ಉಡುಪಿ ಅಕ್ರಮ ಪ್ರಾರ್ಥನಾ ಮಂದಿರ, ಕಟ್ಟಡಗಳ ನಿರ್ಮಾಣಕ್ಕೆ ಸಹಕರಿಸಿದ ಅಧಿಕಾರಿಗಳನ್ನು ಅಮಾನತು ಮಾಡಿ: ಜಿಲ್ಲಾಧಿಕಾರಿಗಳಿಗೆ ಶಾಸಕ ಯಶ್ ಪಾಲ್ ಸುವರ್ಣ ಆಗ್ರಹ – ಕಹಳೆ ನ್ಯೂಸ್
ನ್ಯಾಯಮೂರ್ತಿಗಳ ನೇತೃತ್ವದ ಆಯೋಗದ ತನಿಖೆಯ ಹಿನ್ನೆಲೆಯಲ್ಲಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರನ್ನು ಜಿಲ್ಲಾಧಿಕಾರಿಗಳು ಅಮಾನತು ಮಾಡಿದಂತೆ ಅಕ್ರಮ ಪ್ರಾರ್ಥನಾ ಮಂದಿರ, ರೆಸಾರ್ಟ್ ನಿರ್ಮಾಣಕ್ಕೆ ಕಾನೂನುಬಾಹಿರವಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಹಕಾರ ನೀಡಿರುವ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಿ ತನಿಖೆ ನಡೆಸುವಂತೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
ಉಡುಪಿ ನಗರಸಭೆ ವ್ಯಾಪ್ತಿಯ ಚಿಟ್ಪಾಡಿಯಲ್ಲಿ ಅಕ್ರಮವಾಗಿ ನಿರ್ಮಿಸುತ್ತಿದ್ದ ಪ್ರಾರ್ಥನಾ ಮಂದಿರಕ್ಕೆ ನಿಯಮಬಾಹಿರವಾಗಿ ಅನುಮತಿ ನೀಡಿ, ನ್ಯಾಯಾಲಯಕ್ಕೂ ತಪ್ಪು ಮಾಹಿತಿ ನೀಡಿದ ನಗರಸಭೆಯ ಅಧಿಕಾರಿ ಹಾಗೂ ಬಡನಿಡಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಕ್ರಮ ರೆಸಾರ್ಟ್ ನಿರ್ಮಾಣಕ್ಕಾಗಿ ಭೂ ಪರಿವರ್ತನೆ ಹಾಗೂ ವಲಯ ಪರಿವರ್ತನೆಗೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, ಸಾರ್ವಜನಿಕರ ವಿರೋಧದ ನಡುವೆಯೂ ಕಾನೂನು ಬಾಹಿರವಾಗಿ ಅಕ್ರಮಕ್ಕೆ ಸಹಕಾರ ನೀಡಿದ ನಗರಾಭಿವೃದ್ದಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ತನಿಖೆಗೆ ಆಗ್ರಹಿಸಿದ್ದರೂ ಈವರೆಗೆ ಯಾವುದೇ ಕ್ರಮವಹಿಸಿಲ್ಲ.
ಜಿಲ್ಲಾಧಿಕಾರಿಗಳು ಅಕ್ರಮ ಕಾನೂನುಬಾಹಿರ ಕಟ್ಟಡ ನಿರ್ಮಾಣ ಹಾಗೂ ಭ್ರಷ್ಟಾಚಾರ ನಿಯಂತ್ರಿಸಲು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ವಹಿಸುವಂತೆ ಆಗ್ರಹಿಸಿದ್ದಾರೆ.