ವಿದುಷಿ ಸುಮಂಗಲಾ ರತ್ನಾಕರ ರಾವ್ ಅವರ ನಾಟ್ಯಾರಾಧನಾ ಕಲಾ ಕೇಂದ್ರದ ತ್ರಿಂಶೋತ್ಸವದ ಅಂಗವಾಗಿ ನಡೆದ ನೃತ್ಯಾಮೃತ ಸರಣಿ ನೃತ್ಯ ಕಾರ್ಯಕ್ರಮ ; ಕಾರ್ಯಕ್ರಮ ಉದ್ಘಾಟಿಸಿ, ಶ್ಲಾಘಿಸಿದ ಪಿ.ಜಿ. ಜಗನ್ನಿವಾಸ ರಾವ್ – ಕಹಳೆ ನ್ಯೂಸ್
ಮಂಗಳೂರು: ಭರತನಾಟ್ಯ ಒಂದು ಶ್ರೇಷ್ಠ ಕಲೆ. ಭರತನಾಟ್ಯದಲ್ಲಿ ಹೊಸ ಕಲ್ಪನೆಯೊಂದಿಗೆ ರೂಪಿಸಿದ ಕಾರ್ಯಕ್ರಮದ ಕುರಿತು ಮೆಚ್ಚುಗೆ ಸೂಚಿಸಿದರು. ಇಂತಹ ಪ್ರಸ್ತುತಿಗಳಾದಾಗ
ಭರತನಾಟ್ಯ ಕಲೆ ಶ್ರೀಮಂತವಾಗಿ ಬೆಳೆಯುತ್ತದೆ. ಎಂದು ಪುತ್ತೂರು ನಗರಸಭಾ ಸದಸ್ಯ ಪಿ.ಜಿ. ಜಗನ್ನಿವಾಸ ರಾವ್ ಅಭಿಪ್ರಾಯ ಪಟ್ಟರು.
ಅವರು ನಗರದ ಉರ್ವ ನಾಟ್ಯಾರಾಧನಾ ಕಲಾ ಕೇಂದ್ರದ ತ್ರಿಂಶೋತ್ಸವದ ಅಂಗವಾಗಿ ನಡೆದ ನೃತ್ಯಾಮೃತ ಸರಣಿ ನೃತ್ಯ ಕಾರ್ಯಕ್ರಮಗಳ ಅಂಗವಾಗಿ ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಅವರ ನೃತ್ಯಾಂತರಂಗ ಸರಣಿ ಕಾರ್ಯಕ್ರಮದ ಸಹಯೋಗದೊಂದಿಗೆ ನಡೆದ ಹಾಡೊಂದು ಭಾವ ಹಲವು ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು.
ಹರೀಶ್ ಬೊಳಂತಿಮೊಗರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪುತ್ತೂರಿನ ಶಶಿಶಂಕರ ಸಭಾಂಗಣದಲ್ಲಿ ನಡೆದ ನೃತ್ಯ ಕಾರ್ಯಕ್ರಮದಲ್ಲಿ ವಿದುಷಿ ಅಕ್ಷತಾ ಕೆ ( ನೆರೆಮನೆಯ ಗೋಪಿಕೆಯಾಗಿ- ವಾತ್ಸಲ್ಯ), ಧರಿತ್ರಿ ಭಿಡೆ ( ಕೃಷ್ಣನ ಪ್ರೇಮಿಯಾಗಿ- ಶೃಂಗಾರ), ವಿದುಷಿ ಅನು ಧೀರಜ್ ( ಮುಗ್ಧ ಬಾಲೆಯಾಗಿ- ಕೌತುಕ) , ವಿದ್ವಾನ್ ಬಿ ದೀಪಕ್ ಕುಮಾರ್ ( ಹದಿಹರೆಯದ ಗೊಲ್ಲ- ಕೃಷ್ಣ ಸಖ್ಯ) , ವಿದುಷಿ ಸುಮಂಗಲಾ ರತ್ನಾಕರ ರಾವ್ ( ತತ್ವಜ್ಞಾನಿಯಾಗಿ ) ಪುರಂದರದಾಸ ವಿರಚಿತ ಸುಪ್ರಸಿದ್ಧ ಪಿಳ್ಳಂಗೋವಿಯ ಚೆಲ್ವ ಕೃಷ್ಣನ ಎಂಬ ಸಾಹಿತ್ಯಕ್ಕೆ ರಂಗ ಪ್ರಸ್ತುತಿ ನೀಡಿದರು.
