ಉಡುಪಿ: ಜು.10ರಿಂದ 18ರವರೆಗೆ ವಿಕಲಚೇತನರಿಗೆ ಮತ್ತು ಹಿರಿಯ ನಾಗರಿಕರಿಗೆ ಸಾಧನ ಸಲಕರಣೆ ವಿತರಣಾ ತಪಾಸಣಾ ಶಿಬಿರ– ಕಹಳೆ ನ್ಯೂಸ್
ಉಡುಪಿ: ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯದ ಎ.ಡಿ.ಐ.ಪಿ ಮತ್ತು ಆರ್.ವಿ.ವೈ ಯೋಜನೆಯಡಿಯಲ್ಲಿ ವಿಕಲಚೇತನರಿಗೆ ಹಾಗೂ ಹಿರಿಯ ನಾಗರಿಕರಿಗೆ ಸಾಧನ ಸಲಕರಣೆಗಳನ್ನು ವಿತರಿಸುವ ಸಲುವಾಗಿ ಇದೇ ಜುಲೈ 10ರಿಂದ 18ರ ವರೆಗೆ ಉಡುಪಿ ಜಿಲ್ಲೆಯಾದ್ಯಂತ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.
ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ರೆಡ್ ಕ್ರಾಸ್ ಸಂಸ್ಥೆಯ ಉಡುಪಿ ಜಿಲ್ಲಾ ಘಟಕದ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ಅವರು, ಜುಲೈ 10 ರಂದು ಉಡುಪಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಜುಲೈ 11 ರಂದು ಬೈಂದೂರಿನ ಅಂಬೇಡ್ಕರ್ ಭವನ, ಜು. 12 ರಂದು ಕಾಪುವಿನ ಜೆ.ಸಿ ಭವನ, ಜು. 14 ರಂದು ಬ್ರಹ್ಮಾವರ ಪೊಲೀಸ್ ಠಾಣೆ ಬಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಜು. 15 ರಂದು ಕುಂದಾಪುರದ ಜೂನಿಯರ್ ಕಾಲೇಜು ಆವರಣ, ಜು. 16 ರಂದು ಹೆಬ್ರಿಯ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಜು. 18 ರಂದು ಕಾರ್ಕಳ ತಾಲೂಕು ಆಸ್ಪತ್ರೆಯಲ್ಲಿ ಬೆಳಿಗ್ಗೆ 9.30 ರಿಂದ ಸಂಜೆ 4.30ರ ವರೆಗೆ ವಿತರಣಾ ಕಾರ್ಯಕ್ರಮ ನಡೆಯಲಿದೆ ಎಂದರು.
ಸಾಧನ ಸಲಕರಣೆಯ ಲಾಭವನ್ನು ಪಡೆಯಲು ವಿಕಲಚೇತನರ ವಿಶಿಷ್ಟ ಗುರುತಿನ ಚೀಟಿ, ಆಧಾರ್ ಕಾರ್ಡ್, ಬಿ.ಪಿ.ಎಲ್. ಕಾರ್ಡ್ ಅಥವಾ ವಾರ್ಷಿಕ ಆದಾಯ 2,70,000 ರೂ. ಮೀರದಿರುವ ಆದಾಯ ಪ್ರಮಾಣ ಪತ್ರ, ಪಾಸ್ ಪೋರ್ಟ್ ಸೈಜ್ ಪೋಟೋವನ್ನು ತರಬೇಕು. ಹಿರಿಯ ನಾಗರಿಕರು ಹಿರಿಯ ನಾಗರಿಕರ ಗುರುತಿನ ಚೀಟಿ ಅಥವಾ ವಯೋಮಿತಿ ಸೂಚಿಸುವ ದಾಖಲಾತಿ, ಆಧಾರ್ ಕಾರ್ಡ್ , ಬಿ.ಪಿ.ಎಲ್. ಕಾರ್ಡ್ ಅಥವಾ ವಾರ್ಷಿಕ ಆದಾಯ ರೂ 2,70,000 ಮೀರದಿರುವ ಆದಾಯ ಪ್ರಮಾಣ ಪತ್ರ, ಪಾಸ್ ಪೋರ್ಟ್ ಸೈಜ್ ಪೋಟೋವನ್ನು ತರಬೇಕು. ಕಳೆದ ಮೂರು ವರ್ಷಗಳಲ್ಲಿ ಈ ಯೋಜನೆಯ ಫಲಾನುಭವ ಪಡೆದವರು ಸಾಧನ ಸಲಕರಣೆ ಪಡೆಯಲು ಅರ್ಹರಲ್ಲ ಎಂದು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ, ಉಡುಪಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕ ಹಾಗೂ ಕೃತಕ ಅಂಗಾಂಗ ತಯಾರಿಕ ಕಾರ್ಪೊರೇಷನ್ ಆಫ್ ಇಂಡಿಯಾ (ಅಲಿಂಕೋ) ಇವರ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಶ್ಯಾಮಲ , ಡಿಡಿಆರ್‌ಸಿ ಸದಸ್ಯ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರು, ಅಂಗವಿಕಲ ಇಲಾಖೆಯ ಯೋಜನಾಧಿಕಾರಿ ಶಿವಾಜಿ ಉಪಸ್ಥಿತರಿದ್ದರು.