Sunday, January 19, 2025
ಬೈಂದೂರುಶಿಕ್ಷಣಸುದ್ದಿ

ಸರ್ಕಾರಿ ಶಾಲೆ ಉಳಿದರೆ ಮಾತ್ರ ಶಾಶ್ವತ ಖುಷಿ: ಶಾಸಕ ಗುರುರಾಜ ಗಂಟಿಹೊಳೆ : ಸಮೃದ್ಧ ಬೈಂದೂರು 300 ಟ್ರೀಸ್ ಪರಿಕಲ್ಪನೆಯಡಿ 8 ಸರ್ಕಾರಿ ಶಾಲೆ, 2 ಅಂಗನವಾಡಿ ಕೇಂದ್ರದಲ್ಲಿ ಸ್ವಯಂಸ್ಫೂರ್ತಿ ಕೌಶಲ್ಯ ಕೇಂದ್ರ ಉದ್ಘಾಟನೆ– ಕಹಳೆ ನ್ಯೂಸ್

ಬೈಂದೂರು : ಸರ್ಕಾರಿ ಶಾಲೆ ಉಳಿದ ಮಾತ್ರ ನಮ್ಮ ಖುಷಿ, ನೆನಪು ಹಾಗೂ ಸುಮಧುರ ಬಾಂಧವ್ಯ ಶಾಶ್ವತವಾಗಿರಲಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸಿ, ಸೂಕ್ತ ಸೌಲಭ್ಯ ಕಲ್ಪಿಸುವ ದೊಡ್ಡ ಕಾರ್ಯ ಆಗಬೇಕಿದೆ. ಹೀಗಾಗಿಯೇ 300 ಟ್ರೀಸ್ಸ್ ಕಲ್ಪನೆಯನ್ನು ಸಮೃದ್ಧ ಬೈಂದೂರು ಮೂಲಕ ಕಾರ್ಯರೂಪಕ್ಕೆ ತರಲಾಗಿದೆ. ಇದಕ್ಕೆ ದಾನಿಗಳು ಸಾಕಷ್ಟು ಪ್ರೋತ್ಸಾಹ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಆಯ್ದ ಸರ್ಕಾರಿ ಶಾಲೆಗಳಲ್ಲಿ ಸ್ಫೂರ್ತಿ ಕೌಶಲ್ಯ ಕೇಂದ್ರ ತೆರೆಯಲು ಸ್ವಯಂ ಸ್ಫೂರ್ತಿ ಫೌಂಡೇಶನ್ ಅಧ್ಯಕ್ಷ ನಾಗರಾಜ ಶೆಟ್ಟಿ ಜಡ್ಕಲ್ ಅವರು ಪ್ರೇರಕವಾಗಿ ನಿಂತಿದ್ದಾರೆ ಎಂದು ಶಾಸಕರಾದ ಗುರುರಾಜ್ ಗಂಟಿಹೊಳೆ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಉಳ್ಳೂರು 11 ಹಾಗೂ ನಾಯ್ಕನಕಟ್ಟೆಯ ಸರ್ಕಾರಿ ಶಾಲೆಯ ಶ್ರೇಯಾಭಿವೃದ್ಧಿಗಾಗಿ ರೂಪಿಸಿರುವ ಸಮೃದ್ಧ ಬೈಂದೂರು ಪರಿಕಲ್ಪನೆಯ 300 ಟ್ರೀಸ್ ಯೋಜನೆಯಡಿ ಬೆಂಗಳೂರಿನ ಸ್ವಯಂಸ್ಫೂರ್ತಿ ಫೌಂಡೇಶನ್ ವತಿಯಿಂದ ಸ್ವಯಂಸ್ಫೂರ್ತಿ ಕೌಶಲ್ಯ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸರ್ಕಾರಿ ಶಾಲೆಯಲ್ಲಿ ಓದಿದ ಅನೇಕರು ಇಂದು ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರೆ. ಅದಕ್ಕೆ ಸರ್ಕಾರಿ ಶಾಲೆಯೇ ಕಾರಣವೂ ಆಗಿದೆ. ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಈ ನಿಟ್ಟಿನಲ್ಲಿ ಶಾಲೆಗಳ ಪಟ್ಟಿಯನ್ನು ಸಿದ್ಧಪಡಿಸಿದ್ದೇವೆ. ಹಲವು ಶಾಲೆಗಳಿಗೆ ಕಟ್ಟಡದ ಅಗತ್ಯವಿದ್ದರೆ, ಇನ್ನು ಕೆಲವು ಶಾಲೆಗಳಿಗೆ ಕಂಪ್ಯೂಟರ್ ಮೊದಲಾದ ಮೂಲಸೌಕರ್ಯಗಳ ತುರ್ತು ಅವಶ್ಯಕತೆ ಇದೆ. ಹೀಗಾಗಿ ದಾನಿಗಳ ಮೂಲಕ ಸರ್ಕಾರಿ ಶಾಲೆಗೆ ಬೇಕಿರುವ ಅಗತ್ಯ ವ್ಯವಸ್ಥೆಯನ್ನು ಕಲ್ಪಿಸುವ ಯೋಜನೆ ಜಾರಿಯಲ್ಲಿದೆ ಎಂದರು.

