Sunday, January 19, 2025
ಜಮ್ಮು ಮತ್ತು ಕಾಶ್ಮೀರಸುದ್ದಿ

ವ್ಯಾಪಕ ಬಿಗಿ ಭದ್ರತೆಯೊಂದಿಗೆ ಈ ಬಾರಿಯ ಅಮರನಾಥ ಯಾತ್ರೆ ಆರಂಭ ; ಪವಿತ್ರ ಗುಹೆಯತ್ತ ಹೊರಟ ಮೊದಲ ತಂಡ – ಕಹಳೆ ನ್ಯೂಸ್

ಶ್ರೀನಗರ: ಪವಿತ್ರ ಅಮರನಾಥ ಯಾತ್ರೆ(Amarnath Yatra)ಗೆ ಇಂದು (ಜೂನ್‌ 29) ಚಾಲನೆ ಸಿಕ್ಕಿದೆ. ಪವಿತ್ರ ಗುಹೆಯ ದರ್ಶನಕ್ಕಾಗಿ ಜಮ್ಮು ಮತ್ತು ಕಾಶ್ಮೀರದ ಗಂಡರ್ಬಾಲ್ ಜಿಲ್ಲೆಯ ಬಾಲ್ಟಾಲ್ ಬೇಸ್ ಕ್ಯಾಂಪ್‌ನಿಂದ ಯಾತ್ರಾರ್ಥಿಗಳ ಮೊದಲ ತಂಡ ಹೊರಟಿದೆ. ಶಂಖದ ನಾದ ಮತ್ತು ‘ಬುಮ್ ಬುಮ್ ಭೋಲೆ’, ‘ಜೈ ಬಾಬಾ ಬುರ್ಫಾನಿ’ ಹಾಗೂ ‘ಹರ್ ಹರ್ ಮಹಾದೇವ್’ ಘೋಷಣೆಗಳ ನಡುವೆ, ಯಾತ್ರಾರ್ಥಿಗಳ ಮೊದಲ ತಂಡವು ಶಿಬಿರದಿಂದ ಸಮುದ್ರ ಮಟ್ಟದಿಂದ 12,756 ಅಡಿ ಎತ್ತರದಲ್ಲಿರುವ ಪವಿತ್ರ ದೇವಾಲಯದತ್ತ ಹೆಜ್ಜೆ ಹಾಕಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

4,603 ಯಾತ್ರಾರ್ಥಿಗಳ ತಂಡ

ಜಾಹೀರಾತು
ಜಾಹೀರಾತು
ಜಾಹೀರಾತು

4,603 ಯಾತ್ರಾರ್ಥಿಗಳನ್ನು ಒಳಗೊಂಡ ಮೊದಲ ಬ್ಯಾಚ್ ಶುಕ್ರವಾರ ಬಿಗಿ ಭದ್ರತೆಗಳ ನಡುವೆ ಕಾಶ್ಮೀರ ಕಣಿವೆಯನ್ನು ತಲುಪಿತ್ತು. ಈ ವರ್ಷದ 52 ದಿನಗಳ ಸುದೀರ್ಘ ತೀರ್ಥಯಾತ್ರೆ ಆಗಸ್ಟ್ 19ರಂದು ಕೊನೆಗೊಳ್ಳಲಿದೆ. ಅಮರನಾಥ ಯಾತ್ರೆಗೆ ಆನ್‌ಲೈನ್‌ ನೋಂದಣಿ ಏಪ್ರಿಲ್ 15ರಂದು ಶ್ರೀ ಅಮರನಾಥ ದೇವಾಲಯ ಮಂಡಳಿಯ (SASB) ವೆಬ್‌ಸೈಟ್‌ ಮತ್ತು ಪೋರ್ಟಲ್‌ನಲ್ಲಿ ಪ್ರಾರಂಭವಾಗಿದ್ದು, ಅಭೂತಪೂರ್ವ ಪ್ರತಿಕ್ರಿಯೆ ಲಭಿಸಿದೆ.

