ಬಾಯಲ್ಲಿ ನೊರೆ ಕಾರುತ್ತಾ ಒದ್ದಾಡುತ್ತಿದ್ದ ಅಪರಿಚಿತ ವ್ಯಕ್ತಿಯ ರಕ್ಷಿಸಿದ ಪೊಲೀಸರು-ಕಹಳೆ ನ್ಯೂಸ್
ಕುಕ್ಕೆ ಸುಬ್ರಹ್ಮಣ್ಯ: ಅಪರಿಚಿತ ವ್ಯಕ್ತಿಯೊಬ್ಬರು ಅನಾರೋಗ್ಯಕ್ಕೆ ಒಳಗಾಗಿ ಒದ್ದಾಡುತ್ತಿರುವುದನ್ನು ಕಂಡು ಚಿಕಿತ್ಸೆಗಾಗಿ ಪೊಲೀಸರ ನೆರವಿನೊಂದಿಗೆ ಖಾಸಗಿ ಆಂಬ್ಯುಲೆನ್ಸ್ ನಲ್ಲಿ ಕಡಬಕ್ಕೆ ಕರೆದೊಯ್ದ ಘಟನೆ ನಡೆದಿದೆ.
ಸುಬ್ರಹ್ಮಣ್ಯದ ವನದುರ್ಗ ದೇವಿ ದೇವಸ್ಥಾನದ ಬಳಿ ಬಾಯಲ್ಲಿ ನೊರೆ ಬಂದು ಅನಾಮಧೇಯ ವ್ಯಕ್ತಿಯೊಬ್ಬರು ಒದ್ದಾಡುತ್ತಿದ್ದರು. ಪೊಲೀಸರ ಸಹಾಯವಾಣಿಗೆ ಕರೆ ಮಾಡಿದ ಹಿನ್ನಲೆಯಲ್ಲಿ ಸುಬ್ರಹ್ಮಣ್ಯ ಎಸ್.ಐ ಕಾರ್ತಿಕ್ ನೇತೃತ್ವದ ಪೋಲಿಸರು ಆಗಮಿಸಿ ಸುಬ್ರಹ್ಮಣ್ಯ ದಲ್ಲಿ ಸಕಾಲಕ್ಕೆ ವೈದ್ಯಕೀಯ ಸೌಲಭ್ಯ ಇಲ್ಲದ ಕಾರಣ ಯುವ ತೇಜಸ್ ಆಂಬ್ಯುಲೆನ್ಸ್ ಮೂಲಕ ಕಡಬ ಸಮುದಾಯ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ರಾತ್ರಿ ವೇಳೆ ಅನಾಹುತ ಸಂಭವಿಸಿದರೆ ವೈದ್ಯಕೀಯ ಸೌಲಭ್ಯ ಇಲ್ಲದೆ ಇರುವುದರಿಂದ ಕಡಬದ ಅಥವಾ ಸುಳ್ಯವನ್ನು ಆಶ್ರಯಿಸಬೇಕಾದ ಅನಿವಾರ್ಯತೆ ಇದೆ ಎಂದು ನೆರೆದಿದ್ದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪೊಲೀಸರ ಜೊತೆ ಸ್ಥಳೀಯರಾದದೀಪಕ್ ನಂಬಿಯರ್, ಸುಹಾಸ್. ಎಸ್ ಎಸ್, ಜೀವನ್, ಶಿವ ಭಟ್, ದಿನೇಶ್ ಭಟ್, ಶಿವಕುಮಾರ್ ರಕ್ಷಣೆಗೆ ಸಹಕರಿಸಿದ್ದಾರೆ.