಾಲಿನ ರಕ್ಷಕ-ಶಿಕ್ಷಕ ಸಂಘದ ಮಹಾಸಭೆಯ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಚಾಲಕರಾದ ಪಿ.ವಿ.ಗೋಕುಲ್‍ನಾಥ್ ಶಿಕ್ಷಕ-ರಕ್ಷಕ ಸಮಾರಂಭದಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಮತ್ತು ಶೈಕ್ಷಣಿಕ ಚಟುವಟಿಕೆಗಳನ್ನುದ್ಧೇಶಿಸಿ, ಸಂಸ್ಥೆಯ ಮತ್ತು ಪೋಷಕರ ಜವಾಬ್ಧಾರಿಯನ್ನು ಮನನ ಮಾಡಿದರು. ‘ಸ್ನೇಹ ಹೇಗಿರಬೇಕೆಂಬುದು ನಮ್ಮ ಆಯ್ಕೆಯಾಗಿರುತ್ತದೆ. ಯಾವತ್ತೂ ನಾವು ಉತ್ತಮನನ್ನು ಆಯ್ಕೆ ಮಾಡಿಕೊಳ್ಳಬೇಕು. ಇದಕ್ಕೆ ನೈಜ ಉದಾರಣೆ ಇರುವೆ. ಸಕ್ಕರೆ ಮತ್ತು ಉಪ್ಪಿನ ನಡುವೆ ಇರುವೆ ಆರಿಸಿಕೊಳ್ಳುವಂತಹುದು ಸಕ್ಕರೆಯನ್ನು ಮಾತ್ರ. ಹಾಗೆಯೇ ಒಳ್ಳೆಯ ಸ್ನೇಹಿತರು ನಮ್ಮನ್ನು ಒಳಿತಿನೆಡೆಗೆ ಕೊಂಡೊಯ್ಯುತ್ತಾರೆ’ ಎಂದು ಹೇಳಿದರು.

ಅತಿಥಿಗಳಾಗಿ ಭಾಗವಹಿಸಿದ್ದ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯರಾದ ಗಿರಿಶಂಕರ್ ಸುಲಾಯ ಮಾತನಾಡಿ, ‘ಪೋಷಕರು ಮಕ್ಕಳ ಆಸಕ್ತಿಗಳನ್ನು ಅರಿಯಬೇಕು ಹಾಗೂ ವಿದ್ಯಾರ್ಥಿಗಳೇ ಎಂದಿಗೂ ಸೋತವರು ನಾವಾಗಬಾರದು, ಗೆದ್ದು ಬೀಗುವಂತವರು ನಾವಾಗಬೇಕು, ವೀರರು, ಪರಾಕ್ರಮಿಗಳು ನಾವಾಗಬೇಕು. ಆಗ ಮಾತ್ರ ವಿಜಯಪತಾಕೆ ಹಾರಿಸುವವರು ನಾವಾಗುತ್ತೇವೆ ಒಟ್ಟಾರೆ ನಂಬಿಕೆ ಇರಬೇಕು, ಸಾಧಿಸುವ ಛಲಬೇಕು. ನಿಮ್ಮನ್ನು ನೀವು ಅರ್ಥೈಸಿಕೊಳ್ಳಿ. ನಾವು ಸೋತರೂ ನಂತರ ಗೆದ್ದಾಗ ಅಭ್ಯಸಿಸಲು ಸೋತಾಗ ಪ್ರಶ್ನಿಸಿದ ಸಮಾಜ ಬರುತ್ತದೆಯೇ? ಹಾಗಾಗಿ ಅಂತಹ ಮಂದಿಯ ಮುಂದೆ ಗೆದ್ದು ಬೀಗಬೇಕು, ಬೀಗಿ ಹೆಮ್ಮರವಾಗಿ ಬೆಳೆಯಬೇಕು ಎಂದು ನುಡಿದರು.
ಇನ್ನೋರ್ವ ಅತಿಥಿಯಾಗಿ ಭಾಗವಹಿಸಿದ್ದ ಈಶ್ವರಮಂಗಲ ಗಜಾನನ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಅರ್ತಿಕಜೆ ಗಣಪತಿ ಭಟ್ ಮಾತನಾಡಿ, ‘ವಿದ್ಯಾರ್ಥಿಗಳಲ್ಲಿ ಬುದ್ಧಿವಂತಿಕೆ ಖಂಡಿತವಾಗಿಯು ಇದೆ, ಆದರೆ ಅವರ ಜ್ಞಾನದ ಇರುವನ್ನು ಮುಖ್ಯವಾಹಿನಿಗೆ ತಂದು ದಡ ಸೇರಿಸುವಂತಹ ಕರ್ತವ್ಯವನ್ನು ನಾವು ಮಾಡಬೇಕಾಗಿದೆ ಈ ನಿಟ್ಟಿನಲ್ಲಿ ಪ್ರಗತಿ ಸ್ಟಡಿ ಸೆಂಟರ್ ಪರಿಪೂರ್ಣವಾದ ಪ್ರಯತ್ನವನ್ನು ಮಾಡುತ್ತಿದೆ’ ಎಂದು ಹೇಳಿದರು.