ಎಲ್ಲಾ ಸರ್ಕಾರಿ ಶಾಲೆಗಳು ಉಳಿಯಬೇಕು. ಇದಕ್ಕೆ ಸ್ಥಳೀಯರ ಪ್ರೋತ್ಸಾಹದ ಜೊತೆಗೆ ಶಾಲಾ ಶಿಕ್ಷಕರು ಹಳೆ ವಿದ್ಯಾರ್ಥಿಗಳ ಉತ್ಸಾಹವು ಅಗತ್ಯವಾಗಿದೆ. ಕೆಲವು ಶಾಲೆಗಳಲ್ಲಿ ಶಿಕ್ಷಕರು ಉತ್ಸಾಹ ತೋರಿದರೆ ಇನ್ನು ಕೆಲವು ಶಾಲೆಯಲ್ಲಿ ವ್ಯವಸ್ಥೆಯನ್ನು ಉಪಯೋಗಿಸಿಕೊಳ್ಳಲು ಮುಂದಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಾಗರಾಜ ಶೆಟ್ಟಿ ಅವರ ತಂಡವೇ ಕಂಪ್ಯೂಟರ್ ಪೂರೈಸುವ ಜತೆಗೆ ಅದಕ್ಕೆ ಅಗತ್ಯವಿರುವ ಟೇಬಲ್ ಇತ್ಯಾದಿಗಳನ್ನು ಸಿದ್ಧಪಡಿಸಿ ನೀಡುತ್ತಿದ್ದಾರೆ. ಸ್ವಯಂಸ್ಫೂರ್ತಿ ಕೌಶಲ್ಯ ಕೇಂದ್ರವು ಪ್ರಾಥಮಿಕ, ಪ್ರೌಢ ಹಂತದಲ್ಲೇ ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿ, ಕಂಪ್ಯೂಟರ್ ಜ್ಞಾನ ಹೆಚ್ಚಳಕ್ಕೆ ಅನುಕೂಲವಾಗಲಿದೆ. ಈ ಮೂಲಕ ಸರ್ಕಾರಿ ಶಾಲೆಗೆ ಇನ್ನಷ್ಟು ಶಕ್ತಿ ಬರಲಿದೆ ಎಂದು ಹೇಳಿದರು.

ಸ್ವಯಂಸ್ಫೂರ್ತಿ ಫೌಂಡೇಶನ್ ಸಂಸ್ಥಾಪಕರಾದ ನಾಗರಾಜ ಶೆಟ್ಟಿ ಜಡ್ಕಲ್, ಉಳ್ಳೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ ಪೂಜಾರಿ, ಎಸ್ಡಿಎಂಸಿ ಮಾಜಿ ಸದಸ್ಯ ಕಿಶೋರ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ನಾಯ್ಕನಕಟ್ಟೆ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆರ್ಗಾಲ್ ಗ್ರಾಮ ಪಂಚಾಯತಿ ಅಧ್ಯಕ್ಷೆ ರೇವತಿ, ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಗಣ್ಯರು, ಹಿರಿಯರು ಉಪಸ್ಥಿತರಿದ್ದರು.