ಬಂಟ್ವಾಳ : 11 ದಿನಗಳಲ್ಲಿ ಆಟೋ ರಿಕ್ಷಾದಲ್ಲೇ 4 ರಾಜ್ಯ ಸುತ್ತಾಡಿದ ಬಂಟ್ವಾಳದ ಯುವಕರು-ಕಹಳೆ ನ್ಯೂಸ್
ಬಂಟ್ವಾಳ: ನಗರದ ಯುವಕರಿಬ್ಬರು ಆಟೋ ರಿಕ್ಷಾದಲ್ಲೇ 11 ದಿನಗಳಲ್ಲಿ 4,200 ಕಿ.ಮೀ ಸಂಚರಿಸಿ ನಾಲ್ಕು ರಾಜ್ಯಗಳನ್ನು ಸುತ್ತಾಡಿ ಐದು ಜ್ಯೋತಿರ್ಲಿಂಗಗಳ ದರ್ಶನ ಮಾಡಿ ಬಂದಿದ್ದಾರೆ.
ಮೆಲ್ಕಾರಿನ ಕ್ಯಾಟರಿಂಗ್ ಉದ್ಯಮಿ ವಿಜೇತ್ ನಾಯಕ್ ಹಾಗೂ ಕಲ್ಲಡ್ಕದ ಸಾಫ್ಟ್ವೇರ್ ಇಂಜಿನಿಯರ್ ವಿಶ್ವಾಸ್ ಪ್ರಭು ಅವರು ಜೂ.26 ರಂದು ಮುಂಜಾನೆ 4 ಗಂಟೆಗೆ ಪ್ರವಾಸ ಆರಂಭಿಸಿ ಜು.9 ರಂದು ಊರಿಗೆ ಮರಳಿದ್ದಾರೆ.
ಊರಿನಿಂದ ಹೊರಟ ಯುವಕರು ಕರ್ನಾಟಕ, ಗೋವಾವನ್ನು ದಾಡಿ ಮಹಾರಾಷ್ಟ್ರಕ್ಕೆ ತೆರಳಿ ಅಲ್ಲಿ ಗೃಷ್ಣೇಶ್ವರ, ಭೀಮಾಶಂಕರ, ತ್ರ್ಯಂಬಕೇಶ್ವರ ಜ್ಯೋತಿರ್ಲಿಂಗ ಕ್ಷೇತ್ರಗಳ ದರ್ಶನ ಮಾಡಿ ಮುಂದೆ ಗುಜರಾತ್ನ ನಾಗೇಶ್ವರ, ಸೋಮನಾಥ ಜ್ಯೋತಿರ್ಲಿಂಗ ಕ್ಷೇತ್ರಗಳಿಗೆ ತೆರಳಿದ್ದಾರೆ. ಜತೆಗೆ ಎಲ್ಲೋರ, ದ್ವಾರಕಾ, ಏಕತಾ ವಿಗ್ರಹ ಮುಂತಾದ ಸ್ಥಳಗಳಿಗೆ ಭೇಟಿ ನೀಡಿದ್ದಾರೆ.
ಇದಕ್ಕಾಗಿ ತಲಾ 14 ಸಾವಿರ ರೂ. ಖರ್ಚಾಗಿದೆ. 1 ದಿನಗಳ ಪ್ರವಾಸದಲ್ಲಿ ಊಟ-ಉಪಾಹಾರವನ್ನು ಇವರೇ ತಯಾರಿಸಿದ್ದಾರೆ. ಇದಕ್ಕಾಗಿ ದಿನಸಿ ಸಾಮಾನು, ಗ್ಯಾಸ್, ಪಾತ್ರೆಗಳನ್ನು ಜತೆಯಲ್ಲಿ ಕೊಂಡೊಯ್ದಿದ್ದರು.
ಇವರಿಬ್ಬರೂ ಬಾಲ್ಯ ಸ್ನೇಹಿತರಾಗಿದ್ದು, ಈ ಹಿಂದೆ ಆಟೋ ರಿಕ್ಷಾದ ಮೂಲಕ ಅನಂತಪುರ, ಚಾರ್ಮಾಡಿ ಮೊದಲಾದ ಭಾಗಗಳಿಗೆ ಸಾಕಷ್ಟು ಬಾರಿ ತೆರಳಿದ್ದರು. ಆದರೆ ಇಷ್ಟು ದೂರದ ಪ್ರವಾಸವನ್ನು ಇದೇ ಮೊದಲ ಬಾರಿಗೆ ಕೈಗೊಂಡಿದ್ದರು.