ಸಂಸ್ಥೆಯ ಪ್ರಾಂಶುಪಾಲರಾದ ಕೆ.ಹೇಮಲತಾ ಗೋಕುಲ್ ಮಾತನಾಡಿ, ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೋಸ್ಕರ ಇರುವಂತಹ ವಿವಿಧ ಅಭ್ಯಾಸ ಅವಕಾಶಗಳು ಮತ್ತು ಎದುರಿಸುವಂತಹ ಸಮಸ್ಯೆಗಳನ್ನು ಕೂಲಂಕುಷವಾಗಿ ಪೋಷಕರ ಮುಂದೆ ತೆರೆದಿಟ್ಟರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಸಾಕ್ಷ್ಯ ಚಿತ್ರದ ಮೂಲಕ ಪ್ರಗತಿ ಸ್ಟಡಿ ಸೆಂಟರ್‍ನ ರೂಪುರೇಷೆಗಳನ್ನು ಶೈಕ್ಷಣಿಕ ಪ್ರವಾಸದ ದೃಶ್ಯಾವಳಿಗಳನ್ನು ಪ್ರಸಾರ ಮಾಡಲಾಯಿತು. ತದನಂತರ ಪ್ರಗತಿ ಸ್ಟಡಿ ಸೆಂಟರ್‍ನ ಹಳೆ ವಿದ್ಯಾರ್ಥಿಗಳು ಹಲವಾರು ಕ್ಷೇತ್ರಗಳಲ್ಲಿ ಸಾಧಕರಾಗಿ ಮಿಂಚುತ್ತಿದ್ದಾರೆ. ಅಂತಹವರಲ್ಲಿ 6 ಹಳೆ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮದಲ್ಲಿ ಶಾಲು ಹೊದಿಸಿ, ಸನ್ಮಾನಿಸಲಾಯಿತು.

ಸನ್ಮಾನಿತ, ಪ್ರಸ್ತುತ ಪ್ರಗತಿ ಸ್ಟಡಿ ಸೆಂಟರ್‍ನಲ್ಲಿ ಉಪನ್ಯಾಸಕರಾಗಿರುವ ಯಕ್ಷಗಾನ ಕಲಾವಿದರಾಗಿರುವ, ಮಹೇಶ್ ಕೆ.ಎನ್ ಮಾತನಾಡಿ ‘ಪ್ರಗತಿ ಸ್ಟಡಿ ಸೆಂಟರ್ ನನ್ನ ಕಲಿಕೆಗೆ ಬೇಕಾದ ಎಲ್ಲಾ ರೀತಿಯ ಆಯಾಮಗಳನ್ನು ಒದಗಿಸಿದೆ. ನಾನು ಅನುತ್ತೀರ್ಣನಾಗಿ ಬಂದಾಗ ಸಂಚಾಲಕರು ಮಾತ್ರ ಕೇಳಿದ್ದು ನನ್ನ ಅನುತ್ತೀರ್ಣತೆಗೆ ಕಾರಣವನ್ನು ಉಳಿದಂತೆ ಎಲ್ಲರೂ ಸಮಸ್ಯೆಯನ್ನು ಕೇಳದೆ ಅನುತ್ತೀರ್ಣನಾದುದಕ್ಕಾಗಿ ಗೇಲಿ ಮಾಡಿದವರೇ ಇದ್ದದ್ದು. ಹಾಗಾಗಿ ಪ್ರಗತಿ ಸ್ಟಡಿ ಸೆಂಟರ್ ಸಮಸ್ಯೆಯ ಮೂಲವನ್ನು ಅರಿತು ವಿದ್ಯಾರ್ಥಿಗಳನ್ನು ಉತ್ತೇಜಿಸುತ್ತಿದೆ. ನಾನು ಇಂದು ಈ ವೇದಿಕೆಯ ಮೇಲೆ ನಿಂತಿದ್ದೇನೆ ಎಂದರೆ ಅದಕ್ಕೆ ಕಾರಣ ಈ ಸಂಸ್ಥೆ’ ಎಂದು ನುಡಿದರು.

