ನೇತ್ರಾವತಿ ರೌದ್ರಾವತಾರ ಪ್ರವಾಹಕ್ಕೆ ಐವತ್ತು ವರ್ಷ : 1974 ರ ಜುಲೈ 26 ರಂದು ಉಪ್ಪಿನಂಗಡಿ, ಬಂಟ್ವಾಳ ಮಹಾನೆರೆ – ಕಾಕತಾಳೀಯ ಎಂಬಂತೆ 2024 ಜು.26 ಕೂಡ ಶುಕ್ರವಾರವೇ – ಕಹಳೆ ನ್ಯೂಸ್
ಬಂಟ್ವಾಳ, ಉಪ್ಪಿನಂಗಡಿ ಇತಿಹಾಸದಲ್ಲಿ 1974 ರಲ್ಲಿ ಬಂದ ನೆರೆ ಹೆಚ್ಚು ಮಹತ್ವದ್ದಾಗಿದೆ. ಐವತ್ತು ವರ್ಷದ ಹಿಂದೆ ಅಂದರೆ 1974 ರ ಜುಲೈ ತಿಂಗಳಲ್ಲಿ ನೇತ್ರಾವತಿಯ ರೌದ್ರವತಾರಕ್ಕೆ ಬಂಟ್ವಾಳ ದ್ವೀಪವಾಗಿದ್ದಲ್ಲದೆ, ಹಲವಾರು ಮನೆಗಳು ಕುಸಿದ ಘಟನೆಗಳನ್ನು ಹಿರಿಯರು ಮೆಲುಕು ಹಾಕುತ್ತಿದ್ದಾರೆ.
ಉಪ್ಪಿನಂಗಡಿ ಪಟ್ಟಣವು ಅತಿಯಾದ ಪ್ರವಾಹದಿಂದಾಗಿ ಕೊಚ್ಚಿಕೊಂಡುಹೋಯಿತು ಮತ್ತು ಅದರ ನ್ಯಾಯಾಲಯಗಳನ್ನು ಪುತ್ತೂರಿಗೆ ಸ್ಥಳಾಂತರಿಸಲಾಯಿತು . 1974ರಲ್ಲಿಯೂ ತೀವ್ರ ಪ್ರವಾಹ ಉಂಟಾಗಿತ್ತು.ಉಪ್ಪಿನಂಗಡಿ ಈ ಹಿಂದೆ ತಾಲೂಕು ಕೇಂದ್ರವಾಗಿತ್ತು, ಆದರೆ ಮಳೆಗಾಲದಲ್ಲಿ ಭಾರಿ ಪ್ರವಾಹದ ಸಮಸ್ಯೆಯಿಂದಾಗಿ ತಾಲೂಕು ಕೇಂದ್ರವನ್ನು ಪುತ್ತೂರಿಗೆ ಸ್ಥಳಾಂತರಿಸಲಾಯಿತು. ಉಪ್ಪಿನಂಗಡಿ ಪುತ್ತೂರು ತಾಲೂಕಿನ 2ನೇ ದೊಡ್ಡ ನಗರ ಪ್ರದೇಶವಾಗಿದೆ.
1923ರ ನೆರೆಯ ಮಾಹಿತಿ ಭಗವಾನ್ ನಿತ್ಯಾನಂದ ಪುಸ್ತಕ, ಶಿಲಾಕಲ್ಲಿನಲ್ಲಿ ಈಗಲು ಲಭ್ಯವಿದ್ದರೆ,1974 ರ ಜುಲೈ 26 ರಂದು ಬಂದಂತ ನೆರೆಯ ಕಂಡ ಪ್ರತ್ಯಕ್ಷದರ್ಶಿಗಳು ಸಾಕಷ್ಟು ಮಂದಿ ಸಿಗುತ್ತಾರೆ. ಈಗಿನ ತಲೆಮಾರಿಗೂ ಇದರ ಸ್ಪಷ್ಟ ಅರಿವಿದೆ.
