ಮುಳಿಯ ಜ್ಯುವೆಲ್ಸ್ ಮತ್ತು ರೋಟರಿ ಕ್ಲಬ್ ಪುತ್ತೂರು ಯುವ ವತಿಯಿಂದ ರೈನ್ ಕೋಟ್ ವಿತರಣೆ –ಕಹಳೆ ನ್ಯೂಸ್
ಪುತ್ತೂರು: ಸರ್ಕಾರದಿಂದ ಕೆಲವು ಸವಲತ್ತುಗಳು ಸಿಬ್ಬಂದಿಗಳಿಗೆ ಲಭಿಸಿದರೂ, ಸಿಗದೇ ಇರುವುದನ್ನು ಮುಳಿಯ ಸಂಸ್ಥೆಯ ಮೂಲಕ ನೀಡಲಾಗುತ್ತಿದೆ. ಪೊಲೀಸರು ಜನರ ಹತ್ತಿರವಾಗುತ್ತಿದ್ದು, ಇನ್ನಷ್ಟು ಉತ್ತಮ ಕೆಲಸಗಳು ಅವರಿಂದ ನಡೆಯುವಂತಾಗಬೇಕು ಎಂದು ಮುಳಿಯ ಜ್ಯುವೆಲ್ಸ್ನ ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ ಹೇಳಿದರು.
ಪುತ್ತೂರು ನಗರ ಠಾಣೆಯಲ್ಲಿ ಪುತ್ತೂರು ಮುಳಿಯ ಜುವೆಲ್ಸ್ ಮತ್ತು ರೋಟರಿ ಕ್ಲಬ್ ಪುತ್ತೂರು ಯುವ ವತಿಯಿಂದ ಪೊಲೀಸ್ ಸಿಬ್ಬಂದಿಗಳಿಗೆ ರೈನ್ ಕೋಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮುಳಿಯ ಸಂಸ್ಥೆಯಿAದ ರೈನ್ ಕೋಟ್ ವಿತರಣೆಯನ್ನು ಮೂರನೇ ಬಾರಿ ಮಾಡಲಾಗುತ್ತಿದ್ದು, ಜಾಹೀರಾತು ಪಡೆದುಕೊಳ್ಳುವ ಉದ್ದೇಶದಿಂದ ಇದನ್ನು ಮಾಡುತ್ತಿಲ್ಲ. ಧರಿಸುವ ವ್ಯಕ್ತಿಗೆ ಮಾತ್ರ ಯಾರು ನೀಡಿದ್ದು ಎಂದು ತಿಳಿದರೆ ಸಾಕು ಎಂದು ತಿಳಿಸಿದರು.
ಪೊಲೀಸ್ ನಿರೀಕ್ಷಕ ಸತೀಶ್ ಜಿ.ಜೆ., ಪೊಲೀಸ್ ಉಪನಿರೀಕ್ಷಕರಾದ ನಂದಕುಮಾರ್, ಸುಬ್ರಹ್ಮಣ್ಯ, ಸಂಚಾರ ಠಾಣೆ ಉಪನಿರೀಕ್ಷಕ ಶಾಹಿದ್ ಅಫ್ರಿದ್, ರೋಟರಿ ಕ್ಲಬ್ ಪುತ್ತೂರು ಯುವ ನಿಯೋಜಿತ ಅಧ್ಯಕ್ಷೆ ಅಶ್ವಿನಿ ಕೃಷ್ಣ ಮುಳಿಯ, ಅಧ್ಯಕ್ಷ ಪಶುಪತಿ ಶರ್ಮ, ಮುಳಿಯ ಶಾಖಾ ಪ್ರಬಂಧಕ ರಾಘವೇಂದ್ರ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.
ಪುತ್ತೂರು ಉಪವಿಭಾಗೀಯ ಪೊಲೀಸ್ ಕಛೇರಿ, ಪುತ್ತೂರು ಸಂಚಾರಿ ಠಾಣೆ, ಮಹಿಳಾ ಠಾಣೆ, ನಗರ ಠಾಣೆ ಸೇರಿ ಸುಮಾರು 150 ರೈನ್ ಕೋಟ್ ವಿತರಣೆ ಮಾಡಲಾಯಿತು.