ಹಿಮ್ಮೇಳದಲ್ಲಿ ವಿದುಷಿ ಪ್ರೀತಿಕಲಾ ದೀಪಕ್ ಪ್ರತಿಯೊಬ್ಬರ ಭಾವಕ್ಕನುಗುಣವಾಗಿ ನೃತ್ಯ ನಿರ್ದೇಶಕರ ಇಂಗಿತದಂತೆ ಬೇರೆ ರಾಗ-ತಾಳಗಳಲ್ಲಿ ಹಾಡಿ ನೃತ್ಯದ ಭಾವಕ್ಕೆ ಜೀವ ನೀಡಿದರು. ಶ್ಯಾಮ ಭಟ್ಟರು ಮೃದಂಗದಲ್ಲಿ ಮತ್ತು ಕೃಷ್ಣ ಗೋಪಾಲ್ ಪುಂಜಾಲಕಟ್ಟೆ ಕೊಳಲಿನಲ್ಲಿ ಸಹಕರಿಸಿದ್ದರು. ಸುಮಂಗಲಾ ರತ್ನಾಕರ ರಾವ್ ಹಾಗೂ ದೀಪಕ್ ಕುಮಾರ್ ಪುತ್ತೂರು ನಟುವಾಂಗದಲ್ಲಿ ಸಹಕರಿಸಿದ್ದರು.
ವಿಶ್ವಕಲಾ ನಿಕೇತನ ಪುತ್ತೂರಿನ ಹಿರಿಯ ಗುರು ವಿದುಷಿ ನಯನ ವಿ ರೈ,ಕುದ್ಕಾಡಿ, ಕಲಾ ಪ್ರೇಕ್ಷಕಿ ಚಿತ್ರಾ ಭಿಡೆ, ನೃತ್ಯಾಂಜಲಿ ಜ್ಯೋತಿಗುಡ್ಡೆಯ ನಿರ್ದೇಶಕಿ ಮಲ್ಲಿಕಾ ವೇಣುಗೋಪಾಲ್ ಹಾಗೂ ನಾಟ್ಯಾರಾಧನಾದ ಹಿರಿಯ ವಿದ್ಯಾರ್ಥಿ ಶೋಧನ್ ಕುಮಾರ್ ಬಿ,ಮುಖ್ಯ ಅಭ್ಯಾಗತರಾಗಿ ಆಗಮಿಸಿದ್ದರು.
ನಾಟ್ಯಾರಾಧನಾದ ಟ್ರಷ್ಟಿ ಬಿ. ರತ್ನಾಕರ ರಾವ್ ಹಾಗೂ ಮೂಕಾಂಬಿಕಾ ನೃತ್ಯ ಸಂಸ್ಥೆಯ ಗಿರೀಶ್ ಕುಮಾರ್ ಪುತ್ತೂರು, ಶಶಿಪ್ರಭಾ ಬಿ. ಉಪಸ್ಥಿತರಿದ್ದರು. ಸುಮಂಗಲಾ ರತ್ನಾಕರ ರಾವ್ ಸ್ವಾಗತಿಸಿದರು. ದೀಪಕ್ ಕುಮಾರ್ ವಂದಿಸಿದರು. ಆರಾಧ್ಯ, ಅಭಿಜ್ಞ ಹಾಗೂ ಜನ್ಯ ಸಹಕರಿಸಿದರು.
ಅವನಿ ರೈ, ಪೂರ್ವಿ ಬಿ.ಸಿ, ಅಕ್ಷತಾ, ಧನ್ವಿ ಹಾಗೂ ವೈಭವಿ ಕಲಾವಿದರನ್ನು ಪರಿಚಯಿಸಿದರು. ವೃಂದಾ ರಾವ್ ಕಾರ್ಯಕ್ರಮ ನಿರೂಪಿಸಿದರು.