ಮದುವೆಯಾಗಿ ವರ್ಷದೊಳಗೆ ಸಿಹಿ ಸುದ್ದಿ ಹಂಚಿಕೊಂಡ ಹರ್ಷಿಕಾ ಪೂಣಚ್ಚ- ಭುವನ್ – ಕಹಳೆ ನ್ಯೂಸ್
ಬೆಂಗಳೂರು: ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಹರ್ಷಿಕಾ ಪೂಣಚ್ಚ ತಾಯಿಯಾಗುತ್ತಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ಹರ್ಷಿಕಾ ಈ ಸಂಭ್ರಮವನ್ನು ವಿಭಿನ್ನವಾಗಿ ಫೋಟೋಶೂಟ್ ಮಾಡಿಸುವ ಮೂಲಕ ಹಂಚಿಕೊಂಡಿದ್ದಾರೆ. 2023, ಆಗಸ್ಟ್ 24ರಂದು ನಟ ಭುವನ್ ಪೊನ್ನಣ್ಣ ಜತೆ ಹರ್ಷಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಇದೀಗ ಮದುವೆಯಾಗಿ ವರ್ಷದೊಳಗೆ ಗುಡ್‌ನ್ಯೂಸ್ ನೀಡಿದ್ದಾರೆ.
ಹರ್ಷಿಕಾ ಮತ್ತು ಭುವನ್ ಪೊನ್ನಣ್ಣ ಅನೇಕ ವರ್ಷಗಳ ಸ್ನೇಹಿತರು. ಈ ಸ್ನೇಹ ಪ್ರೀತಿಗೆ ತಿರುಗಿ ಕಳೆದ ವರ್ಷ ಹಸೆಮಣೆ ಏರಿದ್ದರು. ವಿರಾಜಪೇಟೆಯ ಅಮ್ಮತ್ತಿಯಲ್ಲಿ ಹರ್ಷಿಕಾ ಮತ್ತು ಭುವನ್ ಕೊಡವ ಶೈಲಿಯಲ್ಲಿ ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇಬ್ಬರ ಮದುವೆಗೆ ಸ್ಯಾಂಡಲ್‌ವುಡ್, ವಿವಿಧ ಕ್ಷೇತ್ರಗಳ ಗಣ್ಯರು ಆಗಮಿಸಿ ಹಾರೈಸಿದ್ದರು.
ತಾವು ಪೋಷಕರಾಗುತ್ತಿರುವ ವಿಚಾರವನ್ನು ಭುವನ್ ಮತ್ತು ಹರ್ಷಿಕಾ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ. ಸದ್ಯ ಹರ್ಷಿಕಾ ಐದು ತಿಂಗಳ ಗರ್ಭಿಣಿ ಆಗಿದ್ದು, ಈ ಖುಷಿ ವಿಚಾರವನ್ನ ವಿಭಿನ್ನ ರೀತಿಯಲ್ಲಿ ಫೋಟೊ ಶೂಟ್ ಮಾಡಿಸುವ ಮೂಲಕ ಹಂಚಿಕೊಂಡಿದ್ದಾರೆ.
ಗಮನ ಸೆಳೆದ ಫೋಟೊ ಶೂಟ್
ಹರ್ಷಿಕಾ ಮತ್ತು ಭುವನ್ ತಮ್ಮ ಕೊಡವ ಶೈಲಿ ಹಾಗೂ ಸಂಪ್ರದಾಯದ ಕಾನ್ಸೆಪ್ಟ್ ಇಟ್ಟುಕೊಂಡು ಫೋಟೊ ಶೂಟ್ ಮಾಡಿಸುವ ಮೂಲಕ ಗಮನ ಸೆಳೆದಿದ್ದಾರೆ. ತಮ್ಮ ಚೊಚ್ಚಲ ಮಗುವಿನ ಆಗಮನದ ಸಿಹಿ ಸುದ್ದಿ ತಿಳಿಸಲು ಪುರಾತನ ಕೊಡವ ಸಾಂಪ್ರದಾಯ, ಉಡುಪು, ಕೊಡಗಿನ ‘ಐನ್ ಮನೆ’ (ದೊಡ್ಡಮನೆ), ಕೋವಿ, ಉಪಕರಣಗಳು, ಜೀವನಶೈಲಿ ಎಲ್ಲವನ್ನು ಬಳಸಿಕೊಂಡು, ಸಂಪ್ರದಾಯವನ್ನು ಬಿಂಬಿಸುವ ಶೈಲಿಯಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ.
