ಅಯೋಧ್ಯೆ: ಅಯೋಧ್ಯೆ ವಿವಾದ ಸದ್ಯಕ್ಕಂತೂ ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ. ವಿವಾದಕ್ಕೆ ಸಂಬಂಧಿಸಿದ 14 ದೂರುಗಳ ವಿಚಾರಣೆಯ ದಿನಾಂಕವನ್ನು ಜನವರಿಯಲ್ಲಿ ನಿಗದಿಗೊಳಿಸುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿದೆ.
ಸೋಮವಾರ ಈ ಸಂಬಂಧ ನಾಲ್ಕು ನಿಮಿಷಗಳವರೆಗೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಜನವರಿ ಮೊದಲ ವಾರದಲ್ಲಿ ಈ ಬಗ್ಗೆ ನಿರ್ಧಾರವಾಗಲಿದೆ ಎಂದಿದೆ. ಇದರಿಂದಾಗಿ ಬಿಜೆಪಿ ಅಧ್ಯಾದೇಶದ ಮೂಲಕ ರಾಮಮಂದಿರ ನಿರ್ಮಾಣಕ್ಕೆ ಅವಕಾಶ ಮಾಡಿಕೊಡುತ್ತದೆಯೇ ಎಂಬ ಕುತೂಹಲ ಇನ್ನಷ್ಟು ಹೆಚ್ಚಾಗಿದೆ.
ರಾಮಮಂದಿರ ವಿಚಾರದಲ್ಲಿ ಹಿಂದೂಗಳ ಸಹನೆ ಕಡಿಮೆಯಾಗುತ್ತಿದೆ. ಹಿಂದೂಗಳ ನಂಬಿಕೆಯಲ್ಲಿ ಶ್ರೀರಾಮನೇ ಕೇಂದ್ರ ಬಿಂದು. ಅವರು ಸಹನೆಯನ್ನು ಕಳೆದು ಕೊಂಡರೆ ಏನಾಗುತ್ತದೆಯೋ ಗೊತ್ತಿಲ್ಲ. ಇದನ್ನು ಹಿಂದೂ-ಮುಸ್ಲಿಂ ವಿಷಯವನ್ನಾಗಿಸಿದ್ದೇ ಕಾಂಗ್ರೆಸ್ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ.