Friday, November 15, 2024
ಬೈಂದೂರುಶಿಕ್ಷಣಸುದ್ದಿ

ಸಾಗರದಾಚೆಯೂ ಸರ್ಕಾರಿ ಶಾಲೆ ಅಭಿವೃದ್ಧಿ ಚಿಂತನೆ : ಶಾಸಕ ಗುರುರಾಜ್ ಗಂಟಿಹೊಳೆ ಅವರ ದುಬೈ ಪ್ರವಾಸದಲ್ಲೂ ಕ್ಷೇತ್ರ ಶಾಲೆಗಳ ದತ್ತು ಮಾತುಕತೆ- ಕಹಳೆ ನ್ಯೂಸ್

ಬೈಂದೂರು: ಕ್ಷೇತ್ರದ ಜನಪ್ರಿಯ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಸರ್ಕಾರಿ ಶಾಲೆಗಳ ಸೌಲಭ್ಯ ಸುಧಾರಣೆಗೆ ಈಗಾಗಲೇ ಸಮೃದ್ಧ ಬೈಂದೂರು ಪರಿಕಲ್ಪನೆಯಡಿ 300 ಟ್ರೀಸ್ ಕಾರ್ಯಕ್ರಮದ ಮೂಲಕ ಜಿಲ್ಲೆ, ರಾಜ್ಯ, ಹೊರ ರಾಜ್ಯಗಳ ದಾನಿಗಳು, ಸಂಸ್ಥೆಗಳಿಂದ ಕೊಡುಗೆ ಆಹ್ವಾನಿಸುತ್ತಿದ್ದಾರೆ. ಇದರ ಮುಂದುವರಿದ ಭಾಗವಾಗಿ ಸಾಗರದಾಚೆಗೂ ಸಹಾಯಹಸ್ತ ಕೋರುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ.

ಇತ್ತೀಚೆಗೆ ದುಬೈ ಪ್ರವಾಸದ ಸಂದರ್ಭದಲ್ಲಿ ಶಾಸಕರಾಗ ಗುರುರಾಜ್ ಗಂಟಿಹೊಳೆ ಅವರು ಅಲ್ಲಿ ನೆಲೆಸಿರುವ ಕ್ಷೇತ್ರದ, ಜಿಲ್ಲೆಯ ಬಂಧುಗಳೊಂದಿಗೆ ಮಾತುಕತೆ ನಡೆಸಿ ಬೈಂದೂರಿನ ಸರ್ಕಾರಿ ಶಾಲೆಗಳ ಅಭಿವೃದ್ಧಿಯ ರೂಪುರೇಷೆಗಳನ್ನು ತೆರೆದಿಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅತ್ಯುತ್ತಮ ಸ್ಪಂದನೆ : ಬೈಂದೂರು ಕ್ಷೇತ್ರದ ಸರ್ಕಾರಿ ಶಾಲೆ ಅಭಿವೃದ್ಧಿಗೆ ಶಾಸಕರು ಹೊಂದಿರುವ ಬದ್ಧತೆ ಹಾಗೂ ಕಾರ್ಯ ನಿಷ್ಠೆಗೆ ದುಬೈ ನಲ್ಲಿ ನೆಲೆಸಿರುವ ಕ್ಷೇತ್ರದ ಪ್ರಮುಖರು ಮೆಚ್ಚುಗೆ ವ್ಯಕ್ತಪಡಿಸಿ ಒಂದೇ ಮಾತುಕತೆಯಲ್ಲಿ 7 ಶಾಲೆಗಳನ್ನು ದತ್ತು ಪಡೆಯಲು ಏಳು ಮಂದಿ ದಾನಿಗಳು‌ ಮುಂದೆ ಬಂದಿದ್ದಾರೆ. ಅನೇಕರು ಹಲವು ರೀತಿಯಲ್ಲಿ ಸರ್ಕಾರಿ ಶಾಲೆಗೆ ಕೊಡುಗೆ ನೀಡುವುದಾಗಿ ಮತ್ತು ಅಭಿವೃದ್ಧಿಗೆ ಸಹಕರಿಸುವುದಾಗಿ ಬೆಂಬಲ ಸೂಚಿಸಿದ್ದಾರೆ.
ಇದೇವೇಳೆ ದುಬೈ ಉದ್ಯಮಿಗಳು ಹಾಗೂ ಸಂಘ ಸಂಸ್ಥೆಗಳು ಜತೆಯಾಗಿ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರನ್ನು ಸನ್ಮಾನಿಸಿದರು.
ಭೇಟಿಯ ವೇಳೆ ವಕ್ವಾಡಿ ಪ್ರವೀಣ್ ಶೆಟ್ಟಿ ಮತ್ತು ಗ್ರೀನ್ ವ್ಯಾಲಿ ಸಂಸ್ಥಾಪಕರಾದ ಮೀರನ್, ರಮೀ ಗ್ರೂಪ್ ಮಾಲಕರಾದ ವರದರಾಜ್ ಶೆಟ್ಟಿ, ಪ್ರಮುಖರಾದ ಗೋಪಾಲ್ ಶೆಟ್ಟಿ, ವೆಂಕಟೇಶ್ ಕಿಣಿ, ಸುರೇಶ್ ಶೆಟ್ಟಿ, ಕೃಷ್ಣ ಪ್ರಸಾದ್ ಅಡ್ಯಂತಾಯ, ಅರುಣ್ ಕುಮಾರ್ ಶಿರೂರು ಮೊದಲಾದವರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೊಂದು ಸ್ಮರಣೀಯ ಪ್ರವಾಸ:  ಪ್ರವಾಸವೆಂದರೆ ಮೋಜು ಮಸ್ತಿ‌ ಮಾತ್ರವಲ್ಲ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಚಿಂತನೆಯನ್ನು ತೆರೆದಿಡಬಹುದು ಎನ್ನುವುದಕ್ಕೆ ದುಬೈ ಪ್ರವಾಸ ಸಾಕ್ಷಿಯಾಗಿದೆ. ಬೈಂದೂರು ‌ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿ, ವಿಮಾನ ನಿಲ್ದಾಣ ನಿರ್ಮಾಣ, ಪ್ರವಾಸೋದ್ಯಮ ಅಭಿವೃದ್ಧಿಯ ಬಗ್ಗೆ ದುಬೈನಲ್ಲಿ ನೆಲೆಸಿರುವ ನಮ್ಮ ಕ್ಷೇತ್ರದ ಸಾಧಕರು ಹಾಗೂ ಉದ್ಯಮಗಳನ್ನು ಕೋರಿಕೊಂಡಾಗ ಎಲ್ಲವೂ ಉತ್ತಮವಾಗಿ ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಎಲ್ಲ ವಲಯದಿಂದಲೂ ಉತ್ತಮ ಸಹಕಾರ ವ್ಯಕ್ತವಾಗುತ್ತಿದೆ. ಈ ಪ್ರವಾಸವು ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಸ್ಮರಣೀಯ ಎಂದು ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಅಭಿಪ್ರಾಯ ವ್ಯಕ್ತಪಡಿಸಿದರು