Recent Posts

Sunday, January 19, 2025
ಸುದ್ದಿ

ವಿವೇಕಾನಂದ ವಿದ್ಯಾವರ್ಧಕ ಸಂಘ ಹಾಗೂ ಎಬಿವಿಪಿಯಿಂದ ಮಹಿಳಾ ಸುರಕ್ಷಾ, ಆತ್ಮರಕ್ಷಣಾ ತರಬೇತಿ – ಕಹಳೆ ನ್ಯೂಸ್

ಪುತ್ತೂರು: ಸೌಂದರ್ಯವೆಂಬುದು ಮಹಿಳೆಯ ಬಾಹ್ಯ ನೋಟಕ್ಕೆ ಸಂಬಂಧಿಸಿದ್ದಲ್ಲ. ಮಹಿಳೆಯು ಸಾಧನೆಯ ಶಿಖರವೇರಿದಾಗ ದೇಶವನ್ನು ಪ್ರತಿನಿಧಿಸುವುದರ ಮೂಲಕ ಬರುವ ಆನಂದ ಬಾಷ್ಪವೇ ನಿಜವಾದ ಸೌಂದರ್ಯ. ಮಹಿಳೆ ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಲ್ಲಳು. ತೊಟ್ಟಿಲನ್ನು ತೂಗುವ ಕೈ ದೇಶವನ್ನು ಆಳಬಲ್ಲದು. ಚರಿತ್ರೆಯ ಪುಟವನ್ನು ನೋಡಿದಾಗ ರಾಣಿಅಬ್ಬಕ್ಕ, ಕೆಳದಿ ಚೆನ್ನಮ್ಮ, ಹೀಗೆ ಹತ್ತು ಹಲವು ವೀರ ಮಹಿಳೆಯರು ತಮ್ಮ ಪ್ರಾಣವನ್ನು ದೇಶಕ್ಕಾಗಿ ಅರ್ಪಿಸಿದ್ದಾರೆ. ಅಂತಹ ಮಹಿಳೆಯರು ಮರಣಹೊಂದಿದ್ದರೂ, ಚರಿತ್ರೆಯ ಪುಟಗಳಲ್ಲಿ ಅಚ್ಚಳಿಯದೇ ಉಳಿದಿದ್ದಾರೆ ಎಂದು ಕರ್ನಾಟಕ ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ರಮೇಶ್ ಹೇಳಿದರು.

ಅವರು ಇಲ್ಲಿನ ನೆಹರು ನಗರದ ವಿವೇಕಾನಂದ ವಿದ್ಯಾವರ್ಧಕ ಸಂಘ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಪುತ್ತೂರು ಘಟಕದ ಆಶ್ರಯದಲ್ಲಿ ಗುರುವಾರ ಆಯೋಜಿಸಲಾದ ಮಹಿಳಾ ಸುರಕ್ಷಾ- ಆತ್ಮರಕ್ಷಣಾ ತರಬೇತಿ ‘ಮಿಷನ್ ಸಾಹಸಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಾಹಸ ಶಕ್ತಿ ಇರುವುದು ಹಿಂಸಿಸುವುದಕ್ಕಲ್ಲ. ಅದು ಸಮಾಜದಲ್ಲಿರುವ ಕೆಟ್ಟ ಮನಸ್ಸುಗಳ ವಿರುದ್ಧ ಸಮರ ಸಾರವುದಕ್ಕಾಗಿ. ಈಗ ಸಮಾಜದಲ್ಲಿ ವ್ಯವಸ್ಥೆಯು ಬದಲಾಗಿದೆ. ಮಹಿಳೆಗೆ ಇಚ್ಫಾಶಕ್ತಿ ಮತ್ತು ಧೈರ್ಯವಿದ್ದರೆ ಏನ್ನನ್ನೂ ಬೇಕಾದರೂ ಗೆಲ್ಲಬಲ್ಲಳು. ಸಮಾಜದಲ್ಲಿ ಹೆಣ್ಣೆಂದರೆ ದುರ್ಬಲಳು ಕಲ್ಪನೆಯುಇದೆ. ಆದರೆ ಸೃಷ್ಟಿಯು ವಿಸ್ತಾರವಾಗುವುದು ಹೆಣ್ಣಿನಿಂದಲೇ. ಇದು ಹೆಣ್ಣೆನ ಪ್ರಾಬಲ್ಯತೆ ಎಂದರೆ ತಪ್ಪಾಗಲಾರದು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನನ್ನಿಂದ ಏನೂ ಸಾಧ್ಯವಿಲ್ಲ ಎಂದು ಕೈ ಕಟ್ಟಿ ಕುಳಿತರೆ ಸಮಸ್ಯೆಗಳು ಮತ್ತಷ್ಟು ಉಲ್ಭಣಗೊಳ್ಳುತ್ತವೆ. ಏನೇ ಎದುರಾದರೂ ಮುನ್ನುಗ್ಗುವೆ ಎನ್ನುವ ಪ್ರವೃತ್ತಿ ಇರಬೇಕು. ಮಹಿಳೆಯು ಶಾರೀರಿಕವಾಗಿ ದುರ್ಬಲವಾಗಿದ್ದರೂ ಏಕಾಗ್ರತೆ, ಸಾಧನೆ ಮಾಡುವ ಹುಮ್ಮಸ್ಸು, ಸತತ ಪರಿಶ್ರಮವಿದ್ದರೆ ಮಾನಸಿಕವಾಗಿ ಸದೃಢರಾಗಲು ಸಾಧ್ಯ ಎಂದು ಹಿತ ನುಡಿದರು.

ಮಂಗಳೂರು ಅಖಿತ ಭಾರತ ವಿದ್ಯಾರ್ಥಿ ಪರಿಷತ್‌ನ ವಿಭಾಗ ಸಹ ಪ್ರಮುಖ್ ಡಾ.ರೋಹಿಣಾಕ್ಷ ಶೀರ್ಲಾಲು ಪ್ರಸ್ತಾವನೆಗೈದು ಭಾರತ ದೇಶವು ಮಹಿಳೆಗೆ ಹಿಂದಿನಿಂದಲೂ ಸ್ಥಾನಮಾನ, ಗೌರವವನ್ನು ಕೊಟ್ಟಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯವು ಹೆಚ್ಚಾಗುತ್ತಿದೆ.ಈ ದೃಷ್ಟಿಯಿಂದಾಗಿ ಮಹಿಳೆಗೆ ತನ್ನ ಆತ್ಮರಕ್ಷಣೆಗಾಗಿ ಕೆಲವು ಸಾಹಸದ ತಂತ್ರಗಳನ್ನು ಹೇಳಿಕೊಡುವುದು ಮುಖ್ಯ ಎಂದರು.

ಹೆಣ್ಣಿನ ಸ್ವಭಾವ ಸಹಜವಾದ ಗುಣ ಅವಳನ್ನು ಅಬಲೆಯೆಂದು ಬಿಂಬಿಸುತ್ತಿದೆ. ಆದರೆ ಹೆಣ್ಣು ಅಬಲೆ ಅಲ್ಲ. ಬದಲಾಗಿ ಸಬಲೆಯಾಗಿ ಇತ್ತೀಚಿನ ದಿನಗಳಲ್ಲಿ ರೂಪುಗೊಳ್ಳುತ್ತಿದ್ದಾಳೆ. ಹೆಣ್ಣು ಮಕ್ಕಳು ಸಶಕ್ತರಾದರೆ ಮಾತ್ರ ದೇಶವು ಸಶಕ್ತವಾಗಲು ಸಾಧ್ಯ. ಅದಕ್ಕೆ ಪೂರಕವಾಗಿ ತನ್ನನ್ನು ತಾನು ರಕ್ಷಿಸಿ ಕೊಳ್ಳಲು ಮಾನಸಿಕ ಧೈರ್ಯವನ್ನು ತುಂಬಬೇಕು ಎಂದು ನುಡಿದರು.

ವಿವೇಕಾನಂದ ವಿಧ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ. ಕೃಷ್ಣ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸ್ತ್ರೀಯರಲ್ಲಿ ಸಾಹಸ ಗುಣ ಹುಟ್ಟಿನಿಂದ ಇರುತ್ತದೆ. ಮದುವೆಯಾದ ನಂತರ ಇನ್ನೊಂದು ಮನೆಗೆ ತೆರಳಿ ಜೀವನ ಕಟ್ಟಿಕೊಳ್ಳುವಾಗ ತನ್ನ ನಿಜವಾದ ಮಾನಸಿಕ ಸಾಹಸವನ್ನು ತೋರಿಸುತ್ತಾಳೆ. ಹೀಗೆ ಪ್ರತಿಯೊಂದು ಹಂತದಲ್ಲೂ ಆಕೆ ಸಾಹಸ ಪ್ರವೃತ್ತಳಾಗುತ್ತಾಳೆ ಎಂದರು. ಇದೇ ಸಂದರ್ಭದಲ್ಲಿ ಮಹಿಳಾ ಸುರಕ್ಷಾ- ಆತ್ಮರಕ್ಷಣಾ ತರಬೇತಿಯ ಪ್ರದರ್ಶನವನ್ನು ಕರಾಟೆ ತರಬೇತುದಾರರಾದ ಸಿದ್ದೆÃಶ್ ಮತ್ತು ಮದನ್ ನೆರವೇರಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ನರೇಂದ್ರ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷೆ ರೂಪರೇಖಾ ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಜಿಲ್ಲಾ ವಿದ್ಯಾರ್ಥಿನಿ ಪ್ರಮುಖ್ ಮನೀಷಾ ಶೆಟ್ಟಿ ಉಪಸ್ಥಿತರಿದ್ದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಜ್ಯ ಸಹ ಕರ‍್ಯದರ್ಶಿ ವಿದ್ಯಾ ರಾವ್ ಸ್ವಾಗತಿಸಿ, ವಿದ್ಯಾರ್ಥಿಗಳಾದ ಮಧುಶ್ರೀ ವೆಂಕಟೇಶ್ ವಂದಿಸಿ, ತೇಜಶ್ರೀ ವೆಂಕಟೇಶ್ ನಿರೂಪಿಸಿದರು.