ತಿರುಪತಿ ವಿಶೇಷ ಪ್ರವೇಶ ದರ್ಶನ ಟಿಕೆಟ್ ಮತ್ತು ಲಡ್ಡು ದರದಲ್ಲಿ ಇಳಿಕೆ?
ಆಂಧ್ರ:- ತಿರುಮಲದಲ್ಲಿ ವಿತರಿಸುವ ತಿಮ್ಮಪ್ಪನ ಲಡ್ಡು ಸ್ವಾದಿಷ್ಟ ಕಳೆದುಕೊಂಡಿದೆ ಎಂದು ಭಕ್ತರು ಇತ್ತೀಚಿನ ವರ್ಷಗಳಲ್ಲಿ ಒಂದೇ ಸಮನೆ ದೂರುತ್ತಿದ್ದರು. ದೇವರ ಪ್ರಸಾದ ಬಾಯಿ ರುಚಿಗಲ್ಲ, ಹೊಟ್ಟೆಗಲ್ಲ, ಭಕ್ತಿಯಿಂದ ಸ್ವೀಕರಿಸಬೇಕು ಎಂಬ ಸಂಪ್ರದಾಯ ಇದೆಯಾದರೂ ತಿರುಪತಿ ಲಡ್ಡು ಜಗತ್ಪಸಿದ್ಧ ಎಂಬುದನ್ನು ಯಾರೂ ಅಲ್ಲಗಳೆಯಲಾರರು.
ಲಡ್ಡು ಬೆಲೆ ₹50ರಿಂದ ₹25ಕ್ಕೆ ಇಳಿಕೆಯಾಗಲಿದೆ. ಇದಲ್ಲದೆ ವಿಶೇಷ ದರ್ಶನಕ್ಕೆ 300 ರೂಪಾಯಿ ಬದಲಿಗೆ 200 ರೂಪಾಯಿ ಇಳಿಮುಖವಾಗಲಿದೆ. ಈ ಸುದ್ದಿಗೆ ಟಿಟಿಡಿ ಪ್ರತಿಕ್ರಿಯೆ ನೀಡಿದೆ. ಅನೇಕ ಭಕ್ತರು ಈ ವೈರಲ್ ಸುದ್ದಿಯನ್ನು ನಂಬಿದ್ದಾರೆ. ಜೊತೆಗೆ ಇದನ್ನು ಹಲವೆಡೆ ಹಂಚಿಕೊಂಡಿದ್ದಾರೆ. ಅಲ್ಲದೆ ಲಡ್ಡು ಹಾಗೂ ಟಿಕೆಟ್ ಬೆಲೆ ಕಡಿಮೆ ಮಾಡಿದ್ದಕ್ಕೆ ತೆಲುಗು ದೇಶಂ ನೇತೃತ್ವದ ಎನ್‌ಡಿಎ ಮೈತ್ರಿ ಸರ್ಕಾರದ ಆಡಳಿತದಲ್ಲಿ ಕಾರ್ಯನಿರ್ವಹಿಸುತ್ತಿರುವ ಟಿಟಿಡಿಗೆ ಕೃತಜ್ಞತೆ ಕೂಡ ಸಲ್ಲಿಸಿದ್ದಾರೆ.
ಇತ್ತೀಚೆಗಂತೂ ಲಡ್ಡು ತನ್ನ ಸ್ವಾದಿಷ್ಟದ ಘಮಲು ಕಳೆದುಕೊಂಡಿದೆ ಎಂಬುದು ಭಕ್ತರ ಒಕ್ಕೊರಲ ಅನಿಸಿಕೆಯಾಗಿತ್ತು. ಆದರೆ ಇತ್ತೀಚೆಗೆ ಆಂಧ್ರದಲ್ಲಿ ಆಡಳಿತ ಚುಕ್ಕಾಣಿ ಕೈಬದಲಾಗಿದ್ದು, ಬದಲಾವಣೆಯ ಗಾಳಿ ಬೀಸುತ್ತಿದೆ. ಚಂದ್ರಬಾಬು ನಾಯ್ಡು ಎಂಟ್ರಿ- ಜಗನ್ ಎಕ್ಸಿಟ್ ಪರಿಣಾಮವೇನೋ ಎಂಬಂತೆ ತಿರುಪತಿ ಲಡ್ಡು ಮೊದಲಿನಂತಿಲ್ಲ ಅನ್ನುತ್ತಿದ್ದ ಭಕ್ತರಿಗೆ TTD ಗುಡ್ ನ್ಯೂಸ್ ಕೊಟ್ಟಿದೆ.
TTD ನೂತನ ಸಾರಥಿ ಜೆ . ಶ್ಯಾಮಲಾ ರಾವ್ ಅವರು ಗುಣಮಟ್ಟದ ತುಪ್ಪ, ಗುಣಮಟ್ಟದ ಕಡಲೆ ಬೇಳೆ ಮತ್ತು ಗುಣಮಟ್ಟದ ಏಲಕ್ಕಿ ಮತ್ತಿತರ ಗುಣಮಟ್ಟದ ಪರಿಕರಗಳನ್ನು ಬಳಸಿ ಲಡ್ಡುಗಳನ್ನು ರುಚಿಕರವಾಗಿ ತಯಾರಿಸುವಂತೆ ಸೂಚಿಸಿದ್ದಾರೆ. ತಿರುಮಲದ ಗೋಕುಲಂ ವಿಶ್ರಾಂತಿ ಗೃಹದಲ್ಲಿ ಮಂಡಳಿಯ ಉನ್ನತಾಧಿಕಾರಿಗಳ ಶ್ರೀ ವೀರಬ್ರಹ್ಮ ಮತ್ತು ಸಿವಿಎಸ್‌ಒ ಶ್ರೀ ನರಸಿಂಹಕಿಶೋರ್ ಅವರೊಂದಿಗೆ ಪರಿಶೀಲನಾ ಸಭೆ ನಡೆಸಿದರು. ಲಡ್ಡೂ ತಯಾರಿಕೆಯಲ್ಲಿ ಆಗುತ್ತಿರುವ ತೊಂದರೆಗಳು ಹಾಗೂ ಗುಣಮಟ್ಟದ ಟೀಕೆಗೆ ಕಾರಣಗಳೇನು ಎಂದು ನೂತನ ಪ್ರಧಾನ ಕಾರ್ಯನಿರ್ವಾಹಕ ಅಧಿಕಾರಿ ಕಾರ್ಮಿಕರಿಂದ ಕೇಳಿ ತಿಳಿದುಕೊಂಡರು. ಲಡ್ಡು ತಯಾರಿಕೆಯಲ್ಲಿ ಬಳಸುವ ಕಡಲೆ ಹಿಟ್ಟು, ತುಪ್ಪ, ಏಲಕ್ಕಿಗಳ ಗುಣಮಟ್ಟ ಹೆಚ್ಚಿಸಬೇಕು ಎಂದು ಈ ಸಂದರ್ಭದಲ್ಲಿ ಅಡುಗೆ ಸೇವಕರು ಅಭಿಪ್ರಾಯಪಟ್ಟರು. ಇದಲ್ಲದೇ ಕೆಲಸದ ಹೊರೆ ಹೆಚ್ಚಾದಂತೆ ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸುವಂತೆಯೂ ನೂತನ ಇಒಗೆ ಮನವಿ ಮಾಡಿದರು.