Sunday, January 19, 2025
ಸುದ್ದಿ

ಉಕ್ಕಿನ ಮನುಷ್ಯನ ಉಕ್ಕಿನ ಪ್ರತಿಮೆ ಉದ್ಘಾಟನೆಗೆ ಸಿದ್ಧ | 2989 ಕೋಟಿ ರೂ ವೆಚ್ಚದಲ್ಲಿ ಪ್ರತಿಮೆ ಸ್ಥಾಪನೆ | ಇದರ ವಿಶೇಷತೆಗಳೇನು? – ಕಹಳೆ ನ್ಯೂಸ್

ಬೆಂಗಳೂರು (ಅ.30): ದೇಶದ ಮೊದಲ ಗೃಹ ಸಚಿವ, ಉಪ ಪ್ರಧಾನಿ ಸರ್ದಾರ್ ವಲ್ಲಭಭಾಯ್ ಪಟೇಲ್ ಸ್ಮರಣಾರ್ಥ ಗುಜರಾತಿನ ನರ್ಮದಾ ನದಿಯ ಮಧ್ಯೆ ‘ಏಕತಾ ಪ್ರತಿಮೆ’ ಹೆಸರಿನಲ್ಲಿ ಜಗತ್ತಿನ ಅತಿ ಎತ್ತರದ ಪ್ರತಿಮೆ ನಿರ್ಮಾಣವಾಗಿದೆ.  ಇನ್ನು 15 ದಿನದಲ್ಲಿ ಇದು ಲೋಕಾರ್ಪಣೆಗೊಳ್ಳಲಿದ್ದು, ಪ್ರತಿಮೆಯ ವಿಶೇಷತೆ ಏನು ಎಂಬ ಸಮಗ್ರ ವಿವರ ಇಲ್ಲಿದೆ.

ಪಟೇಲರಿಗೆ ಉಕ್ಕಿನ ಪ್ರತಿಮೆ ಏಕೆ?

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸರ್ದಾರ್ ವಲ್ಲಭಭಾಯಿ ಪಟೇಲ್ ಜನಿಸಿದ್ದು 31 ಅಕ್ಟೋಬರ್ 1875 ರಂದು ಗುಜರಾತ್‌ನ ಪಟೇಲ್ ಪಾಟೀದಾರ್ ಸಮುದಾಯದಲ್ಲಿ. ಪಟೇಲರು ಕಾಂಗ್ರೆಸ್‌ನ ಹಿರಿಯ ನಾಯಕ, ಮುತ್ಸದ್ದಿ, ಹೋರಾಟಗಾರರು, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟಕ್ಕಿಳಿದ ಪ್ರಮುಖರು. ಸ್ವಾತಂತ್ರ್ಯಾನಂತರದಲ್ಲಿಯೂ ದೇಶದ ಏಕತೆಗೆ ಶ್ರಮಿಸಿದ ಜನನಾಯಕ. ದೇಶದ ಮೊದಲ ಉಪಪ್ರಧಾನಿ ಮತ್ತು ಗೃಹ ಸಚಿವ. ಉಕ್ಕಿನ ಮನುಷ್ಯ ಎಂದೇ ಖ್ಯಾತರಾಗಿದ್ದ ಅವರು ಇಡೀ ದೇಶವನ್ನು ಹೇಗೆ ಒಗ್ಗೂಡಿಸಿದರು ಎಂಬುದು ಇಂದು ದಂತಕತೆಯಾಗಿದೆ.

ಅವರ ಹೆಸರು, ಚಿಂತನೆ, ದ್ಯೇಯಗಳನ್ನು ಅಜರಾಮರಗೊಳಿಸುವ ಉದ್ದೇಶದಿಂದ ನರೇಂದ್ರ ಮೋದಿ ಸರ್ಕಾರ ಈ ಪ್ರತಿಮೆಯನ್ನು ನಿರ್ಮಿಸಿದೆ.

ಇದಕ್ಕೆ ಬಳಸಿದ್ದು ರೈತರು ಕೊಟ್ಟ ಕಬ್ಬಿಣ!