ಐವತ್ತು ವರ್ಷಗಳ ಹಿಂದೆ ನೇತ್ರಾವತಿಯಲ್ಲಿ 8 ರಿಂದ 8.5 ಮೀ ನೀರು ತುಂಬಿ ಹರಿಯಿತೆಂದರೆ ಬಂಟ್ವಾಳ ಪೇಟೆಯನ್ನು ನೀರು ಅವರಿಸಿತೆಂದೆ ಹಿರಿಯರ ಲೆಕ್ಕಾಚಾರ.ಆದರೆ ಈಗ 9 ಮೀ.ನಲ್ಲಿನೀರು ತುಂಬಿ ಹರಿದರೂ ಬಂಟ್ವಾಳ ಪೇಟೆಗೆ ನೀರು ನುಗ್ಗಲು ಆರಂಬಿಸುವುದಷ್ಠೆ ಆಗಿರುತ್ತದೆ.ಆದರೆ ಬಂಟ್ವಾಳದ ಸುತ್ತಮುತ್ತಲಿನ ತಗ್ಗುಪ್ರದೇಶಗಳನ್ನು ನೀರು ಅವರಿಸುತ್ತದೆ.
ಕಳೆದ ಜು.19ರಂದು ಅಪಾಯದಮಟ್ಟವನ್ನು ದಾಟಿ ನೀರು ಹರಿಯಿತಾದರೂ ಬಂಟ್ವಾಳ ಪೇಟೆಗೆ ನೀರು ನುಗ್ಗಲಿಲ್ಲ,ಯಾಕೆಂದರೆ ನೇತ್ರಾವತಿಯಲ್ಲಿ ನಡೆಯುವ ಮರಳುಗಾರಿಕೆಯಿಂದಾಗಿ ಅಳ,ಅಗಲವಾಗಿರುವುದರಿಂದ ನೀರು ತುಂಬಿ ಹರಿಯಲು ಘಟ್ಟಪ್ರದೇಶದಿಂದ ಸಾಕಷ್ಟು ನೀರುಹರಿದು ಬರಬೇಕಾಗುತ್ತದೆ.1974ರ ಜು.26 ಕ್ಕೆ ವಾರದ ಮೊದಲೇ ನೇತ್ರಾವತಿ ಮೈದುಂಬಿ ಹರಿಯುವ ಮೂಲಕ ಐವತ್ತು ವರ್ಷದ ಹಿಂದಿನ ತನ್ನ ರೌದ್ರಾವತಾರವನ್ನು ತೋರಿಸಲು ಯತ್ನಿಸುತ್ತಿದೆ.
1974ರಲ್ಲಿ ಬಂದಿದ್ದ ನೆರೆಯ ಪ್ರಮಾಣಕ್ಕೆ ಬಂಟ್ವಾಳವೆಂಬ ಪುಟ್ಟ ಊರು ಮುಳುಗಡೆಯಾಗಿ ದ್ವೀಪವಾಗಿ ಗೋಚರಿಸಿತ್ತು. ಪೇಟೆಯಲ್ಲಿದ್ದ ಅಂಗಡಿ, ಮನೆಗಳು, ಜಾನುವಾರು, ಕೃಷಿ ಎಲ್ಲವೂ ನೀರಿನಲ್ಲಿ ಕೊಚ್ಚಿ ಹೋಗಿತ್ತು. ಪರಿಣಾಮ ಬಂಟ್ವಾಳದ ಜನತೆ ದಿಕ್ಕು ಕಾಣದೆ ಕಂಗಾಲಾಗಿದ್ದರು.
ಹಿರಿಯರು ಶ್ರಮಪಟ್ಟು ನಿರ್ಮಿಸಿದ ಮಣ್ಣಿನ ಗೋಡೆಯ ಮನೆಗಳು ನೀರಿನ ರಭಸಕ್ಕೆ ಕಣ್ಣಮುಂದೆ ಕುಸಿಯುವ ,ಸೊತ್ತುಗಳು ನೀರಿನಲ್ಲಿ ಕೊಚ್ಚಿಹೋಗುವ ದೃಶ್ಯಗಳು ಈಗಲು ನೆರೆಯ ಸಂದರ್ಭಗಳಲ್ಲೇ ಕಣ್ಣಮುಂದೆ ಬಂದು ನಿಲ್ಲುತ್ತವೆ ಎಂದು ಹಿರಿಯರೋರ್ವರು ನೆನಪಿಸಿದರು.
ಆ ಸಂದರ್ಭ ಬಂಟ್ವಾಳ ಭಾಮಿ ಜಂಕ್ಷನ್ ದಾಟಿ ನೀರು ಮುನ್ನಗಿತ್ತು.ನಾಲ್ಕು ದಿಕ್ಕುಗಳಿಂದಲೂ ನೀರು ಪೇಟೆಗೆ ನುಗ್ಗಿತ್ತು.ಎಲ್ಲಿ ನೋಡಿದರೂ,ಎತ್ತ ಸಾಗಿದರೂ ನೀರೇ ನೀರಾಗಿತ್ತು.ಸುರಕ್ಷಿತ ಸ್ಥಳಕ್ಕೆ ತೆರಳಲು ಪರ್ಯಾಯ ವ್ಯವಸ್ಥೆ ಇಲ್ಲದೆ ಸಂತ್ರಸ್ಥರೆಲ್ಲರು ಹಳೆ ಪ್ರವಾಸಿಮಂದಿರವೇ ಕಾಳಜಿ ಕೇಂದ್ರವನ್ನಾಗಿ ಆಶ್ರಯಿಸಬೇಕಾಯಿತು. ಅಲ್ಲಿಗೂ ನೀರು ನುಗ್ಗುವ ಅಪಾಯ ಉಂಟಾಗಿತ್ತಾದರೂ ಕೊನೆಗಳಿಗೆಯಲ್ಲಿ ನೀರು ಇಳಿಮುಖವಾಗಿತ್ತು.ಇನ್ನೊಂದೆಡೆ ವಿದ್ಯುತ್ ಇಲ್ಲದೆ ಕತ್ತಲು ಅವರಿಸಿತ್ತು.
ಪುಟ್ಟಮಕ್ಕಳಿಂದ ಹಿಡಿದು ವೃದ್ದರವರೆಗೂ ನೂರಾರು ಮಂದಿ ಸಂತ್ರಸ್ಥರು ಈ ಪ್ರವಾಸಿಮಂದಿರದಲ್ಲಿ ವಾರಗಟ್ಟಲೇ ನಿಲ್ಲಬೇಕಾಯಿತು.
ನೇತ್ರಾವತಿಯ ಅರ್ಭಟ ಕಡಿಮೆಯಾಗಿ ಸಂಪೂರ್ಣ ಇಳಿಮುಖವಾಗುವರೆಗೂ ರಸ್ತೆಗೆ ಇಳಿಯುವಂತಿಲ್ಲ, ಸುರಕ್ಷಿತ ಸ್ಥಳಕ್ಕೆ ತೆರಳಲು ಪರ್ಯಾಯ ರಸ್ತೆಯ ವ್ಯವಸ್ಥೆಯು ಇಲ್ಲದೆ ಜನತೆ ಪರದಾಡಬೇಕಾಗಿತ್ತು.
2024 ಜು.26 ಕ್ಕೆ 1974 ರ ನೆರೆಗೆ ಪೂರ್ತಿ ಐವತ್ತು ವರ್ಷ ತುಂಬುತ್ತದೆ.ಈ ವರ್ಷ ಆ ದಿನಾಂಕಕ್ಕೆ ವಾರದ ಮೊದಲೇ ನರೆಯ ಭೀತಿ ಸೃಷ್ಠಿಯಾಗಿದೆ.1974 ರಲ್ಲಿ ಬಂದ ನೆರೆಯ ಪ್ರಮಾಣದಲ್ಲಿ ಜು.19 ರಂದು ಬಾರದಿದ್ದರೂ, ಅಂದಿನ ನೆನಪು ಮರುಕಳಿಸಿದೆ.
ವಿಶೇಷವೆಂದರೆ 1974 ಜು.26 ಶುಕ್ರವಾರವಾಗಿತ್ತು. ಕಾಕತಾಳೀಯ ಎಂಬಂತೆ 2024 ಜು.26 ಕೂಡ ಶುಕ್ರವಾರವೇ ಆಗಿದೆ. ಅಂದು ಬಂಟ್ವಾಳದ ನರೇಂದ್ರ ಆಚಾರ್ಯ ಅವರು ತೆಗೆದಿದ್ದ ಫೊಟೋಗಳು ಕಳೆದ ಒಂದು ವಾರದಿಂದ ಸಾಮಾಜಿಕ ಜಾಲತಾಣದಲ್ಲು ವ್ಯಾಪಕವಾಗಿ ವೈರಲ್ ಆಗುತ್ತಿದ್ದು, ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ.