ಮುರಿದು ಬೀಳುವ ಸ್ಥಿತಿಯಲ್ಲಿರುವ ಬಿಸಿರೋಡಿನ ಪ್ರಯಾಣಿಕರ ತಂಗುದಾಣದ ಕಂಬಗಳು – ಕಹಳೆ ನ್ಯೂಸ್
ಬಂಟ್ವಾಳ: ಬಿಸಿರೋಡಿನ ಖಾಸಗಿ ಬಸ್ ನಿಲ್ದಾಣದ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಕರು ಗಾಳಿ ಮಳೆ ಮತ್ತು ಬಿಸಿಲಿಗೆ ನಿಂತುಕೊಳ್ಳಲು ಪುರಸಭೆ ನಿರ್ಮಿಸಿದ ಪ್ರಯಾಣಿಕರ ತಂಗುದಾಣದ ಕಬ್ಬಿಣದ ಕುರ್ಚಿಗಳು ಮುರಿದು ಬಿದ್ದು, ನಿಲ್ದಾಣದ ಕಂಬಗಳು ಈಗಲೂ ಆಗಲೋ ಮುರಿದು ಬೀಳುವ ಅಪಾಯಕಾರಿ ಸ್ಥಿತಿಯಲ್ಲಿದೆ.
ಬಂಟ್ವಾಳ ಮತ್ತು ಪಾಣೆಮಂಗಳೂರು ಕಡೆಗೆ ತೆರಳುವ ಪ್ರಯಾಣಿಕರು ರಿಕ್ಷಾಕ್ಕೆ ಕಾಯುವ ಮತ್ತು ಇತರ ಗ್ರಾಮೀಣ ಭಾಗಕ್ಕೆ ತೆರಳುವ ಖಾಸಗಿ ಬಸ್ ಗಳಿಗಾಗಿ ಕಾಯುವ ಪ್ರಯಾಣಿಕರಿಗಾಗಿ ಪುರಸಭೆ ನಿರ್ಮಿಸಿದ ಪ್ರಯಾಣಿಕರ ತಂಗುದಾಣ ಇದೀಗ ಆಯುಷ್ಯ ಕಳೆದುಕೊಂಡು ಮುರಿದು ಬೀಳುವ ಹಂತಕ್ಕೆ ತಲುಪಿದೆ.
ಪ್ರಯಾಣಿಕರು ತಂಗುದಾಣದೊಳಗೆ ಜನರು ಕುಳಿತುಕೊಳ್ಳಲು ಉಪಯೋಗವಾಗುವ ನಿಟ್ಟಿನಲ್ಲಿ ನಿರ್ಮಿಸಿದ ಕುರ್ಚಿಗಳ ಕಾಲು ಮುರಿದುಕೊಂಡು ಅಂಗಾತ ಮಲಗಿದೆ.
ಕುರ್ಚಿಗಳು ಮುರಿದುಬಿದ್ದು ವರ್ಷಗಳು ಕಳೆದರೂ ಮಳೆ ಮತ್ತು ಬಿಸಿಲಿನ ತಾಪದಿಂದ ರಕ್ಷಣೆ ಮಾಡಿಕೊಂಡು ಕನಿಷ್ಠ ನಿಂತುಕೊಳ್ಳಲು ಅವಕಾಶ ಸಿಗುತ್ತಿದ್ದ ತಂಗುದಾಣದ ಕಬ್ಬಿಣದ ಕಂಬಗಳ ಅಡಿಭಾಗ ನೇತಾಡುವ ಸ್ಥಿತಿಯಲ್ಲಿದೆ. ಯಾವ ಸಂದರ್ಭದಲ್ಲಿ ಆದರೂ ಕಂಬಗಳು ಮುರಿದು ಬಿದ್ದು ಪ್ರಯಾಣಿಕರು ಅಪಾಯದಲ್ಲಿ ಸಿಲುಕಿಕೊಳ್ಳಬಹುದು. ಈಗಾಗಲೇ ಬಾಡಿಗೆ ಮಾಡುವ ರಿಕ್ಷಾದವರು ತಂಗುದಾಣದ ಪ್ರಯಾಣಿಕರಿಗೆ ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ.
ಆದರೆ ಮಳೆಗಾಲ ವಾದ್ದರಿಂದ ಮಳೆಯಿಂದ ರಕ್ಷಿಸಿಕೊಳ್ಳಲು ಗೂಡು ಅತೀ ಅಗತ್ಯವಾಗಿದೆ.
ಪುರಸಭೆ ಜಾಹೀರಾತು ಮೂಲಕ ಅಧಿಕ ಆದಾಯ ತರುವ ಈ ತಂಗುದಾಣದ ಕಾಯಕಲ್ಪ ಆಗಬೇಕಾಗಿದೆ. ಪ್ರಯಾಣಿಕರಿಗೆ ಅಪಾಯವಾಗುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಂಡು ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕ ವಲಯದಲ್ಲಿ ಒತ್ತಾಯ ಕೇಳಿ ಬಂದಿದೆ.