ಲೋಹ ಚಳವಳಿ ಎಂಬ ಗ್ರಾಮೀಣ ಮಟ್ಟದ ವಿಶಿಷ್ಟ ಕಾರ್ಯಕ್ರಮದ ಮೂಲಕ ರೈತರಿಂದ ಈ ಪ್ರತಿಮೆಗೆ ಬೇಕಿದ್ದ ಕಬ್ಬಿಣ ಸಂಗ್ರಹಿಸಲಾಗಿದೆ. 2013-14 ರ ಅವಧಿಯಲ್ಲಿ ಈ ಆಂದೋಲನ ನಡೆಸಲಾಗಿತ್ತು. ಇದಲ್ಲದೆ ೨೦೧೬ರಲ್ಲಿಯೂ ದೇಶಾದ್ಯಂತ ವಿವಿಧ ಭಾಗಗಳಿಂದ ೧೩೫ ಟನ್ ಕಬ್ಬಿಣ ಸಂಗ್ರಹಿಸಲಾಗಿತ್ತು. ಅದರಲ್ಲಿ ೧೦೯ ಟನ್ ಅನ್ನು ಪ್ರತಿಮೆಯ ಅಡಿಪಾಯ ನಿರ್ಮಾಣಕ್ಕೆ ಬಳಸಲಾಗಿದೆ.

ಪ್ರವಾಸೋದ್ಯಮಕ್ಕೆ ಏನು ಉಪಯೋಗ?

ನರ್ಮದಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸರ್ದಾರ್ ಸರೋವರ ಅಣೆಕಟ್ಟೆಯಿಂದ ಕೆಳಭಾಗಕ್ಕೆ 3.2 ಕಿ.ಮೀ. ದೂರದಲ್ಲಿ ಸಾಧು ಬೆಟ್ಟದಲ್ಲಿರುವ ಸರ್ದಾರ್ ಸರೋವರದ ತಟದಲ್ಲಿ ಈ ಐತಿಹಾಸಿಕ ಪ್ರತಿಮೆ ತಲೆ ಎತ್ತಿದೆ. ಈ ಪ್ರತಿಮೆಯ ಒಳಗೇ ವೀಕ್ಷಣಾ ಸ್ಥಳವೂ ಇರಲಿದೆ.

ಪ್ರತಿಮೆಯ 153 ಮೀಟರ್ ಎತ್ತರದಲ್ಲಿ 200 ಮಂದಿ ಹೋಗಿ ನಿಂತು ಸರ್ದಾರ್ ಸರೋವರವನ್ನು ನೋಡಬಹುದು! ಅಲ್ಲಿಗೆ ಜನರನ್ನು ಕರೆದೊಯ್ಯಲು ಪ್ರತಿಮೆಯೊಳಗೇ ಎರಡು ಲಿಫ್ಟ್‌ಗಳಿವೆ. ನಿತ್ಯ 15 ಸಾವಿರ ಪ್ರವಾಸಿಗರು ಏಕತಾ ಪ್ರತಿಮೆ ವೀಕ್ಷಣೆಗೆ ಆಗಮಿಸುವ ನಿರೀಕ್ಷೆ ಇದೆ. ಅಮೆರಿಕದ ಲಿಬರ್ಟಿ ಪ್ರತಿಮೆಯಂತೆ ನಿತ್ಯ ಅಗಾಧ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಿ ಗುಜರಾತ್‌ನ ಪ್ರವಾಸೋದ್ಯಮವನ್ನು ಮೇಲೆತ್ತುವ ನಿರೀಕ್ಷೆ ಕೂಡ ಇದೆ.