ಸನ್ಮಾನಿತ ಇನ್ನೋರ್ವ ಹಳೆ ವಿದ್ಯಾರ್ಥಿ ಪುತ್ತೂರು ಕಹಳೆ ನ್ಯೂಸ್ ಮುಖ್ಯಸ್ಥ ಶ್ಯಾಮ್ ಸುದರ್ಶನ್ ಹೊಸಮೂಲೆ ಮಾತನಾಡಿ, ‘ನಾವು ಅನುತ್ತೀರ್ಣರಾದಾಗ ಸಮಾಜ ನಮ್ಮನ್ನು ಏನೋ ದೊಡ್ಡ ತಪ್ಪು ಮಾಡಿದ ಹಾಗೇ ನೋಡುತ್ತಿತ್ತು. ಆದರೆ ಈ ಸಂದರ್ಭದಲ್ಲಿ ನಮ್ಮ ಬೆನ್ನೆಲುಬಾಗಿ ನಿಂತಿದ್ದು ಪ್ರಗತಿ. ಇದಕ್ಕೆ ನಾನು ಅಭಾರಿ. ಪೋಷಕರೇ, ಯಾವ ಕಾರಣಕ್ಕೂ ನಮ್ಮ ಮಕ್ಕಳನ್ನು ಬೇರೆಯವರೊಂದಿಗೆ ಹೋಲಿಸಬೇಡಿ ಯಾಕೆಂದರೆ ನಿಮ್ಮ ಮಕ್ಕಳು ಯಾವುದೋ ಒಂದು ವಿಚಾರದಲ್ಲಿ ಅತ್ಯಂತ ವಿಶಿಷ್ಟರಾಗಿರುತ್ತಾರೆ ಅದನ್ನು ಗುರುತಿಸುವಲ್ಲಿ ಪೋಷಕರು ವಿಫಲರಾಗಿತ್ತಾರೆ. ಹಾಗಾದರೆ ಇಲ್ಲಿ ಯೋಚಿಸಬೇಕು ಸೋತದ್ದು ಮಕ್ಕಳಾ? ಶಿಕ್ಷಕರಾ? ಅಥವಾ ಪೋಷಕರಾ? ಇವೆಲ್ಲಾವನ್ನೂ ಮನನ ಮಾಡಿಕೊಂಡು ಮುಂದುವರಿಯಬೇಕು’ ಎಂದು ನುಡಿದರು.

ಸನ್ಮಾನಿತ ವಿಕಲಾಂಗ ಚೇತನಾಗಿರುವ ಮತ್ತು ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿಯಲ್ಲಿ ಉತ್ತೀರ್ಣಗೊಂಡ, ಪ್ರಸ್ತುತ ಸೈಂಟ್ ಫೀಲೋಮಿನಾ ಕಾಲೇಜಿನಲ್ಲಿ ಪದವಿ ವ್ಯಾಸಾಂಗ ಮಾಡುತ್ತಿರುವ ಎಚ್.ವಿ ಗುರುಪ್ರಸಾದ್ ಮಾತನಾಡಿ, ‘ಕೈಕಾಲುಗಳ ಊನತೆಯ ಸಮಸ್ಯೆಯಿದ್ದು, ನಡೆಯಲು, ಬರೆಯಲು ಸಾಧ್ಯವಾಗದೇ, ಸ್ಮರಣಶಕ್ತಿಯ ಸಮಸ್ಯೆ ಇವೆಲ್ಲಾವೂ ನನ್ನನ್ನೂ ಭಾದಿಸಿರುವಾಗ ನನ್ನನ್ನೂ ಕಾಪಾಡಿದ್ದು ಪ್ರಗತಿ ಸ್ಟಡಿ ಸೆಂಟರ್ ನಾನು ಈ ಸಂಸ್ಥೆಗೆ ಯಾವತ್ತಿಗೂ ಅಭಾರಿಯಾಗಿರುತ್ತೇನೆ’ ಎಂದು ಹೇಳಿದರು.

ಉಳಿದಂತೆ ಹಳೆ ವಿದ್ಯಾರ್ಥಿಗಳಾಗಿ ಸನ್ಮಾನಿತರುಗಳಾದ ಕಡಬ ಆಗ್ನಿಶಾಮಕ ದಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಕಾಶ್ ಬಲ್ಲಾಳ್, ಬೆಂಗಳೂರು ಏರ್ ಇಂಡಿಯಾದಲ್ಲಿ ಕಾರ್ಯಾನಿರ್ವಾಹಕ ಅಧಿಕಾರಿಯಾಗಿರುವ ಚೇತನ್ ಟಿ ನಾಯ್ಕ್, ಖ್ಯಾತ ಕ್ರಿಕೆಟ್ ಪಟುವಾಗಿರುವ ಲೋಕೇಶ್ ಐ, ಸಂಸ್ಥೆಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾಗ ಆದ ಅನುಭವಗಳನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ ವಿಸ್ಮಿತಾ ಮಧುಕರ್ ಮುಳಿಬೈಲ್ ಸ್ವಾಗತಿಸಿ, ಭೌತಶಾಸ್ತ್ರ ಉಪನ್ಯಾಸಕಿ ಶ್ರುತಿ ವಂದಿಸಿದರು. ಕನ್ನಡ ಉಪನ್ಯಾಸಕಿ ಗೀತಾ ಕೊಂಕೋಡಿ ನಿರೂಪಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಳಿಸಲಾಯಿತು.