Sunday, January 19, 2025
ದಕ್ಷಿಣ ಕನ್ನಡಪುತ್ತೂರುಯಕ್ಷಗಾನ / ಕಲೆಸಂತಾಪಸುದ್ದಿ

ಖ್ಯಾತ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ ರಾವ್ ನಿಧನ – ಕಹಳೆ ನ್ಯೂಸ್

ಪುತ್ತೂರು: ಖ್ಯಾತ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ ರಾವ್ ಹೃದಯಾಘಾತಕ್ಕೀಡಾಗಿ ಜುಲೈ 5ರಂದು ನಿಧನರಾಗಿದ್ದಾರೆ. 34 ನೆಕ್ಕಿಲಾಡಿ ಗ್ರಾಮದ ಶಾಂತಿನಗರ ಸಮೀಪದ ಬೇರಿಕೆ ನಿವಾಸಿ ಶ್ರೀಧರ ರಾವ್ ಅವರಿಗೆ ಬೆಳಿಗ್ಗೆ ತೀವ್ರ ಎದೆ ನೋವು ಕಾಣಿಸಿಕೊಂಡಿದ್ದು ಪುತ್ತೂರಿನ ಮಹಾವೀರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.

ಕುಂಬ್ಳೆ ಶ್ರೀಧರ ರಾವ್ ಪರಿಚಯ:
1948ರಲ್ಲಿ ಕಾಸರಗೋಡು ಜಿಲ್ಲೆಯ ಕುಂಬಳೆಯಲ್ಲಿ ಮಹಾಲಿಂಗ ಮತ್ತು ಕಾವೇರಿ ದಂಪತಿಯ ಪುತ್ರರಾಗಿ ಜನಿಸಿದ ಶ್ರೀಧರ ರಾವ್‌ರವರು 34 ನೆಕ್ಕಿಲಾಡಿ ಗ್ರಾಮದ ಶಾಂತಿನಗರ ಸಮೀಪದ ಬೇರಿಕೆಯಲ್ಲಿ ವಾಸವಾಗಿದ್ದರು. ಕೂಡ್ಲು, ಮೂಲ್ಕಿ, ಇರಾ, ಕರ್ನಾಟಕ, ಧರ್ಮಸ್ಥಳ ಮೇಳಗಳಲ್ಲಿ ಆರು ದಶಕಕ್ಕೂ ಮಿಕ್ಕಿ ಕಲಾ ಸೇವೆ ಮಾಡಿದ್ದ ಇವರು ಧರ್ಮಸ್ಥಳ ಮೇಳವೊಂದರಲ್ಲಿಯೇ ನಿರಂತರ 50 ವರ್ಷಗಳ ಸೇವೆ ಮಾಡಿದ್ದಾರೆ. ಸ್ತ್ರೀ ವೇಷಧಾರಿಯಾಗಿ ಪ್ರಸಿದ್ಧರಾಗಿರುವ ಶ್ರೀಧರ ರಾವ್‌ರವರು ಪುರುಷ ವೇಷದಲ್ಲಿಯೂ ಸೈ ಅನ್ನಿಸಿಕೊಂಡಿದ್ದರು. ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಅನ್ನು ದೇವಿ, ಈಶ್ವರ, ಸೀತಾ ಪರಿತ್ಯಾಗದ ಸೀತೆ, ಲಕ್ಷ್ಮಣ, ಸುದರ್ಶನ ವಿಜಯದ ಲಕ್ಷ್ಮಿ, ವಿಷ್ಣು, ದಮಯಂತಿ ಸ್ವಯಂವರದ ದಮಯಂತಿ, ಭೀಷ್ಮ ವಿಜಯದ ಅಂಬೆ, ದೇವಿ ಮಹಾತ್ಮೆಯ ದೇವಿ ಮೊದಲಾದ ಪಾತ್ರಗಳ ಮೂಲಕ ಪ್ರಸಿದ್ಧಿ ಪಡೆದಿದ್ದ ರಾವ್‌ರವರ ಅಮ್ಮು ಬಳ್ಳಾಲ್ತಿ, ದಾಕ್ಷಾಯಿಣಿ, ಲಕ್ಷ್ಮಿ ಸುಭದ್ರೆಯ ಪಾತ್ರದ ಮೂಲಕವೂ ಅಪಾರ ಅಭಿಮಾನಿಗಳನ್ನು ಪಡೆದಿದ್ದರು. ಕೊರಗ ಶೆಟ್ರ ಇರಾ ಮೇಳದ ಮೂಲಕ ಯಕ್ಷ ಪಯಣ ಆರಂಭಿಸಿದ್ದ ಶ್ರೀಧರ ರಾವ್‌ರವರು ಯಕ್ಷಗಾನ ದಿಗ್ಗಜ ಶೇಣಿಯವರ ರಾವಣ, ವಾಲಿ ಪಾತ್ರಗಳಿಗೆ ಮಂಡೋದರಿಯಾಗಿ, ತಾರೆಯಾಗಿ ಸಾಥ್ ನೀಡಿದ್ದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ಸಂದರ್ಭದಲ್ಲಿ ಸನ್ಮಾನ, ಎಡನೀರು ಮಠದ ಸನ್ಮಾನ ಮಾತ್ರವಲ್ಲದೆ ಇನ್ನೂ ಹಲವೆಡೆ ಇವರನ್ನು ಸನ್ಮಾನಿಸಿ ಗೌರವಿಸಲಾಗಿತ್ತು. ಇತ್ತೀಚೆಗಷ್ಟೇ ಬೆಂಗಳೂರಿನ ಆತ್ಮಾಲಯ ಅಕಾಡೆಮಿ ಆಫ್ ಆರ್ಟ್ ಅಂಡ್ ಕಲ್ಚರ್ ಟ್ರಸ್ಟ್ ಜಸ್ಟೀಸ್ ಕೆ.ಜಗನ್ನಾಥ ಶೆಟ್ಟಿ ಸ್ಮಾರಕ ಪ್ರಯುಕ್ತ ಕೊಡ ಮಾಡುವ ಪ್ರಶಸ್ತಿಗೆ ಆಯ್ಕೆಯಾಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕುಂಬ್ಳೆ ಶ್ರೀಧರ ರಾವ್ ಅವರು ವಿವಿಧ ಯಕ್ಷಗಾನ ಮೇಳಗಳಲ್ಲಿ ವ್ಯವಸಾಯ ಮಾಡಿ, ಶ್ರೀ ಧರ್ಮಸ್ಥಳ ಮೇಳದಿಂದ ನಿವೃತ್ತಿಯಾದವರು. ದಾಕ್ಷಾಯಿಣಿ, ಸುಭದ್ರೆ, ದ್ರೌಪದಿ, ಅಮ್ಮುದೇವಿ ಮೊದಲಾದ ಸ್ತ್ರೀ ಪಾತ್ರಗಳಿಂದ ಖ್ಯಾತರಾಗಿದ್ದವರು. ಮೇಳ ತಿರುಗಾಟದ ಒಂದು ಕಾಲಘಟ್ಟದಲ್ಲಿ ಸ್ತ್ರೀ ಪಾತ್ರದಿಂದ ಪುರುಷ ಪಾತ್ರಕ್ಕೆ ಬದಲಾದವರು. ಕೀರ್ತಿಶೇಷರಾದ ಡಾ.ಶೇಣಿ ಗೋಪಾಲಕೃಷ್ಣ ಭಟ್, ರಾಮದಾಸ ಸಾಮಗ, ಶಂಕರ ನಾರಾಯಣ ಸಾಮಗ ಸಹಿತ ಹಲವು ಹಿರಿಯರ ಒಡನಾಟದಲ್ಲಿದ್ದವರು.

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀ ಧರ್ಮಸ್ಥಳ ಮೇಳದ ಪ್ರದರ್ಶನಗಳಲ್ಲಿ ಸ್ತ್ರೀ ಪಾತ್ರಕ್ಕೆ ಪ್ರತ್ಯೇಕವಾದ ಸ್ವಂತಿಕೆಯ ಛಾಪನ್ನು ಒತ್ತಿದ್ದ ಇವರು ತಾಳಮದ್ದಳೆ ಅರ್ಥದಾರಿಯೂ ಆಗಿದ್ದಾರೆ. ಇತ್ತೀಚೆಗಷ್ಟೇ ದಶಮಾನೋತ್ಸವದ ಸಂಭ್ರಮದಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ. ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಕೊಡ ಮಾಡುವ ದಶಮಾನೋತ್ಸವ ಪ್ರಶಸ್ತಿಗೆ ಕುಂಬ್ಳೆ ಶ್ರೀಧರ ರಾವ್ ಆಯ್ಕೆಯಾಗಿದ್ದರು.

ಮೃತರು ಶಾಂತಿನಗರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿರುವ ಪತ್ನಿ ಸುಲೋಚನಾ, ಪುತ್ರರಾದ ಬೆಂಗಳೂರಿನಲ್ಲಿ ಪತ್ರಕರ್ತರಾಗಿರುವ ಗಣೇಶ್ ಪ್ರಸಾದ್, ಕೃಷ್ಣಪ್ರಸಾದ್ ಮತ್ತು ದೇವಿಪ್ರಸಾದ್, ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.