Sunday, January 19, 2025
ಕೃಷಿದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳ: ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ನಡೆದ ಕೃಷಿ ಸಖಿಯರಿಗೆ ನರೇಗಾ ಯೋಜನೆ ತರಬೇತಿ ಕಾರ್ಯಕ್ರಮ- ಕಹಳೆ ನ್ಯೂಸ್

ಬಂಟ್ವಾಳ: ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ತಾಲೂಕು ಪಂಚಾಯತ್‌ ಬಂಟ್ವಾಳ ಹಾಗೂ ತೋಟಗಾರಿಕೆ ಇಲಾಖೆ ಇದರ ಆಶ್ರಯದಲ್ಲಿ ತಾಲೂಕಿನ ಕೃಷಿ ಸಖಿಗಳಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಕುರಿತು ತರಬೇತಿ ಕಾರ್ಯಕ್ರಮವನ್ನು ನಡೆಸಲಾಯಿತು.

ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್‌ ಹೊಳ್ಳ, ಯೋಜನೆಯ ಸವಲತ್ತುಗಳನ್ನು ಗ್ರಾಮದ ಜನರಿಗೆ ತಲುಪಿಸುವ ಮಹತ್ತರ ಜವಾಬ್ದಾರಿ ಕೃಷಿ ಸಖಿಯರ ಮೇಲಿದೆ. ವೈಯಕ್ತಿಕ ಆಸ್ತಿ ಸೃಜನೆಗೆ ಸಹಾಯಧನ ನೀಡುವ ಅತ್ಯುತ್ತಮ ಯೋಜನೆ ನರೇಗಾ ಯೋಜನೆ. ನರೇಗಾ ಯೋಜನೆಯಡಿ ಕೈಗೊಳ್ಳಬಹುದಾದ ಕಾಮಗಾರಿಗಳ ಬಗ್ಗೆ ಅರ್ಹ ಫಲಾನುಭವಿಗಳಿಗೆ ತಿಳಿಸುವ ಮೂಲಕ ಗ್ರಾಮದ ಅಭಿವೃದ್ಧಿಗೆ ಸಹಕರಿಸಬೇಕು. ಇದಕ್ಕೆ ಬೇಕಾದ ಎಲ್ಲಾ ಸಹಕಾರವನ್ನು ತಾಲೂಕು ಪಂಚಾಯಿತಿನಿಂದ ನೀಡಲಾಗುವುದು ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಜೋ ಪ್ರದೀಪ್‌ ಡಿಸೋಜ ಮಾತನಾಡಿ, ನರೇಗಾ ಯೋಜನೆಯಡಿ ಫಲಾನುಭವಿಯು ವೈಯಕ್ತಿಕ ಜಾಗದಲ್ಲಿ ತೋಟಗಾರಿಕೆ ಬೆಳೆಗಳನ್ನು ಕೈಗೊಳ್ಳಲು ಅವಕಾಶವಿದ್ದು, ಅಡಿಕೆ ಕೃಷಿ, ತೆಂಗು, ವೀಳ್ಯದೆಲೆ, ಮಲ್ಲಿಗೆ, ಕಾಳುಮೆಣಸು, ಅಂಗಾಂಶ ಬಾಳೆ, ಬಸಿಗಾಲುವೆ (ಉಜಿರ್‌ ಕಣಿ), ರಂಬೂಟನ್‌, ಡ್ರ್ಯಾಗನ್‌ ಫ್ರೂಟ್ ಸೇರಿ ವಿವಿಧ ಬೆಳೆಗಳಿಗೆ ಸಹಾಯಧನ ಪಡೆಯಲು ಅವಕಾಶವಿದೆ. ಕೃಷಿ ಸಖಿಗಳು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಈ ಬಗ್ಗೆ ಕೃಷಿಕರ ಮನೆ ಭೇಟಿ ನೀಡಿದಾಗ ಮಾಹಿತಿ ತಿಳಿಸಿ ಬೇಡಿಕೆ ಸಂಗ್ರಹಿಸಿ ಗ್ರಾಪಂಗೆ ಪಟ್ಟಿ ನೀಡಬೇಕು ಎಂದು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಯೋಜನೆಯಡಿ ಕೈಗೊಳ್ಳಬಹುದಾದ ತೆರೆದ ಬಾವಿ, ದನದ ಹಟ್ಟಿ, ಕೋಳಿ ಶೆಡ್‌, ಆಡು ಶೆಡ್‌, ಕೃಷಿ ಹೊಂಡ, ಇಂಗುಗುಂಡಿ ಸೇರಿ ವಿವಿಧ ಸಿವಿಲ್‌ ಕಾಮಗಾರಿಗಳ ಕುರಿತು ತಾಂತ್ರಿಕ ಸಂಯೋಜಕ (ಸಿವಿಲ್)‌ ಮಹೇಶ ವಿವರಿಸಿದರು.

