ಜು.25ರಿಂದ ಉಡುಪಿಯಲ್ಲಿ ಭಂಡಾರಕೇರಿ ಮಠಾಧೀಶರಾದ ವಿದ್ವೇಶತೀರ್ಥ ಶ್ರೀಪಾದರ 45ನೇ ಚಾರ್ತುಮಾಸ್ಯ ವೃತ ಆರ0ಭ -ಕಹಳೆ ನ್ಯೂಸ್
ಉಡುಪಿ : ಉಡುಪಿಯ ಭಂಡಾರಕೇರಿ ಮಠಾಧೀಶರಾದ ವಿದ್ವೇಶತೀರ್ಥ ಶ್ರೀಪಾದರು ಜುಲೈ 25ರಿಂದ ಸೆಪ್ಟೆಂಬರ್ 18ರವರೆಗೆ ಉಡುಪಿ ರಥಬೀದಿಯಲ್ಲಿರುವ ಭಂಡಾರಕೇರಿ ಮಠದಲ್ಲಿ 45ನೇ ಚಾರ್ತುಮಾಸ್ಯ ವೃತವನ್ನು ಕೈಗೊಳ್ಳಲಿದ್ದಾರೆ ಎಂದು ಪರ್ಯಾಯ ಪುತ್ತಿಗೆ ಮಠದ ದಿವಾನರಾದ ನಾಗರಾಜ್ ಆಚಾರ್ಯ ತಿಳಿಸಿದರು.
ಉಡುಪಿ ಕೃಷ್ಣಮಠದ ಕನಕ ಮಂಟಪದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ಈ ಅವಧಿಯಲ್ಲಿ ಶ್ರೀಗಳಿಂದ ಮಠದಲ್ಲಿ ದಿನನಿತ್ಯ ಪಟ್ಟದ ದೇವರ ಪೂಜೆ, ಧಾರ್ಮಿಕ ವಾಠ-ಪ್ರವಚನ, ಧಾರ್ಮಿಕ ಉಪನ್ಯಾಸಗಳು ನಡೆಯಲಿವೆ. ಹಾಗೆ, ಉಡುಪಿ ಸುತ್ತಮುತ್ತಲಿನ ಭಕ್ತರ ಮನೆಗಳಲ್ಲಿ ಪಾದಪೂಜೆ, ಗುರುವಂದನೆ, ಏಕಲ್ಲೋಕಿ ಶ್ರೀ ಮದ್ಭಾಗವತ ಪ್ರವಚನ ಮುಂತಾದ ಕಾರ್ಯಕ್ರಮಗಳು ನೆರವೇರಲಿದೆ. ಪ್ರತಿ ಶನಿವಾರ, ಭಾನುವಾರ ಮಠದ ಸಭಾಭವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೂ ಜರುಗಲಿವೆ ಎಂದರು.
ಪುತ್ತಿಗೆ ಮಠದ ಅಂತರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಮಾತನಾಡಿ, ಚಾರ್ತುಮಾನ್ಯ ವೃತ ಸಂಕಲ್ಪದ ಪೂರ್ವಭಾವಿಯಾಗಿ ವಿದ್ವೇಶತೀರ್ಥ ಶ್ರೀಪಾದರನ್ನು ಜುಲೈ 24ರಂದು ಸಂಜೆ 4.30ಕ್ಕೆ ಉಡುಪಿ ಸಂಸ್ಕೃತ ಕಾಲೇಜಿನಿಂದ ಪರ್ಯಾಯ ಪುತ್ತಿಗೆ ಕೃಷ್ಣಮಠದ ಸಕಲ ಬಿರುದು ದಾವಳಿಗಳೊಂದಿಗೆ ಮಠದ ದಿವಾನರಾದ ನಾಗರಾಜ ಆಚಾರ್ಯರ ನೇತೃತ್ವದಲ್ಲಿ ಮೆರವಣಿಗೆಯಲ್ಲಿ ಕರೆದುಕೊಂಡು ಬರಲಾಗುವುದು. ಶ್ರೀಕೃಷ್ಣ ಮುಖ್ಯ ದೇವರ ದರ್ಶನ ಮಾಡಿಸಿ, ಬಳಿಕ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಕಿರಿಯ ಪೀಠಾಧಿಪತಿಗಳಾದ ಸುಶ್ರೀಂದ್ರ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಪರ್ಯಾಯ ಮಠದ ವತಿಯಿಂದ ಉಪಚರಿಸಿ, ಸತ್ಕರಿಸಿ, ಗೌರವಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಚಾರ್ತುಮಾಸ್ಯ ಸಮಿತಿ ಸಂಚಾಲಕ ಚಂದ್ರಶೇಖರ ಆಚಾರ್ಯ, ಭಂಡಾರಕೇರಿ ಮಠದ ವ್ಯವಸ್ಥಾಪಕ ರಾಜೇಶ್, ವಿಷ್ಣು ಪಾಡಿಗಾರ್ ಉಪಸ್ಥಿತರಿದ್ದರು.