ವಿಶ್ವದ ಅತಿ ಎತ್ತರದ ಪ್ರತಿಮೆ ಇದು

182 ಮೀಟರ್ (597 ಅಡಿ) ಎತ್ತರದ ಪ್ರತಿಮೆ ಇದಾಗಿದ್ದು, 2389 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಇದು ನ್ಯೂಯಾರ್ಕ್ ನಲ್ಲಿರುವ ವಿಶ್ವಪ್ರಸಿದ್ಧ ಲಿಬರ್ಟಿ ಪ್ರತಿಮೆಗಿಂತ ದುಪ್ಪಟ್ಟು ಎತ್ತರವಾಗಿದೆ. ಸದ್ಯ ವಿಶ್ವದ ಅತ್ಯಂತ ಎತ್ತರದ ಪ್ರತಿಮೆ ಎಂಬ ಖ್ಯಾತಿ ಪಡೆದ ಬುದ್ಧನ ಪ್ರತಿಮೆ ಚೀನಾದಲ್ಲಿದೆ. ಅಲ್ಲಿನ ಲೂಶಾನ್‌ನಲ್ಲಿರುವ ಬುದ್ಧನ ಪ್ರತಿಮೆ 128 ಮೀಟರ್ ಎತ್ತರವಿದೆ. ಗುಜರಾತಿನ ಏಕತಾ ಪ್ರತಿಮೆಯು ಚೀನಾ ಬುದ್ಧನ ಪ್ರತಿಮೆಗಿಂತ 54 ಮೀಟರ್ ಅಧಿಕ ಎತ್ತರವಿದೆ.

3500 ಕಾರ್ಮಿಕರ ಶ್ರಮ

ಏಕತಾ ಪ್ರತಿಮೆ ಎಂದೇ ಕರೆಯಲಾಗುತ್ತಿರುವ ಸರ್ದಾರ್ ವಲ್ಲಭಭಾಯಿ ಪಟೇಲ್‌ರ ಪ್ರತಿಮೆ ನಿರ್ಮಾಣದಲ್ಲಿ ಚೀನಾದ ಕಾರ್ಮಿಕರೂ ಸೇರಿದಂತೆ ಸುಮಾರು ೩೫೦೦ ಕಾರ್ಮಿಕರ ಶ್ರಮವಿದೆ. ಇಷ್ಟೂ ಜನರು ಎರಡು ಶಿಫ್ಟ್‌ನಲ್ಲಿ ಕೆಲಸ ಮಾಡಿದ್ದಾರೆ. ಕೇವಲ ಪ್ರತಿಮೆ ಮಾತ್ರವಲ್ಲದೆ ಪ್ರತಿಮೆ ಇರುವ ಜಾಗಕ್ಕೆ ಸಂಪರ್ಕ ಕಲ್ಪಿಸುವ ಸಲುವಾಗಿ ವಡೋದರಾ ನಗರದ ಕೇವಡಿಯಾ ಟೌನ್‌ನಿಂದ ಏಕತಾ ಪ್ರತಿಮೆವರೆಗೆ 3.5 ಕಿ.ಮೀ ಹೈವೇ ಕೂಡ ನಿರ್ಮಾಣ ಮಾಡಲಾಗಿದೆ.

ಇನ್ನೊಂದು ವಿಶೇಷತೆ ಎಂದರೆ ಪ್ರತಿಮೆ ನಿರ್ಮಾಣ ಕಾಮಗಾರಿ ಮುಗಿದ ಮೇಲೂ ಇದು ಅಂದಾಜು 15,000 ಬುಡಕಟ್ಟು ಜನರಿಗೆ ಉದ್ಯೋಗ ಒದಗಿಸಲಿದೆ. ಚಂಡಮಾರುತ, ಭೂಕಂಪನಕ್ಕೂ ಜಗ್ಗಲ್ಲ ಉಕ್ಕಿನ ಮನುಷ್ಯ ಎಂದೇ ಖ್ಯಾತರಾಗಿದ್ದ ಸರ್ದಾರ್ ಪಟೇಲರ ಏಕತಾ ಪ್ರತಿಮೆ ನಿರ್ಮಾಣಕ್ಕೆ ಸುಮಾರು 22,500 ಟನ್ ಸಿಮೆಂಟ್ ಹಾಗೂ 25,000 ಟನ್ ಕಬ್ಬಿಣ ಬಳಕೆ ಮಾಡಲಾಗಿದೆ.

