ಮಂಗಳೂರು ಜೈಲಲ್ಲಿ 2 ಗುಂಪುಗಳ ನಡುವೆ ಹಲ್ಲೆ | ಮುಹಮ್ಮದ್ ಸಮೀರ್ ಅಲಿಯಾಸ್ ಕಡಪರ ಸಮೀರ್, ಮುಹಮ್ಮದ್ ಮನ್ಸೂರ್ ಇಬ್ಬರಿಗೆ ಗಾಯ ; ರೌಡಿ ಶೀಟರ್ ಮುಹಮ್ಮದ್ ರಿಜ್ವಾನ್ ಮತ್ತು ತಂಡದಿಂದ ಕೃತ್ಯ – ಕಹಳೆನ್ಯೂಸ್
ಮಂಗಳೂರು: ಮಂಗಳೂರು ಜೈಲಿನಲ್ಲಿ ಎರಡು ಗುಂಪುಗಳ ಮಧ್ಯೆಮಾರಾಮಾರಿ ನಡೆದಿದ್ದು, ಇಬ್ಬರು ವಿಚಾರಣಾಧೀನ ಕೈದಿಗಳಿಗೆ ಗಾಯಗಳಾಗಿವೆ. ಹರಿತವಾದ ವಸ್ತುಗಳಿಂದ ಹಲ್ಲೆ ಮಾಡಿದ್ದರಿಂದ ಗಂಭೀರವಾಗಿ ಗಾಯಗೊಂಡ ಇಬ್ಬರು ಆರೋಪಿಗಳನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಳ್ಳಾಲ ನಿವಾಸಿ ಮುಹಮ್ಮದ್ ಸಮೀರ್ ಅಲಿಯಾಸ್ ಕಡಪರ ಸಮೀರ್(33) ಹಾಗೂ ಬೋಳಿಯಾರ್ ನಿವಾಸಿ ಮುಹಮ್ಮದ್ ಮನ್ಸೂರ್ (30) ಗಾಯಾಳುಗಳು. ಮುಫದ್ ರಿಫಾತ್ (28), ಮುಹಮ್ಮದ್ ರಿಜ್ವಾನ್ (34), ಇಬ್ರಾಹಿಂ ಕಲ್ಲೆಲ್ (30), ಉಮರ್ ಫಾರೂಕ್ ಇರ್ಫಾನ್, ಅಲ್ತಾಫ್, ನೌಫಲ್, ಜೈನುದ್ದೀನ್ ಹಲ್ಲೆ ಅರೋಪಿಗಳು.
ಉಳ್ಳಾಲ ಠಾಣಾ ವ್ಯಾಪ್ತಿಯ ಕೇಸ್‌ನಲ್ಲಿ ವಿಚಾರಣಾಧೀನ ಕೈದಿಗಳಾಗಿರುವ ಇಬ್ಬರ ಮೇಲೆ ಟೋಪಿ ನೌಫಲ್ ಮತ್ತು ಗ್ಯಾಂಗ್‌ನಿಂದ ದಾಳಿ ನಡೆಸಲಾಗಿದೆ. ಟೋಪಿ ನೌಫಲ್ ತಂಡದವರು ರೌಡಿ ಶೀಟರ್‌ಗಳಾಗಿದ್ದು, ಸಂಜೆ 6:30 ರಿಂದ 6:45 ರ ನಡುವೆ ವಿಚಾರಣಾಧೀನ ಕೈದಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಇಬ್ಬರಿಗೆ ತಲೆ, ಭುಜ ಮತ್ತು ದೇಹದ ಇತರ ಭಾಗಗಳಿಗೆ ಗಾಯಗಳಾಗಿವೆ.
ಅಡುಗೆ ಮನೆಯಲ್ಲಿದ್ದ ಕೆಲವು ಹರಿತವಾದ ವಸ್ತುಗಳಿಂದ ಹಲ್ಲೆ ಮಾಡಿದ್ದರಿಂದ ಇಬ್ಬರು ಗಾಯಗೊಂಡಿದ್ದಾರೆ. ಅವರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸದ್ಯ ಅಪಾಯದಿಂದ ಪಾರಾಗಿದ್ದಾರೆ. ಹಲ್ಲೆ ಆರೋಪಿಗಳು ಮತ್ತು ಹಲ್ಲೆಗೊಳಗಾದ ಇಬ್ಬರೂ ಅನೇಕ ಪ್ರಕರಣಗಳಲ್ಲಿ ಬಂಧನವಾದವರು. ಅಲ್ಲದೇ ರೌಡಿ ಶೀಟರ್‌ಗಳಾಗಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಇಡೀ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ಬಗ್ಗೆ ಕಮಿಷನರ್ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಕಾರಾಗೃಹದ ಅಧಿಕಾರಿಗಳ ದೂರಿನ ಮೇರೆಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.