ಕೇರಳದಲ್ಲಿ ನಿಫಾ ಆತಂಕ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ನಿಗಾಕ್ಕೆ ನಿರ್ಧಾರ – ಕಹಳೆ ನ್ಯೂಸ್
ಕೇರಳಕ್ಕೆ ಹೊಂದಿಕೊಂಡಿರುವ ದ.ಕ. ಜಿಲ್ಲೆಗೆ ಶಿಕ್ಷಣ, ಚಿಕಿತ್ಸೆ ಮುಂತಾದ ಕಾರಣಕ್ಕೆ ಅನೇಕ ಮಂದಿ ಆಗಮಿಸುತ್ತಿದ್ದು, ಅವರಲ್ಲಿ ರೋಗ ಲಕ್ಷಣ ಕಂಡುಬಂದರೆ ಕೂಡಲೇ ಆರೋಗ್ಯ ಇಲಾಖೆಗೆ ತಿಳಿಸುವಂತೆ ಸೂಚನೆ ನೀಡಲಾಗಿದೆ.
“ದ.ಕ. ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ನಿಫಾ ವೈರಸ್ ಸೋಂಕು ಪ್ರಕರಣ ವರದಿಯಾಗಿಲ್ಲ. ಆದರೂ ಜಿಲ್ಲೆಯಲ್ಲಿ ತೀವ್ರ ನಿಗಾ ವಹಿಸಲಾಗಿದೆ. ಎಲ್ಲ ಮೆಡಿಕಲ್ ಕಾಲೇಜುಗಳು, ಖಾಸಗಿ ಆಸ್ಪತ್ರೆಗಳು, ಐಎಂಎ, ತಾಲೂಕು ಆರೋಗ್ಯಾಧಿಕಾರಿಗಳಿಗೆ ಈ ಕುರಿತು ಈಗಾಗಲೇ ಸುತ್ತೋಲೆ ಕಳುಹಿಸಿದ್ದೇವೆ. ಖಾಸಗಿ ಮೆಡಿಕಲ್ ಕಾಲೇಜು, ಐಎಂಎ ನಡುವಣ ಸಭೆ ನಡೆಸಲಾಗುತ್ತದೆ. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ, ಖಾಸಗಿ ಆಸ್ಪತ್ರೆಗಳಿಗೆ ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಹಾಗೂ ಆಸ್ಪತ್ರೆಗಳಲ್ಲಿ ವಿವಿಧ ಚಿಕಿತ್ಸೆಗಳಿಗಾಗಿ ದಾಖಲಾಗಿರುವ ಅಥವಾ ಚಿಕಿತ್ಸೆಗಾಗಿ ಬರುವ ಯಾವುದೇ ರೋಗಿಗಳಲ್ಲಿ ನಿಫಾ ರೋಗ ಲಕ್ಷಣಗಳು ಕಂಡು ಬಂದರೆ ಈ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ಕೊಡುವಂತೆ ಸೂಚನೆ ನೀಡಲಾಗಿದೆ’ ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಚ್.ಆರ್. ತಿಮ್ಮಯ್ಯ ಅವರು “ಉದಯವಾಣಿ’ಗೆ ತಿಳಿಸಿದ್ದಾರೆ.
ಸೋಂಕಿನ ಲಕ್ಷಣವೇನು ?
ನಿಫಾ ವೈರಸ್ ಸೋಂಕು ತಗಲಿದ ವ್ಯಕ್ತಿಗೆ ಮೊದಲು ಜ್ವರ ಬರುತ್ತದೆ. ತಲೆನೋವು, ವಾಂತಿ, ಉಸಿರಾಟ ತೊಂದರೆ ಕಾಣಿಸುತ್ತದೆ. ಉರಿಯೂತ, ಸ್ನಾಯು ಸೆಳೆತ ಇತ್ಯಾದಿ ಬಾಧೆ ಬರಬಹುದು. ರೋಗಿ ಕೋಮಾ ಸ್ಥಿತಿಗೆ ಜಾರಿ, ಮೃತಪಡುವ ಸಾಧ್ಯತೆಯೂ ಇದೆ.