ಪಿಯು ಉಪನ್ಯಾಸಕರ ನಿಯೋಜನೆಯನ್ನು ರದ್ದು ಮಾಡುವಂತೆ ಖಾಯಂ ಉಪನ್ಯಾಸಕರಿಂದ ಶಾಸಕರಿಗೆ ಮನವಿ – ಕಹಳೆ ನ್ಯೂಸ್
ಪುತ್ತೂರು: ಉಪನ್ಯಾಸಕರ ಕೊರತೆಯಿರುವ ಕಾಲೇಜುಗಳಿಗೆ ಖಾಯಂ ಶಿಕ್ಷಕರನ್ನು ವಿವಿಧ ಕಾಲೇಜುಗಳಿಗೆ ನಿಯೋಜನೆ ಮಾಡುವ ನಿಯಮವನ್ನು ಸರಕಾರ ರದ್ದು ಮಾಡಬೇಕೆಂದು ಆಗ್ರಹಿಸಿ ಪಿಯು ಖಾಯಂ ಶಿಕ್ಷಕರ ಸಂಘದ ವತಿಯಿಂದ ಶಾಸಕರಿಗೆ ಮನವಿ ಸಲ್ಲಿಸಿದ್ದಾರೆ.
ಈ ಬಗ್ಗೆ ಮನವಿ ಮಾಡಿಕೊಂಡಿರುವ ಸಂಘ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಚಾಲ್ತಿಯಲ್ಲಿರುವ ಉಪನ್ಯಾಸಕರ ನಿಯೋಜನೆ ಪದ್ದತಿಯಿಂದ ವಿದ್ಯಾರ್ಥಿಗಳಿಗೆ ಅನಾನುಕೂಲವಾಗುವುದರಿಂದ ಬಗ್ಗೆ ಪ್ರಸ್ತುತ ಜಾರಿಯಲ್ಲಿರುವ ಸರಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ನಿಯೋಜನೆ ಪದ್ಧತಿಯಿಂದ ಈ ಕೆಳಗಿನ ಗಂಭೀರ ಸಮಸ್ಯೆಗಳು ಉದ್ಭವಿಸುತ್ತದೆ.
ನಿಯೋಜನೆ ಮೇಲೆ ಉಪನ್ಯಾಸಕರನ್ನು ಪಡೆಯುವ ಕಾಲೇಜುಗಳು ಮತ್ತು ನಿಯೋಜನೆ ಮೇಲೆ ಉಪನ್ಯಾಸಕರನ್ನು ಕಳುಹಿಸುವ ಕಾಲೇಜುಗಳಲ್ಲಿ ಕ್ರಮಬದ್ಧವಾಗಿ ಪಾಠ ಪ್ರವಚನಗಳನ್ನು ನಡೆಸಲು ಸಾಧ್ಯವಾಗದೆ ಇರುವುದರಿಂದ ಶೈಕ್ಷಣಿಕ ಪರಿಸರ ಹದಗೆಡುತ್ತಿದೆ.
- ಈ ಪದ್ಧತಿಯಿಂದಾಗಿ, ವಾಠ ಪ್ರವಚನಗಳ ದೈನಂದಿನ ವೇಳಾಪಟ್ಟಿಯನ್ನು ವೈಜ್ಞಾನಿಕವಾಗಿ ರೂಪಿಸಲು ಸಾಧ್ಯವಾಗದಿರುವುದರಿಂದ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಒತ್ತಡದ ಸನ್ನಿವೇಶವನ್ನು ಎದುರಿಸುತ್ತಿದ್ದಾರೆ.ವಾರದಲ್ಲಿ ಮೂರು ದಿವಸಗಳಿಗೆ ಸೀಮಿತವಾಗಿ ನಿಯೋಜನೆಯನ್ನು ಅನುಷ್ಠಾನ ಗೊಳಿಸಬೇಕಾಗಿರುವುದರಿಂದ ಪಾಠ ಪ್ರವಚನೆಗಳ ನಿರಂತರತೆಯ ಕೊರತೆಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಬಗ್ಗೆ ಗಮನಹರಿಸಲು ಸಾಧ್ಯವಾಗುತ್ತಿಲ್ಲ.
- ಸ್ಥಳೀಯ ಪ್ರಾಧಿಕಾರದ ಹಂತದಲ್ಲಿ, ನಿಯೋಜನೆ ಪದ್ಧತಿಯನ್ನು ಈಗಾಗಲೇ ಪ್ರಾಥಮಿಕ ಪ್ರೌಢ ಹಾಗೂ ಪದವಿ ಕಾಲೇಜುಗಳಿಗೆ ಸಂಬಂಧಿಸಿದಂತೆ ರದ್ದುಪಡಿಸಲಾಗಿದೆ. ಮುಂದುವರಿದು ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ ನಿಯೋಜನೆ ಪದ್ಧತಿಯನ್ನು ಪ್ರಸ್ತುತ ಕೈ ಬಿಡಲಾಗಿದೆ.
- ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಬಿ.ಎಡ್ ಕಡ್ಡಾಯ ಮಾಡಿರುವುದರಿಂದ ಅತಿಥಿ ಉಪನ್ಯಾಸಕರ ಲಭ್ಯತೆ ಕಷ್ಟಸಾಧ್ಯವಾಗಿರುತ್ತದೆ. ಆದ್ದರಿಂದ ತಕ್ಷಣಕ್ಕೆ ಬಿ.ಎಡ್ ಇಲ್ಲದಿದ್ದರೂ ಅವಕಾಶ ನೀಡುವುದು.
ಈ ಮೇಲಿನ ಅಂಶಗಳ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ನಿಯೋಜನೆ ಪದ್ಧತಿಯನ್ನು ರದ್ದುಪಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಂಬಂಧಿತರಿಗೆ ನಿರ್ದೇಶಿಸುವಂತೆ ಶಾಸಕರಿಗೆ ನೀಡಿದ ಮನವಿಯಲ್ಲಿ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ
ಹರಿಪ್ರಕಾಶ್ ಬೈಲಾಡಿ ಜಿಲ್ಲಾ ಸಂಘದ ಅಧ್ಯಕ್ಷ , ಮಹಿಳಾ ಪ ಪೂ ಕಾಲೇಜಿನ ಉಪನ್ಯಾಸಕಿ ಬೋಜರಾಜ್ , ಇಬಕ ಪ ಪೂ ಕಾಲೇಜಿನ ಪ್ರಾಂಶುಪಾಲರಾದ ಶ್ರೀಧರ್ ರೈ, ಕೆಯ್ಯೂರು ಪ ಪೂ ಕಾಲೇಜಿನ ಉಪನ್ಯಾಸಕರ ಬಾಲಕೃಷ್ಣ ಬಿ, ಬೆಟ್ಡಂಪಾಡಿ ಕಾಲೇಜಿನ ಉಪನ್ಯಾಸಕ ಫಾರೂಕ್ ಉಪಸ್ಥಿತರಿದ್ದರು.