ದೆಹಲಿ: ಇದೇ ತಿಂಗಳು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡದ ಊಟದಲ್ಲಿ ಗೋಮಾಂಸದ ಖಾದ್ಯಗಳು ಬೇಡ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಆಸ್ಟ್ರೇಲಿಯಾಕ್ಕೆ ಮನವಿ ಸಲ್ಲಿಸಿದೆ.
ಆಸ್ಟ್ರೇಲಿಯಾದಲ್ಲಿ ಭಾರತ ತಂಡ ಟೆಸ್ಟ್, ಏಕದಿನ ಮತ್ತು ಟ್ವೆಂಟಿ-20 ಪಂದ್ಯಗಳನ್ನು ಆಡಲಿದೆ. ಆಟಗಾರರು, ಅಧಿಕಾರಿಗಳು ಮತ್ತು ನೆರವು ಸಿಬ್ಬಂದಿಯ ಆತಿಥ್ಯಕ್ಕಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಸಿದ್ಧತೆ ನಡೆಸಿದೆ. ಅದಕ್ಕಾಗಿ ಊಟ-ತಿಂಡಿಯ ಮೆನುವನ್ನು ಬಿಸಿಸಿಐಗೆ ಕಳುಹಿಸಿತ್ತು.
ಅದರಲ್ಲಿ ಗೋಮಾಂಸ ಖಾದ್ಯಗಳೂ ಇದ್ದವು ಎನ್ನಲಾಗಿದೆ. ಈಚೆಗೆ ಇಂಗ್ಲೆಂಡ್‌ನಲ್ಲಿ ನಡೆದಿದ್ದ ಟೆಸ್ಟ್ ಸರಣಿಯ ಸಂದರ್ಭದಲ್ಲಿ ಭಾರತದ ಆಟಗಾರರು ಬೀಫ್ ಪಾಸ್ತಾ ನಿರಾಕರಿಸಿದ್ದರು. ಹೀಗಾಗಿ ಬಿಸಿಸಿಐ ಗೋಮಾಂಸವನ್ನು ನಿರಾಕರಿಸಿದೆ ಎನ್ನಲಾಗಿದೆ.