ತಾಪಂ ಸಹಾಯಕ ನಿರ್ದೇಶಕರು (ಗ್ರಾ.ಉ) ವಿಶ್ವನಾಥ್‌ ಬಿ. ಮಾತನಾಡಿ, ಮಳೆ ನೀರು ಉಳಿಸಿ ಅಂತರ್ಜಲ ಮಟ್ಟ ಹೆಚ್ಚಿಸಲು ಕೃಷಿ ಹೊಂಡ, ಇಂಗುಗುಂಡಿ, ತೆರೆದ ಬಾವಿ, ಸಾರ್ವಜನಿಕ ತೋಡಿನ ಹೂಳೆತ್ತುವ ಕಾಮಗಾರಿಗಳನ್ನು ನರೇಗಾ ಯೋಜನೆಯಡಿ ಕೈಗೊಳ್ಳಲು ಅವಕಾಶವಿದೆ. ಫಲಾನುಭವಿಗಳು ಯೋಜನೆಯಡಿ ಕಾಮಗಾರಿ ಕೈಗೊಳ್ಳಲು ಗ್ರಾಮ ಪಂಚಾಯತ್‌ಗೆ ಅರ್ಜಿ ಸಲ್ಲಿಸಬೇಕು. ಈ ಬಗ್ಗೆ ಕೃಷಿ ಸಖಿಗಳ ಪಾತ್ರ ಮುಖ್ಯವಾಗಿರುತ್ತದೆ. ಗ್ರಾಮ ಪಂಚಾಯತ್‌ಗಳಲ್ಲಿ ನರೇಗಾ ಹೆಚ್ಚುವರಿ ಕ್ರಿಯಾಯೋಜನೆ ಸಿದ್ಧತೆ ಪ್ರಕ್ರಿಯೆ ಆರಂಭವಾಗಿದ್ದು, ಕೃಷಿ ಸಖಿಗಳು ಕ್ಷೇತ್ರ ಭೇಟಿಗೆ ಹೋದಾಗ ಬೇಡಿಕೆ ಪಡೆದು ಗ್ರಾಪಂಗೆ ವಿವರ ಸಲ್ಲಿಸಬೇಕು. ಸರ್ಕಾರದ ಸವಲತ್ತು ಅರ್ಹರಿಗೆ ತಲುಪಲು ನಾವೆಲ್ಲರೂ ಪ್ರಯತ್ನಿಸಬೇಕು. ಗ್ರಾಪಂ ವ್ಯಾಪ್ತಿಯ ಫಲಾನುಭವಿಗಳು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ತಾಪಂ ವ್ಯವಸ್ಥಾಪಕ ಪ್ರಕಾಶ್‌, ಸಂಜೀವಿನಿ ಜಿಲ್ಲಾ ವ್ಯವಸ್ಥಾಪಕರು (ಕೃಷಿ ಜೀವನೋಪಾಯ) ಶ್ರೀಶೈಲ, ತಾಲೂಕು ಎನ್‌ಆರ್‌ಎಲ್‌ಎಂ ವ್ಯವಸ್ಥಾಪಕ ಪ್ರದೀಪ್‌ ಕಾಮತ್, ತಾಲೂಕು ಐಇಸಿ ಸಂಯೋಜಕ‌ ರಾಜೇಶ್, ತಾಂತ್ರಿಕ ಸಹಾಯಕರು (ತೋಟಗಾರಿಕೆ ಇಲಾಖೆ)‌ ಕವನ, ತೋಟಗಾರಿಕೆ ಇಲಾಖೆ ಸಿಬ್ಬಂದಿ ಇತರರು ಉಪಸ್ಥಿತರಿದ್ದರು.