ಸುಬ್ರಹ್ಮಣ್ಯದಲ್ಲಿ ಲೋಡುಗಟ್ಟಲೆ ಕಸದ ರಾಶಿ, ಕೊಳೆಯುತ್ತಿದೆ ಕಸಗಳು, ಎದ್ದೇಳುತ್ತಿದೆ ವಾಸನೆ, ರೋಗ ಹರಡುವ ಭೀತಿ – ಕಹಳೆ ನ್ಯೂಸ್
ಕುಕ್ಕೆ ಸುಬ್ರಹ್ಮಣ್ಯದ ಇಂಜಾಡಿ ಬಳಿಯ ಕಸ ವಿಲೇವಾರಿ ಘಟಕದಲ್ಲಿ ಲೋಡುಗಟ್ಟಲೆ ಕಸದ ರಾಶಿ ಬಿದ್ದು ಕೊಳೆಯಲು ಆರಂಭವಾಗಿದೆ, ವಾಸನೆಯೂ ಎದ್ದೇಳುತ್ತಿದ್ದು ರೋಗ ಹರಡುವ ಭೀತಿಯೂ ಎದುರಾಗಿದೆ.
ದಿನಂಪ್ರತಿ ಸಾವಿರಾರು ಜನರು ಬರುವ ಸುಬ್ರಹ್ಮಣ್ಯದಲ್ಲಿ ಗ್ರಾ.ಪಂ ವತಿಯಿಂದ ನಿರ್ವಹಿಸಲ್ಪಡುವ ಕಸ ವಿಲೇವಾರಿ ಘಟಕ ಇಂಜಾಡಿ ಬಳಿ ಇದೆ. ಇಲ್ಲಿಗೆ ಪಂಚಾಯತ್ ನ ಕಸ ವಿಲೇವಾರಿ ಘಟಕದ ವಾಹನಗಳು ಕಸ ಸಂಗ್ರಹಿಸಿ ತಂದು ಹಾಕುತ್ತಿವೆ. ಇಲ್ಲಿ ಸಂಜೀವಿನಿಯರು ಹಾಗೂ ಗ್ರಾ.ಪಂ ದಿನಗೂಲಿಯ ಕೆಲವರು ಸೇರಿ ಕಸ ವಿಂಗಡನೆ ಮಾಡುತಿದ್ದಾರೆ. ಆದರೆ ಇಲ್ಲಿ ವಿಂಗಡನೆ ಆಗುತ್ತಿರುವ ಕಸ ಮತ್ತು ಇಲ್ಲಿಗೆ ಸರಬರಾಜು ಆಗುವ ಕಸಕ್ಕೂ ಅಜಗಜಾಂತರ ವ್ಯತ್ಯಾಸವಿದ್ದು ಸಾಮರ್ಥ್ಯಕ್ಕಿಂತ ಹೆಚ್ಚು ಕಸವೂ ಸಂಗ್ರಹವಾಗುತ್ತಿದೆ. ಇದೇ ಮುಂದುವರೆದರೆ ಮುಂದೊಂದು ದಿನ ಇದು ಅಪಾಯಕಾರಿಯಾಗುವ ಮುನ್ಸೂಚನೆ ಇದೆ. ಸುಬ್ರಹ್ಮಣ್ಯ ಜನತೆಯೂ ಈ ಬಗ್ಗೆ ವಾಸ್ತವ ತಿಳಿಯುವ ಪ್ರಯತ್ನ ಮಾಡಿಲ್ಲ.
ಅಲ್ಪ ಪ್ರಮಾಣದ ವಿಲೇವಾರಿ, ದುರ್ವಾಸನೆ ಭಾರಿ: ಇಲ್ಲಿ ದಿನ ಪ್ರತಿ ಕಸ ಸಂಗ್ರಹವಾಗುತಿದ್ದರೂ ಅಲ್ಪ ಪ್ರಮಾಣದ ಕಸವಷ್ಟೇ ವಿಲೇವಾರಿಯಾಗುತಿದೆ. ರಟ್ಟು, ಹಾಲಿನ ಪ್ಯಾಕೆಟ್, ನೀರಿನ ಬಾಟಲ್ ಮತ್ತಿತರ ವಸ್ತುಗಳನ್ನು ವಿಲೇವಾರಿ ಮಾಡಲಾಗುತ್ತಿದೆ. ಅಂತದನ್ನು ಸಂಬಂಧಿಸಿದವರು ತೆಗೆದುಕೊಂಡು ಹೋಗುತಿದ್ದಾರೆ. ಆದರೆ ಈಗಾಗಲೇ ಬಿದ್ದಿರುವ ಲೋಡ್ ಗಟ್ಟಳೆ ಕಸ ಕೊಳೆಯುತಿದ್ದು ಅದು ಭಾರಿ ಪ್ರಮಾಣದಲ್ಲಿ ದುರ್ವಾಸನೆಯೂ ಎದ್ದಿದೆ. ಅಲ್ಲಿಂದ ಬರುವ ಕೊಳಚೆ ನೀರು ನೇರವಾಗಿ ಕಣಿ ಸೇರಿ ನದಿ ಸೇರುತ್ತಿದೆ.
ಕೈಕೊಟ್ಟ ಬರ್ನಿಂಗ್ ಮೆಶಿನ್: ಗ್ರಾ.ಪಂ ವತಿಯಿಂದ ಪ್ಲಾಸ್ಟಿಕ್ ಬರ್ನಿಂಗ್ ಮೆಶಿನ್ ಕೆಲವೇ ವರ್ಷಗಳ ಹಿಂದೆಯಷ್ಟೆ ಅಳವಡಿಸಲಾಗಿದ್ದು ದಿನಪ್ರಂತಿ ವಿಲೇವಾರಿ ಆದ ಪ್ಲಾಸ್ಟಿಕ್ ನ್ನು ಕೆಮಿಕಲ್ ಹಾಕಿ ಬರ್ನ್ ಮಾಡಲಾಗುತಿತ್ತು. ಆದರೆ ಈ ಯಂತ್ರಗಳು ಕೈಕೊಟ್ಟು ಬರ್ನಿಂಗ್ ನಿಲ್ಲಿಸಲಾಗಿದೆ. ಯತ್ರಗಳ ಭಾಗಗಳು ತುಕ್ಕು ಹಿಡಿದು ಯತ್ರಗಳು ಕೆಲಸ ಮಾಡುವ ಲಕ್ಷ್ಮಣವೇ ಇಲ್ಲ. ಯಂತ್ರ ಅಳವಡಿಕೆಯಲೂ ಭಾರಿ ಪ್ರಮಾಣದ ಅಕ್ರಮ ನಡೆದಿರುವ ಆರೋಪಗಳಿವೆ.