ಹೈನುಗಾರರ ರೂ. 1100 ಕೋಟಿ ಪ್ರೋತ್ಸಾಹ ಧನ ಶೀಘ್ರ ಬಿಡುಗಡೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಶಾಸಕ ಯಶ್ ಪಾಲ್ ಸುವರ್ಣ ಪತ್ರ– ಕಹಳೆ ನ್ಯೂಸ್
ಕಳೆದ 8 ತಿಂಗಳಿಂದ ರಾಜ್ಯದ ಹೈನುಗಾರರಿಗೆ ರಾಜ್ಯ ಸರ್ಕಾರದಿಂದ ಬಿಡುಗಡೆಗೆ ಬಾಕಿ ಇರುವ ಸುಮಾರು 1100 ಕೋಟಿ ಪ್ರೋತ್ಸಾಹ ಧನವನ್ನು ತಕ್ಷಣ ಏಕ ಕಂತಿನಲ್ಲಿ ಬಿಡುಗಡೆ ಮಾಡುವಂತೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಮುಖ್ಯ ಮಂತಿ ಸಿದ್ದರಾಮಯ್ಯ ರವರಿಗೆ ಪತ್ರ ಬರೆದು ಅಗ್ರಹಿಸಿದ್ದಾರೆ.
ರಾಷ್ಟದಲ್ಲಿ ಎರಡನೇ ಅತೀ ದೊಡ್ಡ ಹಾಲು ಮಂಡಳವಾಗಿ ಕರ್ನಾಟಕ ಹಾಲು ಮಹಾ ಮಂಡಳ ಮೂಡಿ ಬಂದಿದ್ದು, ಇದರ ಆಶ್ರಯದಲ್ಲಿ 15 ಒಕ್ಕೂಟಗಳು ಕಾರ್ಯಾಚರಿಸುತ್ತಿದೆ. ಈ ಒಕ್ಕೂಟಗಳಡಿಯಲ್ಲಿ ಸರಿ ಸುಮಾರು 15 ಸಾವಿರಕ್ಕೂ ಹೆಚ್ಚು ಹಾಲು ಉತ್ಪಾದಕರ ಸಹಕಾರಿ ಸಂಘಗಳ ಮೂಲಕ 26 ಲಕ್ಷ ಹಾಲು ಉತ್ಪಾದಕ ಸದಸ್ಯರಿಂದ ಪ್ರತಿನಿತ್ಯ 98 ಲಕ್ಷ ಲೀ. ಗೂ ಹೆಚ್ಚು ಹಾಲು ಶೇಖರಣೆಗೊಳ್ಳುತ್ತಿದೆ.
ಹಲವಾರು ಕಾರಣಗಳಿಂದ ಹೈನುಗಾರರು ಈ ಉದ್ಯಮದಿಂದ ವಿಮುಖರಾಗುತ್ತಿದ್ದು, ಮೇವು ಕೊರತೆ, ಪಶು ಆಹಾರ ಬೆಲೆ ಏರಿಕೆ, ಅಲ್ಲದೇ, ಹಸುಗಳಿಗೆ ನಿರಂತರವಾಗಿ ಹಲವು ಸಾಂಕ್ರಾಮಿಕ ಕಾಯಿಲೆಗಳು ಕಂಡುಬರುತ್ತಿದ್ದು, ಕ್ಲಪ್ತ ಸಮಯದಲ್ಲಿ ಚಿಕಿತ್ಸೆಗೆ ಪಶುವೈದ್ಯರ ಕೊರತೆ ಸಹಿತ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಈ ಎಲ್ಲಾ ಸವಾಲುಗಳ ಮಧ್ಯೆ ರಾಜ್ಯ ಸರಕಾರ ಕಳೆದ 8 ತಿಂಗಳಿನಿಂದ ಹೈನುಗಾರರಿಗೆ ನೀಡಬೇಕಾದ ಲೀಟರ್ ಒಂದಕ್ಕೆ ರೂ. 5 ಪ್ರೋತ್ಸಾಹ ಧನ ಒಟ್ಟು ಸುಮಾರು ರೂ. 1,100 ಕೋಟಿ ಹಣ ಬಿಡುಗಡೆ ಮಾಡದೆ ಬಾಕಿ ಉಳಿಸಿಕೊಂಡಿರುತ್ತದೆ.
ಇದರಿಂದ ಹೈನುಗಾರರು ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿದ್ದು, ಈ ಮೊತ್ತವನ್ನು ಏಕ ಕಂತಿನಲ್ಲಿ ಬಿಡುಗಡೆ ಮಾಡಬೇಕು ಮತ್ತು ಹೈನುಗಾರರಿಗೆ ನೀಡಲಾಗುತ್ತಿರುವ ಸಬ್ಸಿಡಿ ಮತ್ತು ಪ್ರೋತ್ಸಾಹ ಧನವನ್ನು ಮುಂದಿನ ದಿನಗಳಲ್ಲಿ ಹೈನುಗಾರರ ಮತ್ತು ಹೈನೋದ್ಯಮದ ಭವಿಷ್ಯದ ದೃಷ್ಟಿಯಿಂದ ಪ್ರತಿ ಲೀಟರಿಗೆ ರೂ. 5 ರಿಂದ ರೂ. 10 ಗೆ ಏರಿಸಬೇಕೆಂದು ಪತ್ರದಲ್ಲಿ ಮುಖ್ಯಮಂತ್ರಿ ಹಾಗೂ ಪಶು ಸಂಗೋಪನೆ ಸಚಿವರಿಗೆ ಆಗ್ರಹಿಸಿದ್ದಾರೆ.