 

 

ಬಿಗಿ ಭದ್ರತೆ

ಸುಗಮ ಯಾತ್ರೆಯನ್ನು ಖಚಿತಪಡಿಸಿಕೊಳ್ಳಲು ಮೂರು ಹಂತದ ಭದ್ರತೆ ಒದಗಿಸಲಾಗಿದೆ. ಚೆಕ್ ಪಾಯಿಂಟ್‌ ಸ್ಥಾಪನೆ ಸೇರಿದಂತೆ ಸಮಗ್ರ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ. ವರದಿಗಳ ಪ್ರಕಾರ ಈ ವರ್ಷದ ಯಾತ್ರೆಗೆ 3.50 ಲಕ್ಷಕ್ಕೂ ಹೆಚ್ಚು ಜನರು ನೋಂದಾಯಿಸಿಕೊಂಡಿದ್ದಾರೆ. ದೇವಾಲಯಕ್ಕೆ ತೆರಳುವ ಎರಡು ಮಾರ್ಗಗಳಲ್ಲಿ 125 ಅಡುಗೆಮನೆಗಳನ್ನು ಸ್ಥಾಪಿಸಲಾಗಿದೆ ಮತ್ತು 6,000ಕ್ಕೂ ಹೆಚ್ಚು ಸ್ವಯಂಸೇವಕರನ್ನು ನಿಯೋಜಿಸಲಾಗಿದೆ.

ಪ್ರತಿವರ್ಷ ಅಮರನಾಥ ಯಾತ್ರೆಯು ಲಕ್ಷಾಂತರ ಭಕ್ತರು ದೇಶದ ವಿವಿಧ ಭಾಗಗಳಿಂದ ಆಗಮಿಸುತ್ತಾರೆ. ಜುಲೈ-ಆಗಸ್ಟ್‌ (ಹಿಂದೂ ಕ್ಯಾಲೆಂಡರ್‌ನಲ್ಲಿ ಶ್ರಾವಣ ಮಾಸ)ನಲ್ಲಿ ಈ ಯಾತ್ರೆ ನಡೆಯುತ್ತದೆ. ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದಿಂದ 141 ಕಿ.ಮೀ. ದೂರದಲ್ಲಿರುವ ಅಮರನಾಥ ಪವಿತ್ರ ಗುಹೆಯು ಲಡಾರ್ ಕಣಿವೆಯಲ್ಲಿದೆ. ಇದು ಹಿಮನದಿಗಳು ಮತ್ತು ಹಿಮದಿಂದ ಆವೃತವಾದ ಪರ್ವತಗಳಿಂದ ಕೂಡಿದೆ. ಹಿಮಾಲಯದ ಅಮರನಾಥ ಯಾತ್ರೆ ಬಹಳ ಹಳೆಯದು ಮತ್ತು ಪವಿತ್ರವಾದದ್ದು. ಇಲ್ಲಿ ಸುಮಾರು 5,000 ವರ್ಷಗಳಷ್ಟು ಹಳೆಯದಾದ ಶಿವಲಿಂಗವಿದೆ.

 

 

ಉಗ್ರ ಕರಿನೆರಳು

ಈ ಬಾರಿ ಅಮರನಾಥ ಯಾತ್ರೆ ಗುರಿಯಾಗಿಸಿ ವಿಧ್ವಂಸಕ ಕೃತ್ಯ ಎಸಗಲು ಪಾಕಿಸ್ತಾನ ಭಾರೀ ಸಂಚು ರೂಪಿಸಿರುವುದು ಬಯಲಾಗಿದೆ. ಲಷ್ಕರ್‌ ಉಗ್ರ ಸಂಘಟನೆ(Lashkar Terrorists) ಮುಖ್ಯಸ್ಥ ಅಬ್ದುಲ್‌ ರೆಹಮಾನ್‌ ಮಕ್ಕಿ ಲಾಹೋರ್‌ ಮತ್ತು ಬಹವಾಲ್‌ಪುರದಲ್ಲಿ ಅತಿ ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಹಂಚುವ ಬಗ್ಗೆ ಮಹತ್ವ ಸಭೆ ನಡೆಸಿದ್ದಾನೆ. ಅಮರನಾಥ್‌ ಯಾತ್ರೆ ಸಂದರ್ಭದಲ್ಲಿ ವಿವಿಧ ಪ್ರದೇಶಗಳಲ್ಲಿ ದಾಳಿ ನಡೆಸಲು ಜಮ್ಮು ಮತ್ತು ಕಾಶ್ಮೀರಕ್ಕೆ ಅಮೆರಿಕ ನಿರ್ಮಿತ ಶಸ್ತ್ರಾಸ್ತಗಳನ್ನು ಪೂರೈಕೆ ಮಾಡುವುದೇ ಈ ಸಭೆಯ ಪ್ರಮುಖ ಉದ್ದೇಶವಾಗಿತ್ತು ಎಂದು ತಿಳಿದು ಬಂದಿದ್ದು, ಈ ನಿಟ್ಟಿನಲ್ಲಿ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ.

ದಾಳಿಗಳನ್ನು ಮತ್ತು ಕದನ ವಿರಾಮ ಉಲ್ಲಂಘನೆಗಳನ್ನು ತಡೆಯಲು ಭಾರತದ ಸರ್ಕಾರವು ಮುಂದಾಗಿದೆ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ.