Friday, September 20, 2024
ಸುದ್ದಿ

ಇಂದಿನಿಂದ ಹಾಸನಾಂಬೆ ಸಾರ್ವಜನಿಕ ದರ್ಶನ – ಕಹಳೆ ನ್ಯೂಸ್

ಹಾಸನ: ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ನೀಡುವ ಹಾಸನದ ಹಾಸನಾಂಬೆ ದೇವಿಯನ್ನು ಇಂದಿನಿಂದ ಸಾರ್ವಜನಿಕರು ಕಣ್ತುಂಬಿಕೊಳ್ಳಬಹುದಾಗಿದೆ. ಸಾರ್ವಜನಿಕ ದರ್ಶನ ಆರಂಭದ ಹಿನ್ನೆಲೆಯಲ್ಲಿ ತಡರಾತ್ರಿಯಿಂದಲೇ ದೇವಿಯ ದರ್ಶನ ಪಡೆಯಲು ಭಕ್ತರು ಸಾಲುಗಟ್ಟಿ ನಿಂತಿದ್ದರು.

ಧಾರ್ಮಿಕ ವಿಧಿ ವಿಧಾನಗಳ ಅನ್ವಯ ಆಶ್ವೀಜ ಮಾಸದ ಮೊದಲ ಗುರುವಾರ ಮಧ್ಯಾಹ್ನ 12.30 ರ ಬಳಿಕ ದೇವಾಲಯದ ಗರ್ಭಗುಡಿ ಬಾಗಿಲು ತೆರೆಯಲಾಗಿತ್ತು. ಇಂದು ಭಕ್ತರ ದರ್ಶನಕ್ಕೆ ಸಿದ್ಧತೆ ನಡೆಸಲಾಗಿತ್ತು. ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ಹಾಸನಾಂಬೆಯ ದರ್ಶನ ಆರಂಭವಾಗಿದ್ದು, ಭಕ್ತರು ಸಾಲುಗಟ್ಟಿ ದೇವಿಯ ದರ್ಶನ ಪಡೆಯುತ್ತಿದ್ದಾರೆ. ಇತ್ತ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಸಿಎಂ ಭೇಟಿ:
ದೇವಿಯ ದರ್ಶನ ಪಡೆಯಲು ಸಿಎಂ ಕುಮಾರಸ್ವಾಮಿ ಅವರು ಹಾಗೂ ಮಾಜಿ ಪ್ರಧಾನಿ ದೇವೇಗೌಡ ಅವರ ಕುಟುಂಬ ಸಮೇತರಾಗಿ ಇಂದು ಮಧ್ಯಾಹ್ನ ತೆರಳಲಿದ್ದಾರೆ. ದೇವಿಯ ದರ್ಶನ ಪಡೆದ ಬಳಿಕ ಮಧ್ಯಾಹ್ನ 2 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಿಎಂ ಕುಮಾರಸ್ವಾಮಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದು, ಜಿಲ್ಲೆಯಲ್ಲಿ ಉದ್ದೇಶಿತ ಹಲವು ಅಭಿವೃದ್ಧಿ ಕಾಮಗಾರಿಗಳ ಮಾಹಿತಿ ಪಡೆಯಲಿದ್ದಾರೆ.

ಶಕ್ತಿ ದೇವತೆ ದರ್ಶನ ಪಡೆಯಲು ವೃದ್ಧರು, ಅಂಗವಿಕಲರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದ್ದಾರೆ. ಈ ಬಾರಿ ಹೆಚ್ಚು ಕಡೆ ಮೊಬೈಲ್ ಶೌಚಾಲಯಕ್ಕೆ ಆದ್ಯತೆ ನೀಡಲಾಗಿದೆ. ಕಳೆದ ಮಹಾ ಮಸ್ತಕಾಭಿಷೇಕದಲ್ಲಿ ಜಾರಿ ಮಾಡಿದಂತೆ ಹಾಸನಾಂಬೆ ದರ್ಶನ ವೇಳೆ 10 ದಿನಗಳ ಕಾಲ ಹೆಲಿ ಟೂರಿಸಂ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿದ್ದಾರೆ.