ಹಾಗಾಗಿ ಸೆಕೆಂಡ್‌ಗೆ 60 ಮೀಟರ್ ವೇಗದಲ್ಲಿ ಅಪ್ಪಳಿಸುವ ಚಂಡಮಾರುತ ಅಥವಾ ತೀವ್ರತರ ಭೂಕಂಪನವನ್ನೂ ಪ್ರತಿಮೆ ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಮಳೆ ಹಾಗೂ ಸಿಡಿಲಿನಿಂದ ಪ್ರತಿಮೆಗೆ ಯಾವುದೇ ಧಕ್ಕೆಯಾಗದಂತೆ ರೇಡಿಯೋ ತಂತ್ರಜ್ಞಾನ ಅಳವಡಿಸಲಾಗಿದೆ.

2389 ಕೋಟಿ ರು. ವೆಚ್ಚ!

ಏಕತಾ ಪ್ರತಿಮೆ ನಿರ್ಮಾಣಕ್ಕೆ ತಗುಲಿರುವ ಒಟ್ಟು ಖರ್ಚು 2,389 ಕೋಟಿ ರುಪಾಯಿ. ನರ್ಮದಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸರ್ದಾರ್ ಸರೋವರ ಅಣೆಕಟ್ಟೆಯಿಂದ ಕೆಳಭಾಗಕ್ಕೆ 3.2 ಕಿ.ಮೀ. ದೂರದಲ್ಲಿ ಈ ಪ್ರತಿಮೆ ಎದ್ದು ನಿಂತಿದೆ. ಇದರೊಂದಿಗೆ ಹೆದ್ದಾರಿ, ಟಿಕೆಟ್ ಕೌಂಟರ್, ಫುಡ್ ಕೋರ್ಟ್, ಫೋರ್ ಲೇನ್ ಅಪ್ರೋಚ್ ಹೈವೇ, ಶ್ರೇಷ್ಠ ಭಾರತ್ ಭವನ್ (೫೨ ಕೋಣೆಯಿರುವ ೩ ಸ್ಟಾರ್ ಲಾಡ್ಜ್) ಸೌಲಭ್ಯವನ್ನು ಈ ಯೋಜನೆ ಒಳಗೊಂಡಿದೆ. ಜೊತೆಗೆ ಪಟೇಲರ ಜೀವನ ಚಿತ್ರಣವನ್ನು ಒಳಗೊಂಡ ವಸ್ತುಸಂಗ್ರಹಾಲಯ ಮತ್ತು ಚಲನಚಿತ್ರ ಪ್ರದರ್ಶಿಸುವ ವ್ಯವಸ್ಥೆ ಕೂಡ ಇಲ್ಲಿದೆ.

ಅಲ್ಲದೆ ಪ್ರತಿಮೆಯ ಸುತ್ತಮುತ್ತಲಿನ ಪ್ರದೇಶವು ಮಾಲಿನ್ಯ ಅಥವಾ ವಾಹನ ಓಡಾಟದಿಂದ ಮುಕ್ತವಾಗಿರಲು ವಿಶೇಷ ಬೋಟ್ ವ್ಯವಸ್ಥೆ ಕಲ್ಪಿಸಲಾಗಿದೆ.

ಜನ್ಮದಿನದಂದು ಲೋಕಾರ್ಪಣೆ

ಏಕತಾ ಪ್ರತಿಮೆ  ಅಕ್ಟೋಬರ್ 31 ರಂದು ಅಂದರೆ ವಲ್ಲಭಬಾಯಿ ಪಟೇಲರ ೧೪೩ನೇ ಜನ್ಮ ಶತಮಾನೋತ್ಸವದಂದು ಲೋಕಾರ್ಪಣೆಗೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ ಪ್ರತಿಮೆಯನ್ನು ಅನಾವರಣ ಮಾಡಲಿದ್ದಾರೆ. ಆ ದಿನವನ್ನು ರಾಷ್ಟ್ರೀಯ ಏಕತಾ ದಿವಸ್ ಎಂದೂ ಕೂಡ ಕರೆಯಲಾಗುತ್ತಿದೆ. 2014 ರಲ್ಲಿ ಕೇಂದ್ರ ಸರ್ಕಾರ ಪಟೇಲ್ ಅವರ ಜನ್ಮ ದಿನವನ್ನು ರಾಷ್ಟ್ರೀಯ ಏಕತಾ ದಿವಸವೆಂದು ಘೋಷಿಸಿದೆ.