ಅದರ ಜತೆಗೆ, ʼʼಇಂದಿನವರೆಗೂ ನಮ್ಮಿಬ್ಬರಿಗೆ ಸದಾ ಆಶೀರ್ವಾದಿಸುತ್ತಾ ಬಂದಿದ್ದೀರಿ. ಇನ್ನು ಮುಂದೆ ನಿಮ್ಮ ಪ್ರೀತಿ, ಆಶೀರ್ವಾದ ನಮ್ಮ ಈ ಇನ್ನೊಂದು ಪುಟ್ಟ ಜೀವದ ಮೇಲೂ ಇರಲಿ. ಅಕ್ಟೋಬರ್‌ಗೆ ಕಾತುರದಿಂದ ಕಾಯುತ್ತಿದ್ದೇವೆ’ ಎಂದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹರ್ಷಿಕಾ ಮತ್ತು ಭುವನ್ ಬರೆದುಕೊಂಡಿದ್ದಾರೆ.
2008ರಲ್ಲಿ ʼಪಿಯುಸಿʼ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಹರ್ಷಿಕಾ ಬಳಿಕ ಕೊಡವ, ಕೊಂಕಣಿ, ತೆಲುಗು, ಮಲಯಾಳಂ, ಬೋಜಪುರಿ, ತಮಿಳು ಮುಂತಾದ ಚಿತ್ರಗಳಲ್ಲಿ ನಟಿಸಿ ಬಹುಭಾಷಾ ತಾರೆ ಎನಿಸಿಕೊಂಡಿದ್ದಾರೆ. 2010ರಲ್ಲಿ ತೆರೆಕಂಡದ ಕನ್ನಡದ ʼತಮಸ್ಸುʼ ಚಿತ್ರಕ್ಕಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ ಮುಡಿಗೇರಿಸಿಕೊಂಡ ಅವರು ಸದ್ಯ ತಮಿಳು ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ.
ಇನ್ನು ಸ್ಯಾಂಡಲ್‌ವುಡ್ ನಟ ಭುವನ್ ಪೊನ್ನಣ್ಣ 2010ರಲ್ಲಿ ತೆರೆಕಂಡ, ಸುದೀಪ್ ಅಭಿನಯದ ʼಜಸ್ಟ್ ಮಾತ್ ಮಾತಲ್ಲಿʼ ಚಿತ್ರದ ಮೂಲಕ ಬಣ್ಣ ಲೋಕ ಪ್ರವೇಶಿಸಿದ್ದರು. ಗಣೇಶ್ ಜತೆಗೆ ಕೂಲ್ ಚಿತ್ರದಲ್ಲಿಯೂ ನಟಿಸಿರುವ ಅವರು 2019ರಲ್ಲಿ ತೆರೆಕಂಡ ರಾಂಧವ ಸಿನಿಮಾದ ಮೂಲಕ ಜನಪ್ರಿಯರಾಗಿದ್ದಾರೆ. ಕೊಡಗು ಮೂಲದ ಭುವನ್ ಮತ್ತು ಹರ್ಷಿಕಾ ಈ ಹಿಂದೆ ನೆರೆ ಪೀಡಿತರಿಗೆ ನೆರವಾಗುವ ಮೂಲಕ ಅನೇಕ ಮಂದಿಯ ಕಷ್ಟಗಳಿಗೆ ಸಹಾಯ ಹಸ್ತ ಚಾಚಿದ್ದರು.